Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

‘ಕಲ್ಲಡ್ಕ ಪ್ರಭಾಕರ್‌ ಭಟ್‌ ಶಾಲೆಗೆ ನೀಡಿದ್ದ ಅನುದಾನ ವಾಪಸ್‌’

ಮಡಿಕೇರಿ: ‘ಕಾನೂನು ಬಾಹಿರವಾಗಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ನೇತೃತ್ವದ ಎರಡು ಶಾಲೆಗಳಿಗೆ ಈವರೆಗೆ ನೀಡಿರುವ ಅನುದಾನವನ್ನು ವಾಪಸ್‌ ಪಡೆಯಲು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದು ಸಚಿವ ರಮಾನಾಥ್‌ ರೈ ಇಲ್ಲಿ ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ದ್ವೇಷ ರಾಜಕಾರಣಕ್ಕಾಗಿ ಅನುದಾನ ಕಡಿತ ಮಾಡಲಾಗಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಹಣ ದುರುಪಯೋಗದ ಮಾಹಿತಿ ಅರಿತು ಇಲಾಖೆ ಕ್ರಮ ಕೈಗೊಂಡಿದೆ. ಕೊಲ್ಲೂರು ಮೂಕಾಂಬಿಕಾ ದೇಗುಲದ ಆಡಳಿತ ವ್ಯಾಪ್ತಿಯನ್ನೂ ಮೀರಿ ಎರಡು ಸಂಸ್ಥೆಗಳಿಗೆ ಅನುದಾನ ಸಂದಾಯವಾಗುತ್ತಿತ್ತು’ ಎಂದು ಸ್ಪಷ್ಟನೆ ನೀಡಿದರು.

‘ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಅನುದಾನವನ್ನು ವಿದ್ಯಾಸಂಸ್ಥೆಗಳಿಗೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈವರೆಗೂ ನೀಡಿರುವ ಅನುದಾನವನ್ನು ವಾಪಸ್‌ ಪಡೆದು, ರಾಜ್ಯದ ಸಣ್ಣ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುವುದು. ಪ್ರಭಾಕರ್‌ ಭಟ್‌ ಸಾಮಾನ್ಯ ವ್ಯಕ್ತಿಯಲ್ಲ; ಆರ್ಥಿಕವಾಗಿ ಸಬಲರಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಮಾತ್ರ ಸಕ್ರಿಯರಾಗಿಲ್ಲ; ಅವರು ರಿಯಲ್‌ ಎಸ್ಟೇಟ್ ನಡೆಸುವುದು ಎಲ್ಲರಿಗೂ ಗೊತ್ತು’ ಎಂದು ಹೇಳಿದರು.

‘ರಾಜ್ಯದಲ್ಲಿ ಸಾವಿರಾರು ಶಾಲೆಗಳಿಗೆ ಬಿಸಿಯೂಟ ನೀಡಲಾ ಗುತ್ತಿದ್ದು, ಪ್ರಭಾಕರ ಭಟ್ ನೇತೃತ್ವದ ಎರಡು ಶಾಲೆಯ ಮಕ್ಕಳಿಗೆ ಬಿಸಿಯೂಟ ನೀಡಲು ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ’ ಎಂದರು.

‘ಜನರಿಗೆ ಎಲ್ಲರ ಯೋಗ್ಯತೆಯೂ ಗೊತ್ತು. ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದಗೌಡ ಅವರಂತಹ ರಾಜಕಾರಣಿ ನಾನಲ್ಲ’ ಎಂದರು.

* ಅದು ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರದ್ದಾಗಿರುವ ಕಾರಣಕ್ಕೆ ನೀವು ಕೇಳುತ್ತೀರಿ. ಬೇರೆಯವರದು ಆಗಿದ್ದರೇ ಕೇಳುತ್ತಿದ್ದೀರಾ? ಕಾನೂನು ಎದುರು ಎಲ್ಲರೂ ಸಮಾನರು

–ಸಿದ್ದರಾಮಯ್ಯ, ಮುಖ್ಯಮಂತ್ರಿ

No Comments

Leave A Comment