Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಇಂಗ್ಲೆಂಡ್‌-ಆಸೀಸ್‌: ಆ್ಯಶಸ್‌ಗೂ ಮಿಗಿಲಾದ ಫೈಟ್‌

ಬರ್ಮಿಂಗಂ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮಳೆಯ ಹೊಡೆತಕ್ಕೆ ಸಿಲುಕಿ ಅತಂತ್ರ ಗೊಂಡಿರುವ ಆಸ್ಟ್ರೇಲಿಯದ ಮುಂದೆ ಶನಿವಾರ ಕೊನೆಯ ಅವಕಾಶ ತೆರೆಯಲ್ಪಡಲಿದೆ. ಈಗಾಗಲೇ ಎರಡನ್ನೂ ಗೆದ್ದು ಬಹಳ ಮೊದಲೇ ಸೆಮಿಫೈನಲ್‌ಗೆ ಲಗ್ಗೆ ಇರಿಸಿರುವ ಇಂಗ್ಲೆಂಡ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಯಾವ ರೀತಿಯಲ್ಲಿ ನೋಡಿದರೂ ಇದು ಆ್ಯಶಸ್‌ಗೂ ಮಿಗಿಲಾದ ಸ್ಪರ್ಧೆ ಎಂಬುದರಲ್ಲಿ ಎರಡು ಮಾತಿಲ್ಲ.

“ಎ’ ಬಣದ ದ್ವಿತೀಯ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಆಸ್ಟ್ರೇಲಿಯ ಮಾರ್ಗನ್‌ ಪಡೆ ಯನ್ನು ಮಗುಚಲೇ ಬೇಕು; ಅಕಸ್ಮಾತ್‌ ಸೋತರೆ ಕೂಟದಿಂದ ಹೊರಬೀಳುತ್ತದೆ. ಇದು ಸದ್ಯದ ಲೆಕ್ಕಾಚಾರ. ಆದರೆ ಇಲ್ಲಿ ಮೆದುಳಿಗೆ ಮೇವು ನೀಡುವ ಇನ್ನಷ್ಟು ಲೆಕ್ಕಾಚಾರಗಳಿವೆ. ಅಕಸ್ಮಾತ್‌ ಈ ಪಂದ್ಯವೂ ರದ್ದಾದರೆ, ನ್ಯೂಜಿಲ್ಯಾಂಡ್‌-ಬಾಂಗ್ಲಾ ನಡುವಿನ ಶುಕ್ರವಾರದ ಪಂದ್ಯವೂ ಸ್ಪಷ್ಟ ಫ‌ಲಿತಾಂಶ ಕಾಣದೇ ಹೋದರೆ ಆಗ ಸೆಮಿಫೈನಲ್‌ ಅದೃಷ್ಟ ಯಾರಿಗೆ ಒಲಿಯುತ್ತದೆಂಬುದೊಂದು ಕುತೂಹಲ. ಕಿವೀಸ್‌-ಬಾಂಗ್ಲಾ ಪಂದ್ಯದ ಫ‌ಲಿತಾಂಶ ಈಗಾಗಲೇ ಬಂದಿರುವುದರಿಂದ “ಎ’ ವಿಭಾಗದ ಒಂದು ಹಂತದ ಚಿತ್ರಣ ಲಭಿಸಿರುತ್ತದೆ. ಇರಲಿ…

ಆಂಗ್ಲರ ಗುರಿ ಅಜೇಯ ಓಟ
ಈ ಕೂಟದ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್‌ ಎರಡೂ ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದಿದೆ. ಬಾಂಗ್ಲಾ ನೀಡಿದ 306 ರನ್‌ ಸವಾಲನ್ನು ಎರಡೇ ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿದರೆ, ನ್ಯೂಜಿಲ್ಯಾಂಡನ್ನು 87 ರನ್ನುಗಳ ಭಾರೀ ಅಂತರದಿಂದ ಉರುಳಿಸಿದೆ. ತನ್ನ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಸಶಕ್ತ ಹಾಗೂ ಬಲಶಾಲಿ ತಂಡವನ್ನು ಹೊಂದಿರುವ ಇಂಗ್ಲೆಂಡಿಗೆ ಕಾಂಗರೂಗಳನ್ನು ಬೇಟೆಯಾಡುವುದು ಕಷ್ಟವಲ್ಲ. ಅಜೇಯ ಲೀಗ್‌ ಅಭಿಯಾನ ಮಾರ್ಗನ್‌ ತಂಡದ ಗುರಿ.

ಆರಂಭಕಾರ ಜಾಸನ್‌ ರಾಯ್‌ ಮಾತ್ರ ಈ ಕೂಟದಲ್ಲಿ ಕ್ಲಿಕ್‌ ಆಗಿಲ್ಲ. ಆದರೆ ಹೇಲ್ಸ್‌, ರೂಟ್‌, ಮಾರ್ಗನ್‌, ಸ್ಟೋಕ್ಸ್‌, ಬಟ್ಲರ್‌, ಅಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಬೌಲಿಂಗ್‌ ವಿಭಾಗ ವುಡ್‌, ಬಾಲ್‌, ಪ್ಲಂಕೆಟ್‌, ರಶೀದ್‌ ಅವರಿಂದ ಭಾರೀ ಬಲಿಷ್ಠವಾಗಿದೆ.

ಆಸ್ಟ್ರೇಲಿಯಕ್ಕೆ ಅದೃಷ್ಟ ಮುಖ್ಯ
ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯದ ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ. ಆದರೆ ಕಾಂಗರೂಗಳ ನಸೀಬು ಕೈಕೊಟ್ಟಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧ ಗೆಲ್ಲಬೇಕಾದರೆ ಮೊದಲು ಅದೃಷ್ಟ ಕೈಹಿಡಿಯಬೇಕು. ಆದರೆ ಶನಿವಾರವೂ ಬರ್ಮಿಂಗಂನಲ್ಲಿ ಮಳೆಯಾ ಗುವ ಸಾಧ್ಯತೆ ಇರುವುದರಿಂದ ಆತಂಕ ತಪ್ಪಿದ್ದಲ್ಲ.

ಇಂಗ್ಲೆಂಡ್‌ ವಿರುದ್ಧ ಜಯ ಕಾಣಬೇಕಾದರೆ ಆಸ್ಟ್ರೇಲಿಯದ ಬೌಲಿಂಗ್‌ ವಿಭಾಗ ಇನ್ನಷ್ಟು ಹರಿತ ಗೊಳ್ಳಬೇಕು. ಸ್ಟಾರ್ಕ್‌, ಹ್ಯಾಝಲ್‌ವುಡ್‌, ಕಮಿನ್ಸ್‌, ಝಂಪ ಘಾತಕ ದಾಳಿ ಸಂಘಟಿಸಬೇಕು. ಇವರೆಲ್ಲ ಸೇರಿ ಇಂಗ್ಲೆಂಡಿನ ಬಲಿಷ್ಠ ಬ್ಯಾಟಿಂಗ್‌ ಸರದಿಗೆ ನಿಯಂತ್ರಣ ಹೇರಿದರೆ ಆಸೀಸ್‌ ಮೇಲುಗೈ ಸಾಧಿಸಬಹುದು.

No Comments

Leave A Comment