Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಗಾಂಧೀಜಿಯನ್ನು 1944ರಲ್ಲಿ ಹತ್ಯೆಯಿಂದ ಪಾರು ಮಾಡಿದ್ದ ಭಿಲಾರೆ ವಿಧಿವಶ

ಪುಣೆ : ಮಹಾತ್ಮಾ ಗಾಂಧೀಜಿಯವರನ್ನು 1944ರಲ್ಲಿ ಪಂಚಾಗ್ನಿಯಲ್ಲಿ  ನತ್ತೂರಾಮ್‌ ಗೋಡ್ಸೆ ಯಿಂದ ನಡೆದ ಹತ್ಯಾ ದಾಳಿಯಲ್ಲಿ ಪಾರುಮಾಡಿದ್ದ  ಭಿಲಾರೆ ಗುರೂಜಿ ಎಂದೇ ಖ್ಯಾತರಾಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭಿಕು ದಾಜಿ ಭಿಲಾರೆ ನಿನ್ನೆ ಬುಧವಾರ ತಮ್ಮ 98ರ ಹರೆಯದಲ್ಲಿ  ಹಿಲ್‌ ಸ್ಟೇಶನ್‌ ಸಮೀಪದ ಭಿಲಾರೆಯಲ್ಲಿ ನಿಧನ ಹೊಂದಿದರು.

ಸಣ್ಣ ಪುಸ್ತಿಕೆಯ ರೂಪದಲ್ಲಿ ಪ್ರಕಟವಾಗಿರುವಂತೆ ಅನೇಕ ಲೇಖಕರಿಗೆ ನೀಡಿರುವ ಸಂದರ್ಶನದಲ್ಲಿ ಭಿಲಾರೆ ಹೀಗೆ ಹೇಳಿದ್ದರು :

” ಪಂಚಾಗ್ನಿಯಲ್ಲಿ ನಡೆಯುತ್ತಿದ್ದ ಮಹಾತ್ಮಾ ಗಾಂಧೀಜಿಯವರ ಪ್ರಾರ್ಥನಾ ಸಭೆಗೆ ಎಲ್ಲರಿಗೂ ಪ್ರವೇಶವಿತ್ತು. ಅಂದು ಮಹಾತ್ಮಾ ಗಾಂಧೀಜಿಯವರೊಂದಿಗೆ ಅವರ ಸಹವರ್ತಿಗಳಾಗಿದ್ದ ಉಷಾ ಮೆಹ್ತಾ, ಪ್ಯಾರೇಲಾಲ್‌, ಅರುಣಾ ಅಸಫ್ ಅಲಿ ಮತ್ತು ಇತರರು ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದರು…”

”…ಆಗ ಚೂರಿ ಹಿಡಿದುಕೊಂಡು ಗಾಂಧೀಜಿ ಸಮೀಪಕ್ಕೆ ಮುನ್ನುಗ್ಗಿ ಬಂದ ಗೋಡ್ಸೆ ‘ನನಗೆ ನಿಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದಿದೆ’ ಎಂದು ಹೇಳಿದ. ಆಗಲೇ ಮುಂದಾಗಲಿದ್ದ ಅನಾಹುತವನ್ನು ಅರಿತ ನಾನು ಆತನನ್ನು ತಡೆದು ಆತನ ಕೈಯನ್ನು ತಿರುಪಿ ಆತನ ಕೈಯಲ್ಲಿದ್ದ ಚೂರಿಯನ್ನು ಕಸಿದು ಕೊಂಡೆ. ಆದರೆ ಘಟನೆಯ ಬಳಿಕ ಗಾಂಧೀಜಿಯವರು ಗೋಡ್ಸೆಯನ್ನು ಹೋಗಬಿಟ್ಟರು’ ಎಂದು ಭಿಲಾರೆ ವಿವರಿಸಿದ್ದರು.

ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ತಮ್ಮ ಬಳಿ ಇರಿಸಿಕೊಂಡಿರುವ ದಾಖಲೆಗಳ ಪ್ರಕಾರ ಅಂದು ಗೋಡ್ಸೆಯ ಮೇಲೆ ಭಿಲಾರೆ ಮತ್ತು ಲಾಜ್‌ ಮಾಲಕ ಮಣಿಶಂಕರ್‌ ಪುರೋಹಿತ್‌ ಎಂಬವರು ಎರಗಿ ಗಾಂಧಿ ಹತ್ಯೆಯನ್ನು ತಪ್ಪಿಸಿದ್ದರು.

ಭಿಲಾರೆ ಅವರು ಜನಿಸಿದ್ದು 1919ರ ನವೆಂಬರ್‌ 26 ರಂದು. ಕ್ರಾಂತಿಕಾರಿ ನಾನಾ ಪಾಟೀಲ್‌ ಮತ್ತು ಇತರರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾತಾರಾ ಜಿಲ್ಲೆಯಲ್ಲಿ ನಡೆಸುತ್ತಿದ್ದ ಪರ್ಯಾಯ ಸರಕಾರದ ಆಂದೋಲನದಲ್ಲಿ ಭಿಲಾರೆ ಸಕ್ರಿಯರಾಗಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಬಿಲಾರೆ ಅವರು ರಾಜ್ಯ ವಿಧಾನಸಭೆಯಲ್ಲಿ ಜಾವಳಿ ಕ್ಷೇತ್ರವನ್ನು 18 ವರ್ಷಗಳ ಕಾಲ ಪ್ರತಿನಿಧಿಸಿದ್ದರು.

ಭಿಲಾರೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನಿನ್ನೆ ಬುಧವಾರ ವಿವಿಧ ಪಕ್ಷಗಳ ನಾಯಕರು ಹಾಗೂ ಭಾರೀ ಜನಸೋಮದ ಉಪಸ್ಥಿತಿಯಲ್ಲಿ ನಡೆಸಲಾಯಿತು.

No Comments

Leave A Comment