Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ: 80 ಮಂದಿ ಸಾವು, 58 ಜಿಲ್ಲೆಗಳಿಗೆ ಹಾನಿ

ನವದೆಹಲಿ: ದೇಶದ ಈಶಾನ್ಯ  ಭಾಗದ ಮೂರು ರಾಜ್ಯಗಳಲ್ಲಿ  ಉಂಟಾದ ನೆರೆ ಪ್ರವಾಹದಿಂದ 58 ಜಿಲ್ಲೆಗಳಿಗೆ ಹಾನಿಯುಂಟಾಗಿದ್ದು, ಸುಮಾರು 80 ಮಂದಿ ಮೃತಪಟ್ಟಿದ್ದಾರೆ ಎಂದು ಈಶಾನ್ಯ ಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಅಸ್ಸಾಂ,ಅರುಣಾಚಲ ಪ್ರದೇಶ ಮತ್ತು ಮಣಿಪುರಗಳಲ್ಲಿ  ಅಲ್ಲಿನ ಅಧಿಕಾರಿಗಳೊಂದಿಗೆ ನೆರೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ವ್ಯಾಪಕ ಮಳೆಯಿಂದ ಉಂಟಾದ ನೆರೆ ಪ್ರವಾಹದಿಂದ  ಉಂಟಾದ ನಷ್ಟ ಅಪಾರವಾಗಿದೆ ಎಂದು ಹೇಳಿದ್ದಾರೆ.ಪ್ರವಾಹದಿಂದ ಭೂಕುಸಿತವುಂಟಾಗಿದ್ದು ಸುಮಾರು 80 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈಶಾನ್ಯ ಭಾಗಗಳ ಅಭಿವೃದ್ಧಿ ಸಚಿವಾಲಯ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯ ನೆರೆ ಪ್ರವಾಹ ಮತ್ತು ಭೂಕುಸಿತದಿಂದುಂಟಾದ ಹಾನಿ ಬಗ್ಗೆ ಪರಾಮರ್ಶೆ ನಡೆಸುತ್ತಿದೆ. ಅಂತರಿಕ್ಷ ತಂತ್ರಜ್ಞಾನ ಮತ್ತು ಇಸ್ರೊದ ತಜ್ಞರ ತಂಡವನ್ನು ಈ ಮೂರೂ  ರಾಜ್ಯಗಳಲ್ಲಿ ಉಂಟಾದ ಹಾನಿ ಮತ್ತು ನಷ್ಟಗಳ ಬಗ್ಗೆ ಅಧ್ಯಯನ ನಡೆಸಲು ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳಿಗೆ ಸಿಂಗ್ ಸಲಹೆ ನೀಡಿದ್ದಾರೆ.

ಪ್ರವಾಹದಲ್ಲಿ ಸಿಲುಕಿ ನಿರಾಶ್ರಿತರಾದವರಿಗೆ ಆಹಾರ ಮತ್ತು ಮಗುವಿನ ಆಹಾರ ಮತ್ತು ಅಗತ್ಯ ವಸ್ತುಗಳು ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹದಿಂದಾಗಿ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆಗೆ ಮತ್ತು ಸಂಪರ್ಕ ಮತ್ತು ಸಂವಹನಗಳಿಗಾಗಿ ದೂರಸಂಪರ್ಕ ಇಲಾಖೆಗೆ ಸೂಚಿಸಿರುವುದಾಗಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

No Comments

Leave A Comment