Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಉಳ್ಳಾಲ: ಅಪಾಯಕ್ಕೆ ಸಿಲುಕಿದ ಬಾರ್ಜ್‌ನಿಂದ ಎಲ್ಲಾ 27 ಜನರ ರಕ್ಷಣೆ

ಉಳ್ಳಾಲ: ಮೊಗವೀರಪಟ್ಣ ಸಮೀಪ ಸಮುದ್ರ ಮಧ್ಯದಲ್ಲಿ ಶನಿವಾರ ಅಪರಾಹ್ನ ಅಪಾಯಕ್ಕೆ ಸಿಲುಕಿದ್ದ ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿ ನಿರತ ಬಾರ್ಜ್‌ನಲ್ಲಿ 27 ಮಂದಿಯನ್ನು ಸತತ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ರಕ್ಷಣೆ ಮಾಡಲಾಗಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧ ವಾಗಿದ್ದು, ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್‌ ಇದರಲ್ಲಿ ಸಿಲುಕಿಕೊಂಡು 27 ಮಂದಿ ಪ್ರಾಣಾಪಾಯಕ್ಕೆ ಸಿಲುಕಿಕೊಂಡಿದ್ದರು.

ಯು.ಟಿ.ಖಾದರ್ ಪಣಂಬೂರಿನಲ್ಲಿ ಮೊಕ್ಕಾಂ

ಬಾರ್ಜ್ ದುರಂತದ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವ ಸ್ಥಳೀಯ ಶಾಸಕರು ಹಾಗೂ ರಾಜ್ಯ ಆಹಾರ ಸಚಿವರಾದ ಯು.ಟಿ.ಖಾದರ್ ಬೆಳ್ಳಂಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ತೆರಳಿ ಅಧಿಕಾರಿಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಿದರು.

ಮೈಸೂರು ಕಾರ್ಯಕ್ರಮ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮಂಗಳೂರು ತಲುಪಿರುವ ಸಚಿವ ಖಾದರ್ ಆ ನಂತರ ರಂಝಾನ್ ಉಪವಾಸದ ಸಹರಿ ಸೇವಿಸಿ ಮಸೀದಿಯಲ್ಲಿ ಭಾನುವಾರ ಬೆಳಗ್ಗಿನ ನಮಾಝ್ ಮುಗಿಸಿ ಬಾರ್ಜ್ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ವಿಶೇಷ ಪ್ರಾರ್ಥನೆ ನಡೆಸಿದರು. ಬಳಿಕ ನೇರವಾಗಿ ಪಣಂಬೂರು ಕೋಸ್ಟ್ ಗಾರ್ಡ್ ಕಛೇರಿಗೆ ತೆರಳಿ ಕಾರ್ಯಾಚರಣೆ ತಂಡದೊಂದಿಗೆ ಕ್ರಿಯಾಶೀಲರಾಗಿದ್ದರು.

ಕೋಸ್ಟ್ ಗಾರ್ಡ್ ಡಿಐಜಿ ಎಸ್.ಎಸ್. ದಾಸಿಲ, ಕಮಾಂಡೆಂಟ್ ಜಸ್ವಾಲ್ ಅವರಲ್ಲಿ ಕಾರ್ಯಾಚರಣೆಯ ರೂಪುರೇಷೆಯ ಬಗ್ಗೆ ಸಚಿವರು ಚರ್ಚಿಸಿದರು.

ಕಾರ್ಯಾಚರಣೆಗೆ Air Cutpon Vesel

ಬ್ರಿಟಿಷ್ ಕಂಪೆನಿಯ ದುಬಾರಿ ಎ.ಸಿ.ವಿ. (Air Cutpon Vesel) ಓವರ್ ಕ್ರಾಫ್ಟ್ ಬೋಟನ್ನು ಇದೀಗ ಬೆಳಗ್ಗಿನಿಂದ ಕಾರ್ಯಾಚರಣೆಗೆ ಇಳಿಸಲಾಗಿದೆ. ಈ ವಿಶೇಷ ಬೋಟ್ ನೀರು ಹಾಗೂ ಮರಳಿನಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. (ನಿನ್ನೆ ಈ ಬೋಟ್ ದೂರ ಇತ್ತೆನ್ನಲಾಗಿದೆ.) 50 ಮಂದಿ ಕೋಸ್ಟ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಎಡಿಬಿ ಯೋಜನೆಯಡಿ 223 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲದಲ್ಲಿ ಶಾಶ್ವತ ತಡೆ ಗೋಡೆ ನಿರ್ಮಾಣ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ದಡದಿಂದ 700 ಮೀ. ದೂರದಲ್ಲಿ ಬಾರ್ಜನ್ನು ನಿಲ್ಲಿಸಿ ಕಾಮಗಾರಿ ನಡೆಸಲಾಗುತ್ತಿದೆ. ಇದರಲ್ಲಿ ಸುಮಾರು 27 ಮಂದಿ ಕಾರ್ಮಿಕರು ಕೆಲಸ ನಿರತರಾಗಿದ್ದರು.

ಶನಿವಾರ ಮಧ್ಯಾಹ್ನದಿಂದ ಕಡಲು ಪ್ರಕ್ಷುಬ್ಧವಾಗತೊಡಗಿದ್ದು, ಭಾರೀ ಗಾತ್ರದ ಅಲೆಗಳು ಅಪ್ಪಳಿಸಲು ಆರಂಭ ವಾಯಿತು. ಅಲೆಗಳ ಹೊಡೆತಕ್ಕೆ ಬಾರ್ಜ್‌ ಅಪಾಯದಲ್ಲಿ ಸಿಲುಕಿಕೊಂಡಿತ್ತು. ಈ ಕುರಿತಂತೆ ಬಾರ್ಜ್‌ನಲ್ಲಿದ್ದ ಸಿಬಂದಿ ರಕ್ಷಣೆ ಕೋರಿ ಸಂದೇಶ ರವಾನಿಸಿದ್ದರು. ಆದರೆ ಸಮುದ್ರ ಪ್ರಕ್ಷುಬ್ಧವಾಗಿದ್ದ ಕಾರಣ ಅದರಲ್ಲಿದ್ದ ಕಾರ್ಮಿಕರನ್ನು ದಡಕ್ಕೆ ಕರೆತರಲು ಬೋಟ್‌ಗಳನ್ನು ಕಳುಹಿಸಲು ಅಸಾಧ್ಯ ವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಸ್ಟ್‌ ಗಾರ್ಡ್‌ಗೆ ಮಾಹಿತಿ ನೀಡಲಾಯಿತು.

ಅಪರಾಹ್ನ 1.30ಕ್ಕೆ ಘಟನೆ ಸಂಭವಿಸಿದ್ದು, ಕೂಡಲೇ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳಿಗೆ ಮಾಹಿತಿ ರವಾನಿಸ ಲಾಯಿತು. ಆದರೆ ಕೋಸ್ಟ್‌ ಗಾರ್ಡ್‌ ಸಿಬಂದಿ ಸಂಜೆ 5.30ರ ಬಳಿಕ ಬಂದಿದ್ದು, ಬ್ರೇಕ್‌ ವಾಟರ್‌ ಹಾಕಿರುವುದರಿಂದ ಅವರ ನೌಕೆಗೆ ಅಲ್ಲಿಗೆ ಹೋಗಲು ಸಾಧ್ಯವಾಗದು ಎಂದು ತಿಳಿಸಿದರು. ಬಳಿಕ ನಾಲ್ಕು ಡಿಂಗಿ (ಸಣ್ಣ ಗಾತ್ರದ ಫೈಬರ್‌ ಬೋಟ್‌)ಗಳನ್ನು ಬಾರ್ಜ್‌ ಬಳಿಗೆ ಕಳುಹಿಸಿ ರಕ್ಷಣಾ ಕಾರ್ಯ ಆರಂಭಿಸಲಾಯಿತು.

