Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕಿತ್ತಿಟ್ಟ ಪುಟಗಳ ಭರ್ತಿಗೊಳಿಸುವ ಕಾವ್ಯರ “ಕಾವ್ಯ’…

ಉಡುಪಿ: ಪತ್ತೆದಾರಿ ಕಾದಂಬರಿಯನ್ನು ಕಾಲೇಜಿನಲ್ಲಿ ಓದುವಾಗ ಅದರ ತಿರುಳಿನ ಒಂದು ಪುಟಗಳನ್ನು ಯಾರೋ ಕಿತ್ತಿಟ್ಟುಕೊಳ್ಳುತ್ತಿದ್ದರು. ಅದೇ ರೀತಿ ಹೆಣ್ಣು, ಅಸಹಾಯಕರ ದನಿಯಂತಹ ಪುಟಗಳನ್ನು ಕಿತ್ತಿಟ್ಟು ಕೊಂಡಂತೆ ಭಾಸವಾಗುತ್ತದೆ. ನಾವು ಬರೆಯುತ್ತಿರುವುದು ಆ ಕಿತ್ತಿಟ್ಟ ಪುಟಗಳನ್ನು ಭರ್ತಿಗೊಳಿಸಲು ಎಂದು ನ್ಯೂಜೆರ್ಸಿಯ ಯುವ ಲೇಖಕಿ ಕಾವ್ಯಾ ಕಡಮೆ ನಾಗರಕಟ್ಟೆ ಅಭಿಪ್ರಾಯಪಟ್ಟರು.

ಅವರು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಕೊಡಮಾಡಿದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಪಂಜರದಲ್ಲಿರುವ ಹಕ್ಕಿಗಿಂತ ಸ್ವತಂತ್ರವಾಗಿರುವ ಹಕ್ಕಿಯ ಹಾಡು ಮಹತ್ವ ಪೂರ್ಣ ಎಂದು ತಿಳಿದಿದ್ದೇವೆ. ಅದೇ ರೀತಿ ಅಮೆರಿಕದ ವಿದ್ವಾಂಸ ವರ್ಜಿನಿಯ ಮಹಿಳೆಯರ ಬರೆಹ ಬರಬೇಕಾದರೆ ಆರ್ಥಿಕ ಸ್ವಾತಂತ್ರ್ಯ ಮತ್ತು ಏಕಾಂತ (ಖಾಸಗಿ) ಸ್ವಾತಂತ್ರ್ಯ ಬೇಕೆನ್ನುತ್ತಾನೆ. ನಾವೇ ಕಟ್ಟಿದ ಅಥವಾ ಬೇರೆಯವರು ಕಟ್ಟಿದ ಗೋಡೆಗಳ ನಡುವೆ ಬಂಧಿತನಾದ ಮನುಷ್ಯ ಹೊರಗಿ
ನವನಿಗಿಂತ ಭಿನ್ನವಾಗಿ ಕಾಣಬಹುದೆ? ನನ್ನ ತಾಯಿ ಇಂತಹ ಸ್ವಾತಂತ್ರÂಗಳಿಲ್ಲದೆ ಬರೆಹಗಳನ್ನು ಸಾಧಿಸಿದ್ದನ್ನು ನೋಡುವಾಗ ಇದೆಲ್ಲಾ ಕಟ್ಟುಕತೆಗಳಂತೆ ಕಾಣುತ್ತದೆ ಎಂದರು.

ಅಮೆರಿಕದಲ್ಲಿರುವ ಜನಾಂಗೀಯ ದ್ವೇಷವನ್ನು ಕಂಡು ನಾಗರಿಕ ಸಮಾಜ ಅವರವರೇ ಮಾಡಿಕೊಂಡದ್ದೆನ್ನುತ್ತಾರೆ. ಅದೇ ರೀತಿ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದೂ ಫ್ಯಾನ್ಸಿ ಆಗಿ ಕಾಣುತ್ತದೆ. ನಾವು ಇದೇ ರೀತಿ ಕಂಡು ಸುಮ್ಮನಾಗುತ್ತಿದ್ದೇವೆ ಎಂದು ಕಾವ್ಯ ಹೇಳಿದರು.

