Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ರಾಮ್‌ನಾಥ್‌ ಕೋವಿಂದ್‌ ರಾಷ್ಟ್ರಪತಿ ಚುನಾವಣಾ ಕಣಕ್ಕೆ

ಹೊಸದಿಲ್ಲಿ /ಪಾಟ್ನಾ: ಮಾಜಿ ರಾಜ್ಯಪಾಲ ರಾಮ್‌ನಾಥ್‌ ಕೋವಿಂದ್‌ ಅವರು ನಾಮಪತ್ರ ಸಲ್ಲಿಸುವ ಮೂಲಕ ಎನ್‌ಡಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌, ತಮಿಳುನಾಡು ಸಿಎಂ ಪಳನಿಸ್ವಾಮಿ ಸೇರಿದಂತೆ 15 ಮಂದಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್‌, ವೆಂಕಯ್ಯನಾಯ್ಡು, ಅನಂತ್‌ಕುಮಾರ್‌ ಹಾಗೂ ಪ್ರಮುಖ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಕೋವಿಂದ್‌ ಮೂರು ಸೆಟ್‌ಗಳ ನಾಮಪತ್ರ ಸಲ್ಲಿಸಿದರು.

ಈಗಾಗಲೇ ಶೇ.60ಕ್ಕಿಂತ ಹೆಚ್ಚು ಮತಗಳ ಬೆಂಬಲ ಪಡೆದಿರುವ ಕೋವಿಂದ್‌ ಅವರಿಗೆ ಗೆಲುವು ಕಷ್ಟವೇನಲ್ಲ. ಒಂದು ರೀತಿಯಲ್ಲಿ ಅದು ನಿರೀಕ್ಷಿತ ಫ‌ಲಿತಾಂಶವೇ ಆಗಿದೆ. ಆದರೂ ಬಿಜೆಪಿ ಯಾವುದೇ ಅಪಾಯಕ್ಕೆ ಆಹ್ವಾನ ನೀಡದೇ ಎಲ್ಲ ಕಡೆಗಳಿಂದಲೂ ಬೆಂಬಲಯಾ ಚಿಸುತ್ತಿದೆ.

ಬಿಜೆಪಿ ಮೂಲಗಳ ಪ್ರಕಾರ, ಒಟ್ಟು 28 ಪಕ್ಷಗಳ ಪ್ರತಿನಿಧಿಗಳು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು. ಆದರೆ ಶಿವಸೇನೆಯ ಮುಖಂ ಡರು ಗೈರಾಗಿದ್ದರು. ಇದಕ್ಕೆ ಬಿಜೆಪಿ ಆಹ್ವಾನವನ್ನೇ ನೀಡಿರಲಿಲ್ಲ ಎಂದು ಶಿವಸೇನೆ ಹೇಳಿದರೆ, ಬಿಜೆಪಿ ಅಲ್ಲಗೆಳೆದಿದೆ.

ಒಡಿಶಾದ ಬಿಜೆಡಿ ತಮ್ಮ ಪಕ್ಷದಿಂದ ಪ್ರತಿನಿಧಿಯಾಗಿ ಸಚಿವರೊಬ್ಬರನ್ನು ಕಳುಹಿಸಿತ್ತು. ಆದರೆ ವೈಎಸ್‌ಆರ್‌ಪಿ ಕಡೆಯಿಂದ ಯಾರೂ ಬಂದಿರಲಿಲ್ಲ. ಬೆಂಬಲ ಘೋಷಿಸಿದ್ದೇವೆ, ಎಂದು ಜೆಡಿಯು ಹೇಳಿದೆ.

25 ರಿಂದ ದೇಶ ಪ್ರವಾಸ: ನಾಮಪತ್ರ ಸಲ್ಲಿಸಿರುವ ಕೋವಿಂದ್‌ ಅವರು, ಇದೇ 25 ರಿಂದ ಭಾರತಾದ್ಯಂತ ಪ್ರವಾಸ ನಡೆಸಿ ಮತ ಯಾಚಿಸಲಿದ್ದಾರೆ. ಉತ್ತರ ಪ್ರದೇಶದಿಂದ ಈ ಪ್ರವಾಸ ಶುರುವಾಗಲಿದ್ದು, ಜತೆಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಇರಲಿದ್ದಾರೆ.