ಅಪಾಯದ ಸೂಚನೆ: ಸಂಜೆ ವೇಳೆಗೆ ಬಾರ್ಜ್‌ ತೀರಾ ಅಪಾಯಕ್ಕೆ ಸಿಲುಕಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. 6 ಗಂಟೆ ವೇಳೆಗೆ ಬಾರ್ಜ್‌ ಸಿಬಂದಿ ಸ್ಫೋಟಕವನ್ನು ಸಿಡಿಸಿ ಅಪಾಯದ ಸಂಕೇತವನ್ನು ರವಾನಿಸಿದ್ದರು. ಕೋಸ್ಟ್‌ ಗಾರ್ಡ್‌ ರಕ್ಷಣಾ ಕಾರ್ಯ ಆರಂಭಿಸಿ ಸಿಬಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿತು. ಕೆಲ ಹೊತ್ತಿನಲ್ಲಿ 2 ಬಾರಿ ಸ್ಫೋಟಕ ಸಿಡಿಸಿ ಬಾರ್ಜ್‌ ತೀರಾ ಅಪಾಯದಲ್ಲಿದೆ ಎಂದು ಸಂಕೇತ ರವಾನಿಸಿದರು.

ಅಧಿಕಾರಿಗಳ ಭೇಟಿ
ಡಿಸಿಪಿಗಳಾದ ಕೆ. ಎಂ. ಶಾಂತರಾಜು ಮತ್ತು ಡಾ| ಸಂಜೀವ್‌ ಎಂ. ಪಾಟೀಲ್‌, ಎಸಿಪಿ ಶ್ರುತಿ, ತಹ
ಸೀಲ್ದಾರ್‌ ಮಹಾದೇವಯ್ಯ ಮತ್ತು ಇತರ ಅಧಿಕಾರಿ ಗಳು, ಪೊಲೀಸರು ಉಳ್ಳಾಲ ಮೊಗವೀರ ಪಟ್ಣಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು. ಬಾರ್ಜ್‌ ಅಪಾಯಕ್ಕೆ ಸಿಲುಕುವ ಸಾಧ್ಯತೆಯ ಸುದ್ದಿ ತಿಳಿದು ಸಂಜೆ 5.30ರ ವೇಳೆಗೆ ಕೋಟೆಪುರದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು.

ಏರ್‌ ಲಿಫ್ಟ್‌ ರಾತ್ರಿ ಅಸಾಧ್ಯ
ಕೋಸ್ಟ್‌ಗಾರ್ಡ್‌ ಸಿಬಂದಿಗೆ ಮಧ್ಯಾಹ್ನವೇ ಮಾಹಿತಿ ಲಭಿಸಿದ್ದರೂ ಅವರು ಸ್ಪಂದಿಸಿದ್ದು ಸಂಜೆ 5.30ಕ್ಕೆ. ಹಾಗೆ ಬಂದವರು ತಮ್ಮ ನೌಕೆ ಸ್ಥಳಕ್ಕೆ ಹೋಗಲು ಸಾಧ್ಯವಾಗದು ಎಂದು ತಿಳಿಸಿ ಡಿಂಗಿಯನ್ನು ಕಳುಹಿಸಿಕೊಟ್ಟಿದ್ದರು. ಒಂದು ಡಿಂಗಿಯ ಮೂಲಕ 4 ಮಂದಿಯನ್ನು ರಾತ್ರಿ 8 ಗಂಟೆಯ ವೇಳೆಗೆ ರಕ್ಷಿಸಿ ಎನ್‌ಎಂಪಿಟಿ ಕಡೆಗೆ ಕರೆದೊಯ್ದಿದ್ದಾರೆ. ಹೆಲಿಕಾಪ್ಟರ್‌ ಮೂಲಕ ರಕ್ಷಣಾ ಕಾರ್ಯ ರಾತ್ರಿ ವೇಳೆ ಅಸಾಧ್ಯ ಎಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

2 ವರ್ಷಗಳಿಂದ  ಕಾಮಗಾರಿ
ಬ್ರೇಕ್‌ ವಾಟರ್‌ ಕಾಮಗಾರಿ ಕಳೆದ  2 ವರ್ಷಗಳಿಂದ ನಡೆಯುತ್ತಿದೆ ಅಳಿವೆ ಬಾಗಿಲ ಬಳಿ ಹಳೇ ಬ್ರೇಕ್‌ವಾಟರ್‌ ನವೀ
ಕರಣ, ಬಮ್ಸ್‌ì (ಮರಳ ದಿಣ್ಣೆ)ರಚನೆ ಮತ್ತು 3ನೇ ಹಂತದಲ್ಲಿ ರೀಫ್‌ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. 1 ವಾರದೊಳಗೆ ಕೆಲಸ ಪೂರ್ತಿಗೊಂಡು ಬಾರ್ಜ್‌ ಹೋಗುವುದರಲ್ಲಿತ್ತು.

ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆ ಸ್ಥಗಿತ
ರಕ್ಷಣೆಗೆ ಹೋದ ಸಣ್ಣ ಬೋಟ್‌ನಲ್ಲೂ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್‌ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಿದೆ. ಬಾರ್ಜ್‌ ನಲ್ಲಿದ್ದ ನಾಲ್ವರನ್ನು ಬೋಟ್‌ನಲ್ಲಿ ಕರೆದೊಯ್ದು ರಕ್ಷಣಾ ಹಡಗಿಗೆ ತಲುಪಿಸಿದ್ದಾರೆ. ಉಳಿದವರನ್ನು ಬೋಟ್‌ನಲ್ಲಿ ಕರೆದೊಯ್ಯುವಾಗ ಕಲ್ಲು ಬಡಿದು ಬೋಟ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಅದರಲ್ಲಿದ್ದವರನ್ನು ಮತ್ತೆ ಬಾರ್ಜ್‌ಗೆ ಬಿಡಲಾಗಿದೆ. ರಕ್ಷಣಾ ಕಾರ್ಯ ರವಿವಾರ ಬೆಳಗ್ಗೆ ಮುಂದುವರಿಯಲಿದೆ ಎಂದು ಕೋಸ್ಟ್‌ಗಾರ್ಡ್‌ ಕಮಾಂಡೆಂಟ್‌ ಗುಲ್ವಿಂದರ್‌ ಸಿಂಗ್‌ ತಿಳಿಸಿದ್ದರು.

ಪ್ರತಿಕೂಲ ಹವಾಮಾನ
ಉಳ್ಳಾಲ: ಬಾರ್ಜ್‌ನಲ್ಲಿದ್ದವರನ್ನು ರಕ್ಷಿಸಲು ಪ್ರತಿಕೂಲ ಹವಾಮಾನ ದೊಡ್ಡ ಸಮಸ್ಯೆಯಾಗಿದೆ. ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ರಭಸವಾಗಿ ಗಾಳಿ ಬೀಸುತ್ತಿರುವುದರಿಂದ ಬಾರ್ಜ್‌ನ ಹತ್ತಿರ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೋಸ್ಟ್‌ಗಾರ್ಡ್‌ನ ರಕ್ಷಣಾ ಬೋಟ್‌ ಇದರಲ್ಲಿಗೆ ಪ್ರಯಾಣಿಸಿದರೂ ಅವರಿಗೆ ಹತ್ತಿರ ಹೋಗಲು ಆಗುತ್ತಿಲ್ಲ. ಆದುದರಿಂದ ಡಿಂಗಿ(ರಬ್ಬರ್‌ ದೋಣಿ)ಯನ್ನು ಬಳಸಿ ರಕ್ಷಣಾ ಕಾರ್ಯ ನಡೆಸಬೇಕಾಗಿದೆ. ಸಮುದ್ರದಲ್ಲಿ ಬೃಹತ್‌ ಅಲೆ ಏಳುತ್ತಿರುವುದರಿಂದ ಡಿಂಗಿಯನ್ನು ಕಳುಹಿಸುವುದಕ್ಕೆ ಅಡ್ಡಿಯಾಗಿದೆ. ಶನಿವಾರ ಒಮ್ಮೆ ಮಾತ್ರ ಡಿಂಗಿ ಮೂಲಕ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಯಿತು.

ಪ್ರಸ್ತುತ ಸಮುದ್ರದಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಡಿಂಗಿ ಬೋಟ್‌ ರಭಸದ ಗಾಳಿಗೆ ಸಿಲುಕಿ ನಿಯಂತ್ರಣಕ್ಕೆ ಸಿಗದೇ ಇರುವುದರಿಂದ ಈ ಮೂಲಕವೂ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿದೆ. ರಾತ್ರಿ ಒಂದು ವೇಳೆ ಗಾಳಿಯ ವೇಗ ಕಡಿಮೆಯಾದರೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕೋಸ್ಟ್‌ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ. ಆಳ ಸಮುದ್ರಕ್ಕೂ ಹೋಗುವಂತಿಲ್ಲ ಕಿನಾರೆಗೂ ಬರುವಂತಿಲ್ಲ ಪ್ರಸ್ತುತ ಬಾರ್ಜ್‌ ಸಮುದ್ರ ಕಿನಾರೆ ಮತ್ತು ತಡೆಗೋಡೆ  ನಡುವೆ ಇರುವುದರಿಂದ ಅದು ಆಚೆಯೂ ಹೋಗುವಂತಿಲ್ಲ. ಇತ್ತ ಕಿನಾರೆ ಯತ್ತಲೂ ಬರುವಂತಿಲ್ಲ. ಒಟ್ಟಾರೆಯಾಗಿ ಸಮುದ್ರದ ನಡುವೆ ಅತಂತ್ರ ಸ್ಥಿತಿಗೆ ಸಿಲುಕಿದೆ. ಕೋಸ್ಟ್‌ ಗಾರ್ಡ್‌ ಹಡಗಿನ ರಕ್ಷಣಾ ಕಾರ್ಯಕ್ಕೂ ಇದೇ ಅಡ್ಡಿಯಾಗಿರುವುದು. ಪ್ರಸ್ತುತ ಬಾರ್ಜ್‌ ಕಿನಾರೆಯಿಂದ 700 ಮೀಟರ್‌ ದೂರದಲ್ಲಿದೆ. ಇಲ್ಲಿ ಸಾಕಷ್ಟು  ಆಳ ಇಲ್ಲದಿರುವುದರಿಂದ ಹಡಗು ಇಲ್ಲಿಗೆ ಬರಲು ಆಗುತ್ತಿಲ್ಲ.

ಶನಿವಾರ ರಕ್ಷಣಾ ಮೊರೆಯಂತೆ ಕೋಸ್ಟ್‌ಗಾರ್ಡ್‌ ಹಡಗು ಬಂದಿತಾದರೂ ಇಷ್ಟೊಂದು ಹತ್ತಿರ ಬರಲಾರದು 1,000 ಮೀಟರ್‌ ದೂರದಲ್ಲಿ ನಿಂತು ಡಿಂಗಿಯನ್ನು ಕಳುಹಿಸಿತ್ತು. ಇನ್ನು ಸಮುದ್ರ ಬದಿಯಿಂದಲೂ ರಕ್ಷಣಾ ಕಾರ್ಯ ನಡೆಸಲು ಅಸಾಧ್ಯವಾಗಿದೆ. ಬೃಹತ್‌ ಅಲೆಗಳು ಅಪ್ಪಳಿಸುತ್ತಿರುವುದರಿಂದ ಕಿನಾರೆಯಿಂದ ದೋಣಿಗಳ ಮೂಲಕ ಬಾರ್ಜ್‌ ಅನ್ನು ತಲುಪುವುದು ಕೂಡ ಅಸಾಧ್ಯವಾಗಿದೆ. ಬಾರ್ಜ್‌ ಸ್ವಯಂ ಆಗಿ ಚಲಿಸಲು ಅಸಾಧ್ಯವಾಗಿದ್ದು, ಅದನ್ನು ಎಳೆದೊಯ್ಯಲು ಬೇರೊಂದು ಹಡಗು ಬರಬೇಕಾಗಿದೆ. ಈ ಹಡಗು ಮುಂಬಯಿಯಿಂದ ಹೊರಟಿದ್ದು ರವಿವಾರ ಬೆಳಗ್ಗೆ ಇಲ್ಲಿಗೆ ತಲುಪುವ ನಿರೀಕ್ಷೆ ಹೊಂದಲಾಗಿದೆ. ಆದರೆ ಅಷ್ಟರೊಳಗೆ ಸಮಸ್ಯೆ ಎದುರಾಗಿದೆ. ನೌಕಾದಳಕ್ಕೂ ಅಸಾಧ್ಯ ಬಾರ್ಜ್‌ ಅಪಾಯದಲ್ಲಿರುವುದನ್ನು ತಿಳಿದ ಸಚಿವ ಯು.ಟಿ. ಖಾದರ್‌ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಮೂಲಕ  ನೌಕಾದಳದ ನೆರವು ಪಡೆಯುವ ಪ್ರಯತ್ನ ನಡೆಸಿದರು. ಬಾರ್ಜ್‌ ಆಳ ಸಮುದ್ರದಲ್ಲಿ ಇರದಿರುವುದರಿಂದ ಕೋಸ್ಟ್‌ಗಾರ್ಡ್‌ ಎದುರಿಸುತ್ತಿರುವ ಸಮಸ್ಯೆಯನ್ನೇ ನೌಕಾದಳದ ಹಡಗು ಕೂಡ ಎದುರಿಸ ಬೇಕಾಗುತ್ತದೆ. ಆದುದರಿಂದ ನೌಕಾದಳದ ಹಡಗು ಬಂದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬ ಮಾಹಿತಿ ದೊರಕಿತು.

