Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ವಿಂಬಲ್ಡನ್‌ 2017 ಮರ್ರೆ, ಜೋಕೋವಿಚ್‌ರಿಂದ ಫಾರಂ ಹುಡುಕಾಟ!

ಒಂದರ್ಥದಲ್ಲಿ ಲಂಡನ್‌ನ ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಲಾನ್‌ನ‌ಲ್ಲಿ ನಡೆಯುವ ವಿಂಬಲ್ಡನ್‌ ಟೂರ್ನಿ ಗ್ರ್ಯಾನ್‌ ಸ್ಲಾಂ ಟೆನಿಸ್‌ನ ರಾಜ. ಇಂಗ್ಲೆಂಡಿಗರು ಮಾಧ್ಯಮಗಳನ್ನು ಬಳಸಿಕೊಳ್ಳಲು ಇರುವ ಜಾಣ್ಮೆಯೂ ಈ ಟೂರ್ನಿಯ ಮಹತ್ವವನ್ನು ಹೆಚ್ಚಿಸಿರಬಹುದು. ಅದಕ್ಕಿಂತ ಮುಖ್ಯವಾಗಿ ಪರಂಪರೆಯನ್ನು ಆಧರಿಸಿಯೇ ಇಂದಿನ ವ್ಯಾಪಾರಿ ಜಗತ್ತನ್ನು ಎದುರಿಸುವ ಛಾತಿ ವಿಂಬಲ್ಡನ್‌ಗೆ ಅದರದೇ ಆದ ಮೌಲ್ಯವನ್ನು ತಂದುಕೊಟ್ಟಿದೆ. ಇಡೀ ಟೆನಿಸ್‌ ರಂಗ ವೃತ್ತಿಪರತೆಯ ತುತ್ತತುದಿಯಲ್ಲಿದೆ. ಬಣ್ಣಬಣ್ಣದ ಉಡುಗೆಯ ಆಕರ್ಷಣೆ, ಗ್ಲಾಮರ್‌ಗಳೆಲ್ಲವೂ ಅಂತಿಮವಾಗಿ ಪ್ರಾಯೋಜನೆ, ಜಾಹೀರಾತು ಒಪ್ಪಂದದ ಡಾಲರ್‌ ಆಗಿ ಮಾರ್ಪಾಡಾಗುತ್ತದೆ. ಆದರೆ ವಿಂಬಲ್ಡನ್‌ನಲ್ಲಿ ಇವತ್ತಿಗೂ ಅದೇ ಬಿಳಿ ಉಡುಪುಗಳು ಕಡ್ಡಾಯ. ಬೇರೆ ವರ್ಣದ ಒಳ ಚಡ್ಡಿ ಹಾಕಿಕೊಂಡರೂ ವಿಂಬಲ್ಡನ್‌ ಕೆಂಗಣ್ಣು ಬೀರುತ್ತದೆ, ಆಟಗಾರರ ಮೇಲೂ ಲೋಗೋ ಮೊದಲಾದವುಗಳ ಕುರಿತು ಹಲವು ನಿಯಮಗಳಿವೆ ಮತ್ತು ಅವುಗಳ ಪಾಲನೆಯಾಗುತ್ತಿದೆ. ಹುಲ್ಲು ಹಸುಗಳಿಗೆ ಮೇಯಲಷ್ಟೇ ಎಂಬ ಟೀಕೆ ಮೀರಿ ವಿಶ್ವದ ಏಕೈಕ ಹುಲ್ಲಿನಂಕಣದ ಗ್ರಾನ್‌ಸ್ಲಾಂ ಇದೊಂದೇ.

