Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ; ಹಲವೆಡೆ ದಾಂಧಲೆ, ಕಲ್ಲು ತೂರಾಟ

ಬೆಂಗಳೂರು: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಹಾಗೂ ಕಳಸಾ-ಬಂಡೂರಿ ಯೋಜನೆ ಜಾರಿ, ರೈತರ  ಸಾಲಮನ್ನಾಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೋಮವಾರ ನೀಡಿದ್ದ ಕರ್ನಾಟಕ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ಆಟೋ ಸಂಚಾರ ಎಂದಿನಂತೆ ಸಂಚರಿಸುತ್ತಿದ್ದು, ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೆ ಕರ್ನಾಟಕ ಬಂದ್ ನೆಪದಲ್ಲಿ ಕೆಲವೆಡೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಮಾತ್ರ ಬಂದ್ ಗೆ ಪೂರ್ಣ ಬೆಂಬಲ ಸಿಕ್ಕಿದೆ. ರಾಮನಗರದ ಐಜೂರಿನಲ್ಲಿ ಅಂಗಡಿ, ಮುಂಗಟ್ಟಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಏತನ್ಮಧ್ಯೆ ಬಂದ್ ಗೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳ ನಡುವೆ ಭಾರೀ ಒಡಕುಂಟಾಗಿದೆ.

ಹುಬ್ಬಳ್ಳಿ, ಬಾಗಲಕೋಟೆ, ರಾಮನಗರದಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಲವಂತವಾಗಿ ಅಂಗಡಿ, ಮುಂಗಟ್ಟು ಮುಚ್ಚಿಸಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ, ಕೋಲಾರಕ್ಕೆ ತೆರಳಬೇಕಿದ್ದ 30 ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮೆಜೆಸ್ಟಿಕ್ ನಲ್ಲಿ ಬೆಳಗ್ಗಿನಿಂದ ಚಿಕ್ಕಬಳ್ಳಾಪುರ, ಕೋಲಾರಕ್ಕೆ ಹೋಗಬೇಕಾಗಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಚಿತ್ರದುರ್ಗ, ತುಮಕೂರು, ಬಳ್ಳಾರಿ, ಉಡುಪಿ, ಮಂಗಳೂರು, ಭಟ್ಕಳ, ಉತ್ತರಕನ್ನಡ, ಹಾವೇರಿ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಮನಗರ, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಂದ್ ಸ್ವರೂಪ ತೀವ್ರವಾಗಿದೆ ಎಂದು ಮಾಧ್ಯಮದ ವರದಿಗಳು ಹೇಳಿವೆ.

ಶಾಲಾ, ಕಾಲೇಜು ಎಂದಿನಂತೆ ಆರಂಭ:

ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗುವ ಮೂಲಕ ಬಂದ್ ಬಿಸಿ ತಟ್ಟಿಲ್ಲ. ಹಲವೆಡೆ ಬಸ್ ಸಂಚಾರ ವಿರಳವಾಗಿದ್ದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

No Comments

Leave A Comment