Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬಜಪೆ: ರನ್‌ವೇ ದೀಪಕ್ಕೆ ಬಡಿದ ಎಐ ವಿಮಾನ; ತಪ್ಪಿದ ದುರಂತ

ಮಂಗಳೂರು: ಪೈಲಟ್‌ನ ಚಾಣಾಕ್ಷತನ ಮತ್ತು ಸಮಯ ಪ್ರಜ್ಞೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದೊಡ್ಡ ಮಟ್ಟದ ಅವಘಡವೊಂದು ತಪ್ಪಿದ್ದು, ವಿಮಾನದಲ್ಲಿದ್ದ ಎಲ್ಲ 186 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಏರ್‌ ಇಂಡಿಯಾ ಸಂಸ್ಥೆಗೆ ಸೇರಿದ ದುಬಾೖ-ಮಂಗಳೂರು ವಿಮಾನ ರವಿವಾರ ಮುಂಜಾನೆ 4.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುವಾಗ ಈ ಘಟನೆ ಸಂಭವಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಲ್ಯಾಂಡಿಂಗ್‌ ವೇಳೆ ಪೈಲಟ್‌ನ ನಿಯಂತ್ರಣ ತಪ್ಪಿ ರನ್‌ವೇಯಿಂದ ಸ್ವಲ್ಪ ಬದಿಗೆ ಸರಿದ ಪರಿಣಾಮ ರನ್‌ವೇಗೆ ಹೊಂದಿಕೊಂಡಿರುವ ಮಾರ್ಗಸೂಚಿ ದೀಪಕ್ಕೆ ತಾಗಿದೆ. ಇದರ ಪರಿಣಾಮ, ವಿಮಾನವು ರನ್‌ವೇಯಲ್ಲಿ ಚಲಿಸುತ್ತ ಸುಮಾರು ಆರು ಮಾರ್ಗಸೂಚಿ ದೀಪಗಳಿಗೆ ತಾಗಿಕೊಂಡು ಹೋಯಿತು. ದೀಪಗಳಿಗಷ್ಟೇ ಹೆಚ್ಚಿನ ಹಾನಿಯಾಗಿದೆ. ವಿಮಾನಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.  ಪೈಲಟ್‌ ವಿಮಾನವನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅವಘಡ ಸಂಭವಿಸಿರುವುದು ವಿಮಾನದೊಳಗಿದ್ದ ಯಾವುದೇ ಪ್ರಯಾಣಿಕರ ಅನುಭವ ಅಥವಾ ಗಮನಕ್ಕೂ ಬಂದಿಲ್ಲ. ಆ ಮೂಲಕ ಈ ದುಬಾೖ-ಮಂಗಳೂರು ವಿಮಾನದಲ್ಲಿದ್ದ ಎಲ್ಲ 186 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಮರಳಿದ ವಿಮಾನ: ವಿಮಾನ ಇಳಿಯಲು ಹಸಿರು ನಿಶಾನೆ ಲಭಿಸಿದ ಬಳಿಕ ಇಳಿಯುತ್ತಿರುವಾಗ ಸುರಿದ ಮಳೆಯಿಂದಾಗಿ ಈ ವೈಪರೀತ್ಯ ಆಗಿದ್ದು ವಿಮಾನ ಸ್ವಲ್ಪ ಬದಿಗೆ ಸರಿದಿದೆ. ಆದರೆ ಪೈಲಟ್‌ ನಿಯಂತ್ರಣ ಸಾಧಿಸಿ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡಿಂಗ್‌ ಮಾಡಿದ್ದಾರೆ. ಲ್ಯಾಂಡಿಂಗ್‌ ವೇಳೆ ಚಕ್ರದಲ್ಲಿ ಕಾಣಿಸಿಕೊಂಡಿರುವ ತೊಂದರೆಯಿಂದಾಗಿ ವಿಮಾನ ಹತೋಟಿ ತಪ್ಪಿರುವ ಸಾಧ್ಯತೆ ಇರುವುದರಿಂದ ವಿಮಾನದ ಚಕ್ರವನ್ನು ಬದಲಾಯಿಸಿಕೊಂಡು ಎಂದಿನಂತೆ ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್‌ ಅವರು, ‘ಮುಂಜಾನೆ ಈ ಘಟನೆ ಸಂಭವಿಸಿದೆ. ಮಾರ್ಗಸೂಚಿ ದೀಪಕ್ಕೆ ಸ್ವಲ್ಪ ಹಾನಿಯಾಗಿದ್ದು ವಿಮಾನಯಾನಗಳ ದೈನಂದಿನ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಿಲ್ಲ. ಘಟನೆ ಸಂಭವಿಸಿದ ವಿಮಾನವು ತನ್ನ ಯಾನವನ್ನು ವೇಳಾಪಟ್ಟಿಯಂತೆ ಮುಂದುವರಿಸಿದೆ’ ಎಂದು ತಿಳಿಸಿದ್ದಾರೆ. ಈ ಘಟನೆಯಿಂದ ಗಾಬರಿಪಡುವ ಆವಶ್ಯಕತೆ ಇಲ್ಲ. ವಿಮಾನಗಳು ಲ್ಯಾಂಡಿಂಗ್‌ ಆಗುವ ಸಂದರ್ಭದಲ್ಲಿ ಕೆಲವು ಬಾರಿ ಈ ರೀತಿಯಾಗುತ್ತದೆ. ಮಾರ್ಗಸೂಚಿ ದೀಪಗಳು ರನ್‌ವೇ ನಿಕಟವಾಗಿದ್ದು ಸ್ವಲ್ಪ ವ್ಯತ್ಯಾಸವಾದರೂ ದೀಪಗಳ ಗಾಜುಗಳಿಗೆ ತಾಗುತ್ತವೆ ಎಂದು ವಿಮಾನನಿಲ್ದಾಣದ ನಿರ್ವಹಣಾ ಮೂಲಗಳು ತಿಳಿಸಿವೆ.

