ಪ್ರತ್ಯೇಕತಾವಾದಿಗಳಿಗೆ ಶಾಕ್ ನೀಡಿದ ಎನ್ಐಎ: 3 ಹುರಿಯತ್ ನಾಯಕರ ಬಂಧನ
ಶ್ರೀನಗರ: ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಪ್ರತ್ಯೇಕತಾವಾದಿಗಳಿಗೆ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಶಾಕ್ ನೀಡಿದ್ದು, ಮೂವರು ಹುರಿಯತ್ ನಾಯಕರನ್ನು ಬುಧವಾರ ಬಂಧನಕ್ಕೊಳಪಡಿಸಿದೆ.
ಆಯಾಜ್ ಅಕ್ಬರ್, ಅಲ್ತಾಫ್ ಶಾ ಮತ್ತು ಮೆಹ್ರಾಜ್ ಉದ್ ದಿನ್ ಕಲ್ವಾಲ್ ಬಂಧಿತ ಹುರಿಯತ್ ನಾಯಕರಾಗಿದ್ದಾರೆಂದು ತಿಳಿದುಬಂದಿದೆ.
ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಸಲುವಾಗಿ ಹುರಿಯತ್ ಮುಖಂಡರು ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆಯುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಪ್ರಕರಣ ಸಂಬಂಧ ಎನ್ಐಎ ತನಿಖೆ ಆರಂಭಿಸಿತ್ತು. ತನಿಖೆಯ ಭಾಗವಾಗಿ ಹುರಿಯತ್ ನಾಯಕರನ್ನು ಬಂಧಿಸಿರುವಂತೆ ಪೊಲೀಸರಿಗೆ ಎನ್ಐಎ ನಿರ್ದೇಶನ ನೀಡಿತ್ತು.
ಎನ್ಐಎ ನಿರ್ದೇಶನದಂತೆಯೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಹುರಿಯತ್ ನಾಯಕರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಕಾಶ್ಮೀರದಿಂದ ದೆಹಲಿಗೆ ಕರೆತರಲಾಗುತ್ತಿದ್ದು, ಮೂವರನ್ನೂ ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಲಿದ್ದಾರೆಂದು ವರದಿಗಳು ತಿಳಿಸಿವೆ.
ಕಾಶ್ಮೀರ ಹಿಂಸಾಚಾರಕ್ಕೆ ಪಾಕಿಸ್ತಾನ ಆರ್ಥಿಕ ನೆರವು ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಈ ಹಿಂದೆ ಕಾಶ್ಮೀರ, ದೆಹಲಿ, ಹರಿಯಾಣ ಸೇರಿದಂತೆ 23 ಸ್ಥಳಗಳಲ್ಲಿ ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು.