Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಗುಜರಾತ್ ಪ್ರವಾಹ: 25 ಸಾವಿರಕ್ಕೂ ಅಧಿಕ ಮಂದಿ ರಕ್ಷಣೆ, ಸಾವಿನ ಸಂಖ್ಯೆ 73ಕ್ಕೆ ಏರಿಕೆ

ಅಹ್ಮದಾಬಾದ್: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಜರಾತ್ ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯ ಸೈನಿಕರು ಈ ವರೆಗೂ ಸುಮಾರು 25 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

ಸತತ ಮಳೆ ಹಾಗೂ ಪ್ರವಾಹದಿಂದಾಗಿ ಗುಜರಾತ್ ನ ಸುಮಾರು 20ಕ್ಕೂ ಅಧಿಕ ಹೆದ್ದಾರಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಗುಜರಾತ್ ನ ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗುಜರಾತ್ ನ ಬನಸ್ಕಾಂತ, ಸಬರ್ಕಾಂತ, ಆನಂದ್, ಪಟಾನ್ ಮತ್ತು ವಲ್ಸಾದ್ ಜಿಲ್ಲೆಗಳ ಬಹುತೇಕ ಭಾಗಗಳು ಜಲಾವೃತ್ತವಾಗಿವೆ. ಬನಸ್ಕಾಂತ ಜಿಲ್ಲೆಯೊಂದರಲ್ಲೇ ಸುಮಾರು 11 ಸಾವಿರ ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಅಲ್ಲಲ್ಲಿ ತೆರಯಲಾಗಿರುವ ಗಂಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಆಹಾರ ಮತ್ತು ನೀರಿನ ಪೂರೈಕೆ ಮಾಡಲಾಗುತ್ತಿದೆ.

ಉತ್ತರ ಗುಜರಾತ್ ನ ಸೌರಾಷ್ಟ್ರದಲ್ಲಿ ಪ್ರವಾಹ ಮುಂದುವರೆದಿದ್ದು, ಸಾಬರಮತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಈ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ರಾಜಸ್ತಾನದ ದಾಂತಿವಾಡ, ಸಿಪು ಮತ್ತು ದರೋಯಿ ಡ್ಯಾಂಗಳು ಭರ್ತಿಯಾಗುತ್ತಿದ್ದು, ಡ್ಯಾಂಗಳಿಂದ ಭಾರಿ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಉತ್ತರ ಗುಜರಾತ್ ನ ಬಹುತೇಕ ಜಿಲ್ಲೆಗಳಲ್ಲಿ ಎನ್ ಡಿಆರ್ ಎಫ್ ತಂಡದ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ 25ಕ್ಕೂ ಹೆಚ್ಚು ಸೇನಾ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ನಿನ್ನೆಯಷ್ಟೇ ಸೇನಾ ಸಿಬ್ಬಂದಿ ರಾಜ್ ಕೋಟ್ ನ ನಾನಮಾತ್ರ ಗ್ರಾಮದಲ್ಲಿ ಆಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿ ಪ್ರವಾಹದಲ್ಲಿ ಸಿಲುಕಿದ್ದ ಓರ್ವ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಏರ್ ಲಿಫ್ಟ್ ಮಾಡಿದ್ದರು.

ಪ್ರವಾಹದ ಕಾರಣ ಇಬ್ಬರು ಮಹಿಳೆಯರು ಸಂಕಷ್ಟದ ಸ್ಥಿತಿಯಲ್ಲಿದ್ದು ಅವರನ್ನು ತಕ್ಷಣ ತೆರವುಗೊಳಿಸಲು ನೆರವು ಬೇಕಾಗಿದೆ ಎಂಬ ಸಂದೇಶದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯೋನ್ಮುಖವಾದ ವಾಯುಪಡೆಯ ಚೇತಕ್ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿತ್ತು. ಆ ಇಬ್ಬರು ಮಹಿಳೆಯರಲ್ಲಿ ಓರ್ವ ಮಹಿಳೆ ಅಷ್ಟರಲ್ಲೇ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದರೆ. ಕೂಡಲೇ ಹೆಲಿಕಾಪ್ಟರ್‌ನಲ್ಲಿ ಬಾಣಂತಿ ಹಾಗೂ ಎರಡು ನವಜಾತ ಅವಳಿ ಶಿಶುಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿ, ಅಲ್ಲಿ ಸಿದ್ಧವಾಗಿದ್ದ ವೈದ್ಯಕೀಯ ತಂಡಕ್ಕೆ ಹಸ್ತಾಂತರಿಸಲಾಗಿದೆ. ಬಳಿಕ ಗ್ರಾಮಕ್ಕೆ ಮರಳಿ ಬಂದ ಹೆಲಿಕಾಪ್ಟರ್, ಅಲ್ಲಿ ನೆರವಿಗಾಗಿ ಕಾಯುತ್ತಿದ್ದ ಗರ್ಭಿಣಿಯನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ.

ಗುಜರಾತ್‌ನಲ್ಲಿ ಜೂನ್ 1ರಿಂದ ಮಳೆ ಸಂಬಂಧಿಸಿದ ಘಟನೆಯಿಂದ ಮೃತಪಟ್ಟವರ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು, ಜುಲೈ 20ರ ಬಳಿಕ 7 ಮಂದಿ ಸಾವನ್ನಪ್ಪಿದ್ದಾರೆ. 900ಕ್ಕೂ ಹೆಚ್ಚು ಜಾನುವಾರುಗಳು ನೆರೆ ನೀರಿನಲ್ಲಿ ಕೊಚ್ಚಿಹೋಗಿವೆ ಅಥವಾ ಸಾವನ್ನಪ್ಪಿವೆ. ನೆರೆ ಹಾವಳಿಯಿಂದ ತತ್ತರಿಸಿರುವ ಪ್ರದೇಶದಲ್ಲಿ ಎನ್‌ಡಿಆರ್‌ಎಫ್, ವಾಯುಪಡೆ, ಸೇನೆ ಮತ್ತು ಇತರ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

 

No Comments

Leave A Comment