ಹುಲ್ಲಿನ ಅಂಕಣದಲ್ಲಿ ಭಾರೀ ಸವಾಲು

  ಮುಖ್ಯವಾಹಿನಿಯ ವಿಂಬಲ್ಟನ್‌ ಸ್ಪರ್ಧೆಗಳು ಜು.3ರಿಂದ ಆರಂಭವಾಗುತ್ತವೆ. ಜೂನ್‌ 26ರಿಂದಲೇ ಅರ್ಹತಾ ಸುತ್ತಿನ ಪಂದ್ಯಗಳು ಶುರುವಾಗಿದೆ. ಹುಲ್ಲಿನಂಕಣದಲ್ಲಿ ಆಡುವಾಗ ಹೊಸಬರು ತುಸು ಎಡವುತ್ತಾರೆ. ಇಲ್ಲಿನ ಸರ್ವ್‌ ಎಂಡ್‌ ವಾಲಿ ಅಟ ಕಠಿಣ. ಹುಲ್ಲಿನ ವೇಗಕ್ಕೆ ಸ್ಪಂದಿಸುವಾಗ ಅತ್ಯುತ್ತಮ ರಿಫ್ಲೆಕ್ಸ್‌ ಬೇಕು. ಅಷ್ಟಕ್ಕೂ ಹುಲ್ಲಿನಂಕಣದ ಸೀಸನ್‌ ತುಂಬಾ ಕಡಿಮೆ ಅವಧಿಯದ್ದು, ಅಬ್ಬಬ್ಟಾ ಎಂದರೂ ಅದು ವರ್ಷದಲ್ಲಿ ಆರು ವಾರಗಳ ಕಾಲಕ್ಷೇಪ. ಫ್ರೆಂಚ್‌ ಓಪನ್‌ ನಂತರ ಯುಕೆಯ ನಾಟಿಂಗ್‌ಹ್ಯಾಮ್‌ ಓಪನ್‌ ಮೂಲಕ ತೆರೆದುಕೊಳ್ಳುವ ಗ್ರಾಸ್‌ ಸೀಸನ್‌ ನಂತರ ವಿಂಬಲ್ಡನ್‌ನ ತಯಾರಿ ಟೂರ್ನಿಗಳಾಗಿ ಬರ್ಮಿಂಗ್‌ಹ್ಯಾಮ್‌, ಮಲ್ಲೋರ್ಕಾ, ಈಸ್ಟ್‌ಬೋರ್ನ್ ಸ್ಪರ್ಧೆಗಳು, ಅದಕ್ಕೀಗ ಅಂಟಾಲ್ಸ್‌ ಓಪನ್‌ ಸೇರಿದೆ. ನ್ಯೂಪೋರ್ಟ್‌ನ ಹಾಲ್‌ ಆಫ್ ಫೇಮ್‌ ಟೂರ್ನಿ ಹುಲ್ಲಿನಂಕಣದ ಸಮಾರೋಪ. ಕೇವಲ 12 ಟೂರ್ನಿ ಹುಲ್ಲಿನಂಕಣದಲ್ಲಿ ನಡೆಯುತ್ತದೆ, ಅಷ್ಟೇ!

ವಿಚಿತ್ರ ಎಂದರೆ ಅಷ್ಟಾಗಿಯೂ ವಿಂಬಲ್ಡನ್‌ ಆಟಗಾರರಿಗೆ ವಿಶೇಷ. ಈ ಬಾರಿಯ ಸ್ಪರ್ಧೆಯಲ್ಲಿ ಸ್ವಿಸ್‌ ಆಟಗಾರ ರೋಜರ್‌ ಫೆಡರರ್‌ರನ್ನು ಟಾಪ್‌ ಫೇವರಿಟ್‌ ಸ್ಥಾನದಲ್ಲಿ ಇರಿಸಿದರೂ ಕಳೆದ ವರ್ಷವೂ ಸೇರಿದಂತೆ ಈಗಾಗಲೇ ಎರಡು ಬಾರಿ ಪ್ರಶಸ್ತಿ ಪಡೆದಿರುವ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆ, ನೋವಾಕ್‌ ಜೋಕೋವಿಕ್‌, ಫ್ರೆಂಚ್‌ ಗೆದ್ದ ರಫೆಲ್‌ ನಡಾಲ್‌ ಕೂಡ ಪ್ರಶಸ್ತಿಯ ದಾವೆದಾರರು.

ಪ್ರಶಸ್ತಿಯತ್ತ ಫೆಡರರ್‌ ಕಣ್ಣು
ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಫೆಡರರ್‌ 18ನೇ ಸ್ಲಾಂನತ್ತ ಕಣ್ಣಿಟ್ಟಿದ್ದಾರೆ. ಈಗಾಗಲೇ ಈ ವರ್ಷ ನಾಲ್ಕು ಟೂರ್ನಿ ಗೆದ್ದಿರುವುದು ಅವರ ಫಾರಂ ತೋರಿಸುತ್ತದೆ. ವಿಂಬಲ್ಡನ್‌ ತಯಾರಿಯ ನಿಟ್ಟಿನಲ್ಲಿ ಫ್ರೆಂಚ್‌ ಓಪನ್‌ ಆಡದಿರಲು ನಿರ್ಧರಿಸಿದ ಫೆಡ್‌ ಪೀಟ್‌ ಸಾಂಪ್ರಾಸ್‌ರ 7 ವಿಂಬಲ್ಡನ್‌ ಪ್ರಶಸ್ತಿ ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದಾರೆ. 36 ವರ್ಷದ ಮೈಲುಗಲ್ಲು ಕೂಡ ಹತ್ತಿರದಲ್ಲಿದೆ ಎಂಬ ಅಂಶ ಕೂಡ ಗಮನಿಸಬೇಕಾದುದೇ. ನಿಜ, ಅಗ್ರಕ್ರಮಾಂಕಿತರಾಗಿಯೂ ಹಾಲಿ ಚಾಪಿಯನ್‌ ಮರ್ರೆ ಫಾರಂ ಆತಂಕಕಾರಿ. 2013, 16ರಲ್ಲಿ ವಿಂಬಲ್ಡನ್‌ ಗೆದ್ದ ಈತ ಕಳೆದ ಬಾರಿಯ ವಿಜೇತರಾಗುವ ಮುನ್ನ 33 ಪಂದ್ಯಗಳಲ್ಲಿ ಕೇವಲ 6 ಪಂದ್ಯ ಸೋತಿದ್ದರು. 2 ಫೈನಲ್‌ ಹಾಗೂ ರೋಂ ಮಾಸ್ಟರ್. ಈ ಬಾರಿ 21-9ರ ಗೆಲುವು ಸೋಲು. ಹೋಗಲಿ, ಮಾಸ್ಟರ್ ಟೂರ್ನಿಗಳ ಪೈಕಿ ಫ್ರೆಂಚ್‌ ಓಪನ್‌ನಲ್ಲಷ್ಟೇ ಕ್ವಾರ್ಟರ್‌ ಫೈನಲ್‌. ಅದೇ ಅತ್ಯುತ್ತಮ ಸಾಧನೆ. ಇಷ್ಟರ ಮೇಲೆ, ಮೊನ್ನೆ ಹುಲ್ಲಿನಂಕಣದ ಏಜಿಯಾನ್‌ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾರ್ಡನ್‌ ಥಾಮ್ಸನ್‌ ಕೈಯಲ್ಲಿ ಸೋಲು. 30ರ ಹರೆಯದ ಮರ್ರೆ ಹಿಂದಿನೆರಡು ವಿಂಬಲ್ಡನ್‌ ಗೆಲ್ಲುವ ಮುನ್ನ ಕ್ವೀನ್‌ ಕ್ಲಬ್‌ನ ಪೂರ್ವಭಾವಿ ಟೂನಿಯಲ್ಲೂ ವಿಜೇತರಾಗಿದ್ದರು ಎಂಬ ನೆನಪು ಹರಿದಾಡುತ್ತದೆ. ಮರ್ರೆ ಮುಂದೆ ದೊಡ್ಡ ಸವಾಲಿದೆ.

ಫಾರ್ಮ್ ಹುಡುಕಾಟದಲ್ಲಿ ಮರ್ರೆ
ಇದೇ ಕಥೆ ಜೋಕೋವಿಚ್‌ರದು. ಕಳೆದ ವರ್ಷ ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಂಗಳನ್ನು ಗೆದ್ದು ವಿಂಬಲ್ಡನ್‌ಗೆ ಬಂದಿದ್ದರೆ ಈ ಬಾರಿ ಬರಿಗೈ! ಇಡೀ ವರ್ಷದಲ್ಲಿ ಈ ಆಟಗಾರ ಗೆದ್ದಿರುವುದು ಒಂದು ಪ್ರಶಸ್ತಿಯನ್ನು ಮಾತ್ರ. ಆ ಮಟ್ಟಿಗೆ 10ನೇ ಫ್ರೆಂಚ್‌ ಗೆದ್ದ ರಫೆಲ್‌ ನಡಾಲ್‌ ಹೆಚ್ಚು ಆತ್ಮವಿಶ್ವಾಸದಿಂದ ವಿಂಬಲ್ಡನ್‌ಗೆ ಆಡಲಿಳಿಯಬಹುದು. ಟೆನಿಸ್‌ನಲ್ಲಿ “ಅಪ್‌ಸೆಟ್‌ಗೂ ಪ್ರಚಾರ ಸಿಗುತ್ತದೆ. ಕ್ವೀನ್ಸ್‌ ಫೈನಲ್‌ ಆಡಿದ ಫೆಲಿಸಿನೋ ಲೋಪೆಜ್‌, ಮರಿನ್‌ ಸಿಲಿಕ್‌, ರೊಲ್ಯಾಂಡ್‌ ಗ್ಯಾರಸ್‌ನಲ್ಲಿ ಜೋಕೋವಿಕ್‌ಗೆ