ದ್ವೇಷ ಭಾಷೆ-ಪ್ರೀತಿ ಭಾಷೆ
ಪ್ರಶಸ್ತಿ ಪುರಸ್ಕೃತ “ಜೀನ್ಸ್‌ ತೊಟ್ಟ ದೇವರು’ ಕೃತಿಯನ್ನು ಬಿಡುಗಡೆಗೊಳಿಸಿದ ಸಾಹಿತಿ ವೈದೇಹಿಯವರು, ಕಡೆಂಗೋಡ್ಲು ಶಂಕರ ಭಟ್ಟರ ಕತೆಗಳಲ್ಲಿದ್ದ ಸ್ತ್ರೀಕೇಂದ್ರಿತ ವಿಚಾರಗಳು ನನ್ನ ಮೇಲೂ ಪರಿಣಾಮ ಬೀರಿವೆ. ನಾವು ದ್ವೇಷ ಭಾಷೆಯ ಬದಲು ಪ್ರೀತಿ ಭಾಷೆ ಯನ್ನು ಬೆಳೆಸಬೇಕಾಗಿದೆ ಎಂದರು.

ಎದ್ದು ಕಾಣುವ “ಸಾವು’
“ಕಡೆಂಗೋಡ್ಲು ಕಾವ್ಯದ ದಾರಿ’ ವಿಷಯ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕಿ ಡಾ|ಮಹೇಶ್ವರಿ ಯು. ಅವರು ಕಡೆಂಗೋಡ್ಲು ಅವರ ಕೃತಿಗಳಲ್ಲಿ ಸಾವಿನ ವಿಷಯ ಎದ್ದು ಕಾಣುತ್ತದೆ. ವಸ್ತು ಆಯ್ಕೆಯಲ್ಲಿ ತಾತ್ವಿಕತೆ ಕಂಡು  ಬಂದು ದಾರ್ಶನಿಕರಾಗಿ ಕಾಣುತ್ತಾರೆಂದರು.

ಬರೆದಂತೆ ಬದುಕಿದರೆ…
ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಗಾಂಧೀವಾದಿಯಾಗಿದ್ದ ಕಡೆಂಗೋಡ್ಲು ಅವರು ಪತ್ರಿಕೋದ್ಯಮವನ್ನು ಜೀವನದ ಅವಿಭಾಜ್ಯ ಅಂಗವಾಗಿರಿಸಿಕೊಂಡಿದ್ದರು. ಬರೆಹಕ್ಕೂ, ಬದುಕಿಗೂ ಸಮನ್ವಯ ಮಾಡಿಕೊಂಡಿದ್ದರು. ಬರೆದಂತೆ ಬದುಕಿದರೆ ಮಾತ್ರ ವ್ಯಕ್ತಿತ್ವಕ್ಕೆ ಮೌಲ್ಯ ಬರುತ್ತದೆ ಎಂದರು.

ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್‌, ಕಡೆಂಗೋಡ್ಲು ಶಂಕರ ಭಟ್ಟರ ಪುತ್ರ ಡಾ|ಕೆ.ಎಸ್‌.ಭಟ್‌ ಶುಭ ಕೋರಿದರು. ಕೇಂದ್ರದ ಸಂಯೋಜನಾಧಿಕಾರಿ ವರದೇಶ್‌ ಹಿರೇಗಂಗೆ ಸ್ವಾಗತಿಸಿ ಸಹ ಸಂಯೋಜನಾಧಿಕಾರಿ ಡಾ| ಅಶೋಕ್‌ ಆಳ್ವ ವಂದಿಸಿದರು. ಭಾÅಮರಿ ಶಿವಪ್ರಕಾಶ್‌ ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment