Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಎಎಫ್‌ಸಿ ಕಪ್ ಪ್ರೀಕ್ವಾರ್ಟರ್‌ ಜಯದ ವಿಶ್ವಾಸದಲ್ಲಿ ಬಿಎಫ್‌ಸಿ

ಬೆಂಗಳೂರು: ಫೆಡರೇಷನ್ ಕಪ್ ಗೆದ್ದ ವಿಶ್ವಾಸದಲ್ಲಿ ತೇಲಾಡುತ್ತಿರುವ ಬೆಂಗ­ಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ತಂಡವು ಈಗ ಎಎಫ್‌ಸಿ ಕಪ್  ಟೂರ್ನಿಯ ಪ್ರೀಕ್ವಾರ್ಟರ್‌­ಫೈನಲ್‌ಗೆ ಅರ್ಹತೆ ಗಳಿಸುವತ್ತ ಚಿತ್ತ ನೆಟ್ಟಿದೆ.

ಕಂಠೀರವ ಕ್ರೀಡಾಂಗಣದಲ್ಲಿ  ಬುಧವಾರ ನಡೆಯಲಿರುವ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಬಿಎಫ್‌ಸಿ ತಂಡವು ಮಾಲ್ಡೀವ್ಸ್‌ನ ಮಾಜಿಯಾ ಸ್ಪೋರ್ಟ್ಸ್‌ ಮತ್ತು ರಿಕ್ರಿಯೇಷನ್  ಕ್ಲಬ್ ತಂಡವನ್ನು ಎದುರಿಸಲಿದೆ.

ಟೂರ್ನಿಯ 16ರ ಘಟ್ಟಕ್ಕೆ ಪ್ರವೇಶಿಸಲು ಬಿಎಫ್‌ಸಿ ತಂಡವು  ಈ ಪಂದ್ಯದಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಈ ತಂಡ ಹೋದ ವರ್ಷದ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ ದಾಖಲೆ ಬರೆದಿತ್ತು.

ಈ ತಂಡ ಈ ಬಾರಿಯೂ ಅಂತಹ ಸಾಧನೆಯನ್ನು ಮಾಡುವ ಛಲದಲ್ಲಿದೆ. ಏಪ್ರಿಲ್ 4ರಂದು ಮಾಲ್ಡೀವ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಉಭಯ ತಂಡಗಳೂ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಬೆಂಗಳೂರು ತಂಡವು  ಕೊನೆಯ ಕ್ಷಣಗಳಲ್ಲಿ  ಸ್ಟ್ರೈಕರ್ ಜಾನ್ ಜಾನ್ಸನ್ ಗಳಿಸಿದ ಗೋಲಿನ ಬಲದಿಂದ 1–0ಯಿಂದ ಗೆದ್ದಿತ್ತು.  ಟೂರ್ನಿಯಲ್ಲಿ ಮಾಜಿಯಾ ತಂಡವು 12 ಮತ್ತು ಬಿಎಫ್‌ಸಿ 9 ಅಂಕಗಳನ್ನು ಹೊಂದಿದೆ.

ವಿನೀತ್ ಮೇಲೆ ಭರವಸೆ ಈಚೆಗೆ ನಡೆದಿದ್ದ ಫೆಡರೇಷನ್ ಕಪ್ ಟೂರ್ನಿಯ ಫೈನಲ್‌ನಲ್ಲಿ ಮೋಹನ್ ಬಾಗನ್ ತಂಡದೆದುರು ಎರಡು ಗೋಲು ಗಳಿಸಿ  ಬಿಎಫ್‌ಸಿ ಗೆಲುವಿನ ರೂವಾರಿಯಾಗಿದ್ದ ಸಿ.ಕೆ. ವಿನೀತ್ ಅಪಾರ ಭರವಸೆ ಮೂಡಿಸಿದ್ದಾರೆ.

ನಾಯಕ ಸುನಿಲ್ ಚೆಟ್ರಿ ಮತ್ತು ಉದಾಂತ್ ಸಿಂಗ್ ಅವರು ಗಾಯಗೊಂಡಿದ್ದು ಈ ಪಂದ್ಯಕ್ಕೆ ಆಲಭ್ಯರಾಗಿದ್ದಾರೆ.  ಆದ್ದರಿಂದ ಕೇರಳದ ಆಟಗಾರ ವಿನೀತ್ ಹೊಣೆ ಹೆಚ್ಚಲಿದೆ.
ಫೆಡ್‌ ಕಪ್‌ನಲ್ಲಿ ಅಮಾನತು ಶಿಕ್ಷೆ ಮುಗಿಸಿರುವ ಕ್ಯಾಮರಾನ್ ವಾಟ್ಸನ್‌ ಈ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಮಿಡ್‌ಫೀಲ್ಡರ್‌ ಯುಗೆನ್ಸನ್ ಲಿಂಗ್ಡೋ ಕೂಡ ತಂಡದ ಬಲ ಹೆಚ್ಚಿಸಲಿದ್ದಾರೆ.

ಪ್ರವಾಸಿ ತಂಡವು ಟೂರ್ನಿಯಲ್ಲಿ ಇದುವರೆಗೆ  ನಾಲ್ಕು ಜಯ ದಾಖಲಿಸಿದೆ. ತಂಡದ ಸ್ಟ್ರೈಕರ್ ಮೊಹಮದ್ ಉಮೇರ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.  ಅವರು ಇಲ್ಲಿಯೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಎರಡೂ ತಂಡಗಳಿಗೆ ಈ ಪಂದ್ಯವು ಮಹತ್ವದ್ದಾಗಿರುವುದರಿಂದ  ತುರುಸಿನ ಹಣಾಹಣಿಯ ನಿರೀಕ್ಷೆ ಇದೆ. ರೋಚಕ ಹೋರಾಟ­ವನ್ನು ವೀಕ್ಷಿಸಲು ಉದ್ಯಾನ-­ನಗರಿಯ ಫುಟ್‌ಬಾಲ್  ಪ್ರೇಮಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

No Comments

Leave A Comment