ಸೋಲುಣಿಸಿದ ಡೊಮಿನಿಕ್‌ ಥೀಮ್‌, ಆಸ್ಟ್ರೇಲಿಯಾದ ನಿಕ್‌ ಕಿರ್ಗೋಯಿಸ್‌, ಅಲೆಕ್ಸಾಂಡರ್‌ ಜ್ವರೆವ್‌ ತರಹದ ಉದಯೋನ್ಮುಖರು ಪ್ರಜ್ವಲಿಸಬಹುದು, ಯಾರಿಗ್ಗೊತ್ತು?

ಸೆರೆನಾ ಇಲ್ಲದಿರುವುದರಿಂದ ಸ್ಲಾಂನ ಮಹಿಳಾ ವಿಭಾಗ ಅಕ್ಷರಶಃ ಓಪನ್‌. ಗಾಯಾಳುವಾಗಿರುವುದರಿಂದ ಮಾರಿಯಾ ಶರಪೋವಾ ಅರ್ಹತಾ ಸುತ್ತಲ್ಲೂ ಆಡುತ್ತಿಲ್ಲ. ವಿಂಬಲ್ಡನ್‌ ಅಧಿಕಾರಿಗಳು “ಕ್ಲೀನ್‌ ಇಮೇಜ್‌ನ ಪ್ರತಿಪಾದಕರಾಗಿರುವುದರಿಂದ ಕನಸಿನಲ್ಲೂ ಶರಪೋವಾಗೆ ವೈಲ್ಡ್‌ಕಾರ್ಡ್‌ ಕೊಡುವುದಿಲ್ಲ! ಈ ಹಿನ್ನೆಲೆಯಲ್ಲಿ ಡ್ರಾ ಗಮನಿಸಿದರೆ, ಮಾಜಿ ಚಾಂಪಿಯನ್‌ರಾದ ವೀನಸ್‌ ವಿಲಿಯಮ್ಸ್‌, ಪೆಟ್ರಾ ಕ್ವಿಟೋವಾ ಮಾತ್ರ ಸೆಂಟರ್‌ ಕೋರ್ಟ್‌ನಲ್ಲಿ ಚಾಂಪಿಯನ್‌ ಪ್ಲೇಟ್‌ ಎತ್ತಿಹಿಡಿದ ಅನುಭವವಿರುವವರು. ವೀನಸ್‌ ಸ್ಪರ್ಧಿಸುತ್ತಾರೆ ಎಂಬುದಕ್ಕಿಂತ ಹೆಚ್ಚು ಭವಿಷ್ಯ ಕಷ್ಟ. 2011, 14ರಲ್ಲಿ ವಿಂಬಲ್ಡನ್‌ ಗೆದ್ದಿದ್ದ ಕ್ವಿಟೋವಾ ತನ್ನ ಮನೆಯಲ್ಲಿ ದರೋಡೆಕೋರನ ವಿರುದ್ಧ ಹೋರಾಟ ನಡೆಸುವಾಗ ಕೈಗೆ ಗಂಭೀರ ಗಾಯ ಮಾಡಿ ಕೊಂಡವರು. ಫ್ರೆಂಚ್‌ ಓಪನ್‌ ಗೆದ್ದ 20ರ ಜೆಲೆನಾ ಓಸ್ಟಾಪೆಂಕೋ ವಿಂಬಲ್ಡನ್‌ನ್ನು ಗೆದ್ದರೆ ಸತತ ಎರಡು ಸ್ಲಾಂ ಫೈನಲ್‌ ಗೆದ್ದಂತಾಗುತ್ತದೆ. ಅಂತಹ ಫಾರಂನ್ನು ಸದ್ಯ ತಯಾರಿ ಟೂರ್ನಿಗಳಲ್ಲಿ ಜೆಲೆನಾ ತೋರಿಸುತ್ತಿರುವುದೇನೋ ನಿಜ. ವಿಂಬಲ್ಡನ್‌ನ ಕಿರಿಯರ ಪ್ರಶಸ್ತಿ ಪಡೆದಿರುವ ಜೆಲೆನಾ ಆಕೆಯ ಕೋಚ್‌ ಅನ್ನಾಬೆಲ್‌ ಮೆಡಿನಾ ಗರ್ರಿಗ್ಯೂ ಪ್ರಕಾರ ಫೇವರಿಟ್‌. ಜೆಲೆನಾಗೆ ಗ್ರಾಸ್‌ ಫೇವರಿಟ್‌! ಹಾಗೆಂದುಕೊಂಡು ತನ್ನ ಮೇಲೆ ತಾನೇ ಒತ್ತಡ ಹೇರಿಕೊಳ್ಳದಿದ್ದರೆ ಒಳ್ಳೆಯದಿತ್ತು. ಇಂಗ್ಲೆಂಡಿಗರಿಗೆ ಮರ್ರೆಯಂತೆ ಮಹಿಳಾ ವಿಭಾಗದಲ್ಲಿ ಜೋಹನ್‌ ಕೊಂಟಾ ಈವರೆಗಿನ ಅಭಾವವನ್ನು ಮರೆಸುತ್ತಾರೆ ಎಂಬ ಹಗಲುಗನಸು. ಇಂತದೊಂದು ಕನಸುಗಳಿಗೆ ಈ ಸಂಚಿಕೆ ಅವಕಾಶ ಕಲ್ಪಿಸಿದೆ. ಅದಕ್ಕೆಂದೇ ಬಿಬಿಸಿ ಕಾಮೆಂಟರೇಟರ್‌ ಜಾನ್‌ ಲಾಯ್ಡ ಹೇಳುತ್ತಿದ್ದರು, ಮಹಿಳಾ ವಿಭಾಗದಲ್ಲಿ ಈ ಬಾರಿ 15 ಫೆೇವರಿಟ್‌ಗಳನ್ನು ಗುರುತಿಸಬಹುದು!

ವಿಂಬಲ್ಡನ್‌ ಕ್ಯೂ ಎಂಬುದು ಪರಂಪರೆಯ ತುಣುಕು!
ಇವತ್ತಿಗೂ ಕೊನೆಯ ನಾಲ್ಕು ದಿನಗಳ ಹೊರತಾಗಿ ಉಳಿದ ದಿನ ಕ್ಯೂ ನಿಂತು ಟಿಕೆಟ್‌ ಪಡೆದೇ ಸೆಂಟರ್‌ ಕೋರ್ಟ್‌, ಕೋರ್ಟ್‌ ನಂ.1 ಮತ್ತು 2ಕ್ಕೆ ಪ್ರವೇಶ ಪಡೆಯಬಹುದು. ಸೀಮಿತ ಸಂಖ್ಯೆಯ ಟಿಕೆಟ್‌ಗಾಗಿ ಸಾವಿರಾರು ಜನ ವಿಂಬಲ್ಡನ್‌ ಪಾರ್ಕ್‌ನಲ್ಲಿ ಕಾಯುತ್ತಾರೆ. ಟಿಕೆಟ್‌ ಸಿಕ್ಕಿಲ್ಲವೆಂದರೂ,
ಪಾರ್ಕ್‌ನ ಬಿಗ್‌ ಸ್ಕಿ$›àನ್‌ನಲ್ಲಿ ಆಟ ನೋಡಬಹುದು. ಹಾಗಾಗಿ ವಿಂಬಲ್ಡನ್‌ ಎಂಬುದು ಅಲ್ಲಿನ ಕುಟುಂಬಗಳ ಪ್ರವಾಸಿ ಸ್ಥಳ ಕೂಡ. ಟಿಕೆಟ್‌ ಖರೀದಿಗೆ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಹೊರತೆಗೆದರೂ ಪ್ರಯೋಜನವಿಲ್ಲ. ಟಿಕೆಟ್‌ ಖರೀದಿಗೆ ನಗದು ಮಾತ್ರ ಮಾನ್ಯ! ಹಾಗಾಗಿ ವಿಂಬಲ್ಡನ್‌ ಕ್ಯೂನಲ್ಲಿ ನಿಲ್ಲುವುದನ್ನು ಕೂಡ ಜನ ಇಷ್ಟಪಡುತ್ತಾರೆ. ಆ ಅನುಭವ ಜೀವನದಲ್ಲೊಮ್ಮೆ ಆಗಬೇಕು ಎಂಬ ಪ್ರತೀತಿ ಹುಟ್ಟಿಕೊಂಡಿದೆ.

No Comments

Leave A Comment