Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕುಂದಾಪುರ :ಜೀವಕ್ಕೆ ಕಂಟಕವಾಗುತ್ತಿರುವ ಹೆದ್ದಾರಿ!

ಕುಂದಾಪುರ: 2–3 ದಿನಗಳಿಂದ ಸುರಿದ ಸಾಮಾನ್ಯ ಮಳೆಯಿಂದಾಗಿಯೇ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಪರಿಸ್ಥಿತಿ ಹೈರಾಣಾಗಿ ಹೋಗಿದೆ. ಪ್ರತಿಕ್ಷಣವೂ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಹೆದ್ದಾರಿ ಪ್ರಯಾಣಿಕರು, ‘ದಾರಿ ಯಾವುದಯ್ಯ.. ವೈಕುಂಠಕ್ಕೆ ದಾರಿ ತೋರಿಸಯ್ಯ…’ ಎನ್ನುವ ದಾಸರ ಪದ ಗುನುಗಿಸುವಂತಾಗಿದೆ.

ಕುಂದಾಪುರದಿಂದ ಮುಂದುವರಿದು ಸಾಗುತ್ತಿರುವ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪ್ರಾರಂಭವಾದ ದಿನದಿಂದಲೂ ಕುಂದಾಪುರದಿಂದ ಶಿರೂರುವರೆಗಿನ ತಾಲ್ಲೂಕಿನ ಜನರ ನೆಮ್ಮದಿಯನ್ನು ಹಾಳುಮಾಡಿದೆ. ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಕಾರ್ಯ ವೈಖರಿ ಇಂದಲ್ಲ ನಾಳೆ ಬದಲಾಗಬಹುದು ಎನ್ನುವ ತಾಲ್ಲೂಕಿನ ಜನತೆಯ ನಿರೀಕ್ಷೆಗಳು ಇದೀಗ ಮಳೆಯ ನೀರಿನಲ್ಲಿ ತೊಳೆದು ಹೋಗುವಂತಾಗಿದೆ.

ಅವೈಜ್ಞಾನಿಕವಾಗಿ ಸಾಗುತ್ತಿರುವ ಕಾಮಗಾರಿಯ ಬಗ್ಗೆ ಹೆದ್ದಾರಿಯ ಆಸುಪಾಸಿನವರಿಗೆ ಸ್ವಷ್ಟ ಮಾಹಿತಿಯೇ ಇಲ್ಲ. ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಎದುರು ಬಿದ್ದಿರುವ ರಾಶಿ ರಾಶಿ ಮಣ್ಣ ಗುಡ್ಡೆಗಳಿಂದಲೇ ನಮ್ಮ ಮನೆ ಮುಂದೆ ಹೆದ್ದಾರಿ ಕಾಮಗಾರಿ ಆರಂಭ ವಾಗುತ್ತಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳುವಂತಾಗಿದೆ.

ಮುಳ್ಳುಕಟ್ಟೆ, ನಾಗೂರು, ನಾವುಂದ, ಉಪ್ಪುಂದ ಮುಂತಾದ ಕಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಕೂಡು ರಸ್ತೆಯ ಪ್ರಯಾಣಿಕರು ಯಾವ ದಾರಿಯಲ್ಲಿ ಸಾಗಬೇಕು ಎನ್ನುವ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ತಿರುವು ದಾರಿಯನ್ನು ಕಂಡುಕೊಳ್ಳಲಾಗದೆ ಕಿ.ಮೀ. ದೂರ ಸಾಗಿ ಮತ್ತೆ ಯಾರಲ್ಲಿಯೋ ವಿಚಾರಿಸಿ ಹಿಂದಕ್ಕೆ ಬರುವುದು ಈ ಭಾಗಗಳಲ್ಲಿ ಮಾಮೂಲಿಯಾಗಿದೆ.

ಯಾವುದೇ ಭಾಗಗಳಲ್ಲಿ ಪೂರ್ಣ ಕಾಮಗಾರಿ ನೆಡೆಸಿದ ಉದಾಹರಣೆಗಳೇ ಕಾಣಿಸುತ್ತಿಲ್ಲ. ಅಂಡರ್‌ಪಾಸ್‌ಗಳ ನಿರ್ಮಾಣ ಮಾಡಿದರೇ ಅದಕ್ಕೆ ಹೊಂದಿಕೊಂಡಿರುವ ಸಂಪರ್ಕ ರಸ್ತೆಗಳ ಕಾಮಗಾರಿ ಬಾಕಿ ಉಳಿದಿವೆ. ಒಂದು ಭಾಗದ ರಸ್ತೆಯ ಕಾಮಗಾರಿ ಪೂರ್ಣವಾಗಿದ್ದರೆ ಇನ್ನೊಂದು ಬದಿಯ ಕೆಲಸ ಬಾಕಿ ಉಳಿದಿದೆ.

