Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಬಂತು ಮಾರ್ಕೋಸ್!

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತಿ ಮೀರಿರುವ ಭಯೋತ್ಪಾದನಾ ಚಟುವಟಿಕೆ ಮಟ್ಟಹಾಕಲು ಕಠಿಣ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ಉಗ್ರ ನಿಗ್ರಹ ಕಾರ್ಯಕ್ಕೆ ಮತ್ತಷ್ಟು ಬಲ ನೀಡುವ  ಉದ್ದೇಶದಿಂದ ನೌಕಾಪಡೆಯ ಅತ್ಯುನ್ನತ ಶ್ರೇಣಿ ಮಾರ್ಕೋಸ್ ಕಮಾಂಡೊಗಳನ್ನು (ಮರೀನ್ ಕಮಾಂಡೋಸ್-ಮಾರ್ಕೋಸ್) ನಿಯೋಜಿಸಿದೆ.ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನದಿಗಳ ಗುಂಟ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಲು ಲೆಫ್ಟಿನೆಂಟ್ ಕಮಾಂಡರ್ ನೇತೃತ್ವದಲ್ಲಿ ಮೂವತ್ತು ಮಾರ್ಕೋಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದ್ದು,  ಝೇಲಂ ಸಹಿತ ಕಾಶ್ಮೀರದ ಹಲವು ನದಿಗಳಲ್ಲಿ ಗಸ್ತು ತಿರುಗಿ, ಉಗ್ರರನ್ನು ಸದೆಬಡಿಯಲು ಈ ಕಮಾಂಡೊ ಪಡೆ ಸಮರ್ಥವಾಗಿದೆ.

ನೀರೊಳಗೆ ಈಜಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಈ ಮಾರ್ಕೋಸ್ ಪಡೆ  ಹೊಂದಿದ್ದು, ಇದರಿಂದ ಭಯೋತ್ಪಾದಕರು ಭಾರತಕ್ಕೆ ನದಿಗಳ ಮೂಲಕ ಒಳನುಸುಳಲು ಸಾಧ್ಯವಾಗುವುದಿಲ್ಲ.ನದಿಗಳ ಸುತ್ತ ಪೊದೆಗಳನ್ನೊಳಗೊಂಡ ಸಣ್ಣ ಅರಣ್ಯವಿದ್ದು, ಇಲ್ಲಿ ಉಗ್ರರು ಶಸ್ತ್ರಾಸ್ತ್ರ ಸಮೇತ ತಲೆಮರೆಸಿಕೊಳ್ಳುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ರೈಫಲ್ ಪಡೆಯೊಂದಿಗೆ ಮಾರ್ಕೋಸ್ ಪಡೆ ಕಾರ್ಯಾಚರಣೆ ನಡೆಸುತ್ತಿದೆ.

ಸಮುದ್ರ ಮಾರ್ಗ ಅನುಸರಿಸುವ ಉಗ್ರರು

ಭೂ ಮಾರ್ಗವಾಗಿ ಬಂದರೆ ಭದ್ರತಾ ಪಡೆಗಳಿಗೆ ಸುಲಭವಾಗಿ ಸಿಕ್ಕಿಬೀಳಬಹುದು ಎಂಬ ಆತಂಕದಿಂದ ಉಗ್ರರು ನದಿ, ಸಮುದ್ರ ಮೂಲಕ ಭಾರತ ಪ್ರವೇಶಿಸಿ ದಾಳಿ ನಡೆಸಲು ಯತ್ನಿಸಿದ್ದಾರೆ.

