Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಬಹುಪರಾಕ್‌ ಬೋಪಣ್ಣ!

ಪ್ಯಾರಿಸ್‌: ಕೊಡಗಿನ ಟೆನಿಸ್‌ ವೀರ ರೋಹನ್‌ ಬೋಪಣ್ಣ ನೂತನ ಇತಿಹಾಸ ಬರೆದಿದ್ದಾರೆ. ತಮ್ಮ ಗ್ರ್ಯಾನ್‌ಸ್ಲಾಮ್‌ ಬಾಳ್ವೆಯ ಮೊದಲ ಪ್ರಶಸ್ತಿಯೊಂದಿಗೆ ದೇಶದ ಕ್ರೀಡಾಪ್ರಿಯ ರಿಗೆ ಅಪೂರ್ವ ಕಾಣಿಕೆ ಸಲ್ಲಿಸಿದ್ದಾರೆ. ಇದಕ್ಕೆ ಸಾಕ್ಷಿಯಾದದ್ದು ಈ ಬಾರಿಯ ಫ್ರೆಂಚ್‌ ಓಪನ್‌ ಚಾಂಪಿಯನ್‌ಶಿಪ್‌.

“ರೋಲ್ಯಾಂಡ್‌ ಗ್ಯಾರೋಸ್‌’ನಲ್ಲಿ ಗುರುವಾರ ನಡೆದ ಮಿಕ್ಸೆಡ್‌ ಡಬಲ್ಸ್‌ ಫೈನಲ್‌ನಲ್ಲಿ ರೋಹನ್‌ ಬೋಪಣ್ಣ ಕೆನಡಾದ ಗ್ಯಾಬ್ರಿಯೇಲಾ ದಾಬ್ರೋವ್‌ಸ್ಕಿ ಜತೆ ಸೇರಿ ಗೆಲುವಿನ ಬಾವುಟ ಹಾರಿಸಿದರು. 7ನೇ ಶ್ರೇಯಾಂಕದ ಈ ಜೋಡಿ ಪ್ರಶಸ್ತಿ ಸಮರದಲ್ಲಿ ಶ್ರೇಯಾಂಕ ರಹಿತ ಜೋಡಿಯಾದ ಜರ್ಮನಿಯ ಅನ್ನಾ ಲೆನಾ ಗ್ರೋನ್‌ಫೆಲ್ಡ್‌-ಕೊಲಂಬಿಯಾದ ರಾಬರ್ಟ್‌ ಫ‌ರಾ ವಿರುದ್ಧ ದಿಟ್ಟ ಹೋರಾಟವೊಂದನ್ನು ಪ್ರದರ್ಶಿಸಿ 2-6, 6-2, 12-10 ಅಂತರದಿಂದ ಗೆದ್ದು ಬಂದರು.

ನಾಲ್ಕನೇ ಭಾರತೀಯ
ರೋಹನ್‌ ಬೋಪಣ್ಣ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಭಾರತದ 4ನೇ ಟೆನಿಸಿಗನಾಗಿದ್ದಾರೆ. ಉಳಿದವರೆಂದರೆ ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ ಮತ್ತು ಸಾನಿಯಾ ಮಿರ್ಜಾ. ಇದು ಬೋಪಣ್ಣ ಅವರ ಕೇವಲ 2ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಇದಕ್ಕೂ ಮುನ್ನ ಅವರು ಪಾಕಿಸ್ಥಾನದ ಐಸಮ್‌ ಉಲ್‌ ಹಕ್‌ ಖುರೇಶಿ ಜತೆಗೂಡಿ 2010ರ ಯುಎಸ್‌ ಓಪನ್‌ ಕೂಟದ ಫೈನಲ್‌ ತಲುಪಿದ್ದರು. ಆದರೆ ಅಲ್ಲಿ ಅಮೋಘ ಹೋರಾಟದ ಬಳಿಕ ಅಮೆರಿಕದ ಬ್ರಿಯಾನ್‌ ಸೋದರರಿಗೆ 6-7 (5-7), 6-7 (4-7) ಅಂತರದಿಂದ ಸೋಲಬೇಕಾಯಿತು.

ಮೊದಲ ಸೆಟ್‌ ಕಳೆದುಕೊಂಡ ಬಳಿಕ ಬೋಪಣ್ಣ-ಗ್ಯಾಬ್ರಿಯೇಲಾ ಎದುರಾಳಿ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. 6-2ರಿಂದಲೇ ಗೆದ್ದು ಬಂದರು. ಆದರೆ ತೃತೀಯ ಹಾಗೂ ನಿರ್ಣಾಯಕ ಸೆಟ್‌ ಮಾತ್ರ ತೂಗುಯ್ನಾಲೆ ಆಗುತ್ತಲೇ ಇತ್ತು. 10-11ರಲ್ಲಿ ಸರ್ವ್‌ ಮಾಡುತ್ತಿದ್ದ ವೇಳೆ ಗ್ರೋನ್‌ಫೆಲ್ಡ್‌ ಡಬಲ್‌ ಫಾಲ್ಟ್ ಎಸಗುವುದರೊಂದಿಗೆ ಬೋಪಣ್ಣ ಜೋಡಿಯ ಕನಸು ನನಸಾಯಿತು!

No Comments

Leave A Comment