ಅರ್ಧ ರಸ್ತೆ ಡಾಂಬರೀಕರಣವಾಗಿದ್ದರೆ ಉಳಿದ ಭಾಗಗಳಿಗೆ ಜಲ್ಲಿ ಹಾಕಿ ಕೈ ಬಿಡಲಾಗಿದೆ. ಸೇತುವೆಗಳಿಗೆ ಹೊಂದಿಕೊಂಡಂತೆ ಎತ್ತರದಲ್ಲಿ ನಿರ್ಮಾಣವಾಗುವ ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ತಂದು ಸುರಿದಿರುವ ಮಣ್ಣಿನ ಗುಡ್ಡೆಗಳ ಬುಡದಲ್ಲಿ ತಡೆ ಚೀಲಗಳನ್ನು ಹಾಕದೆ ಇರುವುದರಿಂದಾಗಿ ಮಣ್ಣು ರಸ್ತೆಯ ಮೇಲೆ ಜರಿದು ಪ್ರಯಾಣಿಕರಿಗೆ ಅಪಾಯ ತಂದಿಡುವ ಸಾಧ್ಯತೆಗಳಿವೆ. ಕುಂದಾಪುರದ ಮಾರ್ಕೆಟ್‌ ಯಾರ್ಡ್‌, ತಲ್ಲೂರು, ಬೈಂದೂರು, ಕಂಬದಕೋಣಿ ಮುಂತಾದ ಕಡೆಗಳಲ್ಲಿ ಸರಾಗ ನೀರಿನ ಹರಿವಿಗೆ ತೋಡಕುಂಟಾಗಿ ಕೃತಕ ಕೊಳ ನಿರ್ಮಾಣವಾಗಿದೆ.

ಇದೆಂಥ ಪ್ಲಾನ್‌ ಮರ್ರೆ: ಜನರ ಉದ್ಗಾರ
ತಲ್ಲೂರಿನಿಂದ ಹೆಮ್ಮಾಡಿಗೆ ತೆರಳುವ ದಾರಿಯ ನಡುವೆ ಸಿಗುವ ಸೇತುವೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ರಸ್ತೆಗಳನ್ನ ನೋಡಿದ ಪ್ರತಿಯೊಬ್ಬರು ‘ಇದೆಂಥಾ ಪ್ಲಾನ್‌ ಮರ್ರೆ’ ಎನ್ನುವ ಉದ್ಗಾರ ತೆಗೆಯುತ್ತಿದ್ದಾರೆ. ಹಿಂದೆ ಇದ್ದ ಸೇತುವೆಯನ್ನು ಸಂಪರ್ಕಿಸುವ ರಸ್ತೆಗಳು ಹೊಸ ರಸ್ತೆಯಿಂದ 10–12 ಅಡಿಗಳಷ್ಟು ಕೆಳ ಭಾಗದಲ್ಲಿ ಸಾಗಿದರೆ, ಹೊಸ ಸೇತುವೆಯನ್ನು ಸಂಪರ್ಕಿಸುವ ರಸ್ತೆಗಳು ಅಷ್ಟೇ ಅಡಿಗಳಷ್ಟು ಮೇಲ್ಭಾಗದಲ್ಲಿ ಸಾಗುತ್ತಿವೆ.

ಕೆಳ ರಸ್ತೆಯಲ್ಲಿ ಸಾಗುವ ನತದೃಷ್ಟ ಪ್ರಯಾಣಿಕರು ಮೇಲಿನ ರಸ್ತೆಯಲ್ಲಿ ನಡೆದ ಅಪಘಾತಗಳಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳು ಒಂದೆಡೆಯಾದರೆ. ಮೇಲಿನ ರಸ್ತೆಗಳಿಂದ ಬೀಳುವ ಮಳೆಯ ನೀರಿನಿಂದ ಕೆಳ ರಸ್ತೆಯಲ್ಲಿ ಸಾಗುವ ಪ್ರಯಾಣಿಕರ ಗತಿ ಏನು ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಮಂಗಳೂರಿನಿಂದ ಕುಂದಾಪುರದವರೆಗೆ ಮುಗಿದಿರುವ ಚತುಷ್ಪಥ ಕಾಮಗಾರಿಯ ಬಹುತೇಕ ರಸ್ತೆಗಳ ಮೆಲ್ಪದರಗಳು ಸಮಾನ ಹೊಂದಾಣಿಯನ್ನು ಹೊಂದಿದ್ದರೆ; ಕುಂದಾಪುರದಿಂದ ಶಿರೂರವರೆಗೆ ಸಾಗುವ ರಸ್ತೆಗಳು ಪರಸ್ಪರ ಮೇಲೆ, ಕೆಳಗೆ ಎನ್ನುವ ಸ್ಥಿತಿ ಇದೆ. ಮರವಂತೆಯ ಕಡಲು ಕಿನಾರೆಗೆ ಹೊಂದಿಕೊಂಡಂತೆ ಇರುವ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಸೇತುವೆ ಹಾಗೂ ರಸ್ತೆಗಳಿಂದಾಗಿ ವಿಶ್ವ ಪ್ರಸಿದ್ಧಿಯಾದ ‘ಮರವಂತೆ ಕಡಲು ಕಿನಾರೆ’ಯ ವಿಹಂಗಮ ನೋಟ ಮರೆಯಾಗುತ್ತಿದೆ.

ಹೆದ್ದಾರಿಯಲ್ಲಿನ ಅವ್ಯವಸ್ಥೆಗಳ ಕುರಿತು ಪ್ರಶ್ನಿಸಲು ಕಂಪೆನಿಯ ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳ ದೂರವಾಣಿಗೆ ಕರೆ ಮಾಡಿದರೆ ಅದಕ್ಕೆ ಪ್ರತಿ ಸ್ಪಂದನ ಇಲ್ಲ ಎನ್ನುವ ಆರೋಪಗಳನ್ನು ಸ್ಥಳೀಯರು ಮಾಡುತ್ತಿದ್ದಾರೆ.

No Comments

Leave A Comment