6 ದೀಪಗಳಿಗೆ ಹಾನಿ: ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ದುಬಾೖ-ಮಂಗಳೂರು ವಿಮಾನವು ಲ್ಯಾಂಡ್‌ ಆಗುವ ವೇಳೆ ಸಂಭವಿಸಿದ ಈ ಘಟನೆಯಿಂದ ಸುಮಾರು 6ಕ್ಕೂ ಅಧಿಕ ರನ್‌ವೇ ಮಾರ್ಗಸೂಚಿ ದೀಪಗಳು ಪುಡಿಯಾಗಿವೆ. ಆ ನಂತರ, ಆಬುಧಾಬಿ, ಬೆಂಗಳೂರು ಸೇರಿದಂತೆ ಬೇರೆ ಕಡೆಗಳಿಂದ ಬಂದ ಸುಮಾರು ನಾಲ್ಕು ವಿಮಾನಗಳು ಅದೇ ರನ್‌ವೇಯಲ್ಲಿ ಮಂದ ಬೆಳಕಿನಲ್ಲಿಯೇ ಲ್ಯಾಂಡಿಂಗ್‌ ಆಗಿವೆ. ಆದರೆ ಬೆಳಗ್ಗೆ 8.30ರ ತನಕ ಈ ಘಟನೆ ಆಗಿರುವುದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೇ ಬಂದಿರಲಿಲ್ಲ. ಆ ಬಳಿಕವಷ್ಟೇ ಈ ರನ್‌ವೇ ಮಾರ್ಗಸೂಚಿ ದೀಪಗಳನ್ನು ಸರಿಪಡಿಸಲಾಗಿದೆ ಎನ್ನಲಾಗಿದೆ.

ಇತಿಹಾಸ ನೆನಪಿಸಿದ ವಿಮಾನ ದುರಂತ: 2010ರಲ್ಲಿ ದುಬಾೖಯಿಂದ ಮಂಗಳೂರಿಗೆ ಬಂದಿದ್ದ ಏರ್‌ ಇಂಡಿಯಾ ಸಂಸ್ಥೆಗೆ ಸೇರಿದ ವಿಮಾನವು ಬೆಳಗ್ಗೆ ಸುಮಾರು 6 ಗಂಟೆಗೆ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುವ ವೇಳೆ, ಪೈಲಟ್‌ನ ನಿಯಂತ್ರಣ ತಪ್ಪಿ ರನ್‌ವೇಯಿಂದ ಮುಂದಕ್ಕೆ ಚಲಿಸಿ ಬಹುದೊಡ್ಡ ದುರಂತ ಸಂಭವಿಸಿತ್ತು.

No Comments

Leave A Comment