ಮೊದಲ ಬಿಜೆಪಿ ನಾಯಕ: ಈ ಬಾರಿಯ ಚುನಾ ವಣಾ ವಿಶೇಷವೆಂದರೆ, ರಾಷ್ಟ್ರಪತಿ ಭವನಕ್ಕೆ ಕಾಲಿಡುತ್ತಿರುವ ಮೊದಲ ಬಿಜೆಪಿ ನಾಯಕ ಎಂಬ ಕೀರ್ತಿಗೆ ರಾಮ್‌ನಾಥ್‌ ಕೋವಿಂದ್‌ ಭಾಜನರಾಗಲಿದ್ದಾರೆ. ವಾಜ ಪೇಯಿ ಸರಕಾರದ ವೇಳೆ ಅಬ್ದುಲ್‌ ಕಲಾಂ ಅವರನ್ನು ಆರಿಸಿ ಕಳುಹಿಸಲಾಗಿತ್ತು. ಆದರೆ ಇವರು ರಾಜಕಾರಣದ ಹಿನ್ನೆಲೆ ಹೊಂದಿದವ ರಾಗಿರಲಿಲ್ಲ.

ನಿತೀಶ್‌ ಬೆಂಬಲ ಪಕ್ಕಾ: ಇತ್ತ, ವಿಪಕ್ಷಗಳು ತಮ್ಮ ಅಭರ್ಥಿ ಮೀರಾಕುಮಾರ್‌ ಅವರಿಗೆ ಬೆಂಬಲಕ್ಕೆ ನಿರಂತರ ಯತ್ನಿಸುತ್ತಿವೆ. ಇದಕ್ಕಾಗಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಶುಕ್ರವಾರ ಸಂಜೆ ಸಿಎಂ ನಿತೀಶ್‌ಕುಮಾರ್‌ ಜತೆ ಮಾತುಕತೆ ನಡೆಸಿ ಮನಸ್ಸು ಬದಲಿಸಲು ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ನಿತೀಶ್‌ಕುಮಾರ್‌, ಬಿಹಾರದ ಪುತ್ರಿಯನ್ನು ಸೋಲು ಖಚಿತ ಎಂದು ಗೊತ್ತಿದ್ದು ಈಗ ಸ್ಪರ್ಧಿಸಲು ಹೇಳುತ್ತಿರುವುದು ಏಕೆ ಎಂದು ಖಡಕ್ಕಾಗಿ ಪ್ರಶ್ನಿಸಿದ್ದಾರೆ.

ಹಿಂದಿಯಲ್ಲಿ ನಾಮಪತ್ರ ಸಲ್ಲಿಕೆ
ಮೊದಲ ಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿದಂತೆ 60 ಸಂಸದರು ಸೂಚಕರಾಗಿ ಸಹಿ ಮಾಡಿದ್ದಾರೆ. ಎರಡನೇ ಸೆಟ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕೆಲ ನಾಯಕರು ಸೂಚಕರಾಗಿ ಸಹಿ ಮಾಡಿ ಕೊಟ್ಟಿದ್ದಾರೆ. ವಿಶೇಷವೆಂದರೆ ಇದು ಹಿಂದಿಯಲ್ಲಿ ಸಲ್ಲಿಸಿದ ನಾಮಪತ್ರವಾಗಿದೆ. ಮೂರನೇ ಸೆಟ್‌ಗೆ ಎಸ್‌ಎಡಿಯ ಪ್ರಕಾಶ್‌ ಸಿಂಗ್‌ ಬಾದಲ್‌, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿ ಹಲವು ನಾಯಕರು ಸೂಚಕರಾಗಿ ಸಹಿ ಮಾಡಿ ಕೊಟ್ಟಿದ್ದಾರೆ. ನಾಲ್ಕನೇ ಸೆಟ್‌ ಅನ್ನು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿರುವ 28 ರಂದು ಸಲ್ಲಿಸಲಾಗುತ್ತದೆ.

ನಾನು ರಾಜಕೀಯ ವ್ಯಕ್ತಿಯಲ್ಲ
ನಾಮಪತ್ರ ಸಲ್ಲಿಕೆ ನಂತರ ಹೊರಗೆ ಬಂದು ಮಾತನಾಡಿದ ಕೋವಿಂದ್‌ ಅವರು, ಬಿಹಾರ ರಾಜ್ಯಪಾಲರಾಗಿ ತೆರಳುವ ವೇಳೆಯೇ ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೆ. ಈಗ ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ರಾಷ್ಟ್ರಪತಿ ಚುನಾವಣೆ ಪಕ್ಷ ರಾಜಕೀಯದಿಂದ ಹೊರತಾದದ್ದು. ನನಗೆ ಬೆಂಬಲ ಕೊಟ್ಟವರಿಗೆಲ್ಲಾ ಧನ್ಯವಾದ ಹೇಳುತ್ತೇನೆ,” ಎಂದು ತಿಳಿಸಿದ್ದಾರೆ.

No Comments

Leave A Comment