ಬರಲಿದೆ ಹೆಲಿಕಾಪ್ಟರ್‌
ಕೋಸ್ಟ್‌ಗಾರ್ಡ್‌ನ ಹೆಲಿಕಾಪ್ಟರ್‌ ಕಾರವಾರದಲ್ಲಿದ್ದು ಅದು ರವಿವಾರ ಬೆಳಗ್ಗೆ 6 ಗಂಟೆಗೆ ಇಲ್ಲಿಗೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ಶನಿವಾರ ತಡವಾಗಿ ಮಾಹಿತಿ ದೊರಕಿದ್ದರಿಂದ ಕತ್ತಲಿನಲ್ಲಿ ಕಾರ್ಯಾಚರಣೆ ಅಸಾಧ್ಯ. ಬೆಳಗ್ಗೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಂಕರ್‌ ತುಂಡಾಗಿ ಸಮಸ್ಯೆ
ಬಾರ್ಜ್‌ ಕಲ್ಲುಗಳಿಗೆ ಢಿಕ್ಕಿ  ಹೊಡೆದು ಅದರ ಆ್ಯಂಕರ್‌ ತುಂಡರಿಸಲ್ಪಟ್ಟು  ಕಲ್ಲುಗಳೆಡೆಗೆ ಸಿಲುಕಿ ಕೊಂಡಿತು. ಇದೇ ವೇಳೆ ಸಮುದ್ರ ಕೂಡ ಪ್ರಕ್ಷುಬ್ಧ ವಾಗತೊಡಗಿತು. ಗಾಳಿ ಮತ್ತು ಅಲೆಗಳ ಅಬ್ಬರದ ರಭಸಕ್ಕೆ ಬಾರ್ಜ್‌ ಅಲ್ಲೋಲ ಕಲ್ಲೋಲಗೊಂಡು ಮುಳುಗುವ ಸ್ಥಿತಿಗೆ ತಲುಪಿದೆ.

ರೀಪ್‌ಗೆ ಕಟ್ಟಿದ ಚೈನ್‌ ತುಂಡು 
ರೀಪ್‌ಗೆ ಕಟ್ಟಿದ ಚೈನ್‌ ತುಂಡಾಗಿ  ಬಾರ್ಜ್‌ನ ಒಂದು ಎಂಜಿನ್‌ಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಬಾರ್ಜ್‌ನಲ್ಲಿ ರಂಧ್ರ ಉಂಟಾಗಿ ನೀರು ಒಳಬಂತು. ಬಾರ್ಜ್‌ ಕಲ್ಲುಗಳಿಗೆ ಸಿಲುಕಿದ್ದು, ಅಪಾಯದ ಸ್ಥಿತಿಯಲ್ಲಿದೆ. ಪ್ರಸ್ತುತ ನೀರನ್ನು ಹೊರಹಾಕುವ ಕೆಲಸ ನಡೆಯುತ್ತಿದೆ ಎಂದು ಬಾರ್ಜ್‌ನಲ್ಲಿರುವ  ಸಿಬಂದಿ ಶೋಭಿತ್‌ ತಿಳಿಸಿದ್ದಾರೆ.

ಏನು ?
ಬಾರ್ಜ್‌ ಅಪಾಯದಲ್ಲಿ
ಎಲ್ಲಿ ?
ಉಳ್ಳಾಲ ಸಮುದ್ರದಲ್ಲಿ
ಯಾವಾಗ ?
ಶನಿವಾರ ಅಪರಾಹ್ನ

No Comments

Leave A Comment