ಈ ಹಿಂದೆ 2008ರ ಮುಂಬೈ ದಾಳಿ  ವೇಳೆಯಲ್ಲೂ ಉಗ್ರ ಅಜ್ಮಲ್ ಕಸಬ್ ಸಹಿತ 10 ಉಗ್ರರು ಸಣ್ಣ ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಮುಂಬೈ ತಲುಪಿ ದಾಳಿ ನಡೆಸಿದ್ದರು. 2008ರ ಸೆಪ್ಟೆಂಬರ್​ ನಲ್ಲಿ ಉಗ್ರರು ಸಮುದ್ರ ಮಾರ್ಗದ ಮೂಲಕ ಬಂದು  ಭಾರತದಲ್ಲಿ ದಾಳಿ ನಡೆಸುವ ಸಂಚು ವಿಫಲವಾಗಿತ್ತು ಎಂದು ಜಾಗತಿಕ ಉಗ್ರ ಡೇವಿಡ್ ಹೆಡ್ಲಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಗಳು ನಡೆದಿದ್ದು, ಬಹುತೇಕ ಉಗ್ರರು ಪಾಕಿಸ್ತಾನದಿಂದ ನದಿ  ಮೂಲಕ ಕಾಶ್ಮೀರ ಪ್ರವೇಶಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದೆ ಗುಜರಾತ್​ ನ ಕಡಲ ತೀರದಲ್ಲಿ ಪಾಕಿಸ್ತಾನದ ಬೋಟ್ ಒಂದು ಪತ್ತೆಯಾಗಿತ್ತು. ಕರಾವಳಿ ರಕ್ಷಣಾ ಪಡೆಗಳು ಇವರನ್ನು ಬಂಧಿಸಲು ಮುಂದಾದಾಗ  ಬೋಟ್​ ನಲ್ಲಿದ್ದ ಶಂಕಿತ ಉಗ್ರರು ತಮ್ಮನ್ನೇ ಸ್ಪೋಟಿಸಿಕೊಂಡಿದ್ದರು.

250 ಚದರ ಕಿ.ಮೀ ವಿಸ್ತೀರ್ಣದ ವೂಲ್ಲರ್ ನದಿ ಸುತ್ತಲಿನ ಪ್ರದೇಶವನ್ನು ಅಡಗುತಾಣವಾಗಿಸಿಕೊಂಡಿದ್ದ ಉಗ್ರರನ್ನು ಸದೆಬಡಿಯಲು 1995ರಲ್ಲಿ ಮಾರ್ಕೋಸ್​ ಪಡೆಗಳನ್ನು ನಿಯೋಜಿಸಲಾಗಿತ್ತು. ವೂಲ್ಲರ್​ನಿಂದ ಶ್ರೀನಗರಕ್ಕೆ  ಕೇವಲ 100 ಕಿ.ಮೀ. ಅಂತರ ಇರುವುದರಿಂದ ಇಲ್ಲಿ ಅವರ ಕಾರ್ಯಚಟುವಟಿಕೆ ಭದ್ರತಾ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಯಾವುದೇ ರೀತಿಯ ಅಪಾಯಕಾರಿ  ಸನ್ನಿವೇಶಗಳಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಇವರಿಗೆ ಕಠಿಣ ತರಬೇತಿಯನ್ನು ನೀಡಲಾಗಿರುತ್ತದೆ. ಚಾಕು, ಬಿಲ್ಲು, ಆಧುನಿಕ ರೈಫಲ್, ಬಂದೂಕು, ಗನ್ ಸಹಿತ ಎಲ್ಲ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತದೆ. ಮಾರ್ಕೋಸ್​ ನಲ್ಲಿ  ಅತ್ಯುತ್ತಮ ಈಜುಪಟುಗಳಾಗಿದ್ದು (ಡೈವರ್), ನೀರೊಳಗೆ ಹಲವು ಕಿ.ಮೀ. ಈಜ ಬಲ್ಲರು. ಇದರಿಂದ ಸಮುದ್ರ ಮಾರ್ಗದ ಮೂಲಕ ಉಗ್ರ ಚಟುವಟಿಕೆ ನಡೆಸಲು ಭಯೋತ್ಪಾದಕರಿಗೆ ಕಷ್ಟವಾಗಲಿದೆ.

No Comments

Leave A Comment