Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ: ಗಣ್ಯಾತೀಗಣ್ಯರಿಂದ ಅಂತಿಮ ನಮನ

ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೊಳಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ  ವರನಟ ಡಾ.ರಾಜ್‌ಕುಮಾರ್‌ ಅವರ ಪತ್ನಿ ,ಹಿರಿಯ ನಿರ್ಮಾಪಕಿ  ಪಾರ್ವತಮ್ಮ ರಾಜ್ ಕುಮಾರ್ ಬುಧವಾರ ನಸುಕಿನ 4.40 ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 77 ವರ್ಷ ಪ್ರಾಯವಾಗಿತ್ತು.

 ಕೊನೆಯುಸಿರೆಳೆದಿರುವುದನ್ನು ಆಸ್ಪತ್ರೆಯ ವೈದ್ಯ ಡಾ. ಸಂಜಯ್ ಕುಲಕರ್ಣಿ ಸ್ಪಷ್ಟಪಡಿಸಿದ ಬಳಿಕಪಾರ್ವತಮ್ಮ ಪಾರ್ಥಿವ ಶರೀರವನ್ನು ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ನಿವಾಸಕ್ಕೆ ತರಲಾಗಿದ್ದು, ಬೆಳಗ್ಗೆ  ಸದಾಶಿವ ನಗರದ ಸ್ವಗೃಹದ ಎದುರು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಆಗಮಿಸುವ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

ಇಂದು ಸಂಜೆ ಕಂಠೀರವ ಸ್ಟುಡಿಯೋದಲ್ಲಿ ಪತಿಯ ಸಮಾಧಿಯ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.

ಡಿಸೆಂಬರ್ 6, 1939ರಲ್ಲಿ ಮೈಸೂರಿನ ಸಾಲಿಗ್ರಾಮ ಎಂಬ ಹಳ್ಳಿಯಲ್ಲಿ ಜನಿಸಿದ ಪಾರ್ವತಮ್ಮ ಅವರು 1953 ಜೂ.25 ರಂದು ಡಾ. ರಾಜ್ ಕುಮಾರ್ ಅವರನ್ನು ವಿವಾಹವಾಗಿದ್ದರು.

ಪತಿಯ ಚಿತ್ರರಂಗದ ಪಯಣಕ್ಕೆ ಸಹಕಾರಿಯಾಗಿದ್ದ ಅವರು  ಖ್ಯಾತ ನಿರ್ಮಾಪಕಿಯಾಗಿ ಹಲವು ಸೂಪರ್‌ ಚಿತ್ರಗಳನ್ನು ನೀಡಿದ್ದರು. ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಸೇರಿದಂತೆ  80 ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿದ ಹಿರಿಮೆ ಪಾರ್ವತಮ್ಮ ಅವರದ್ದು.

ಪಾರ್ವತಮ್ಮ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು , ರಾಜಕೀಯ ರಂಗದ ಗಣ್ಯರು ಸೇರಿದಂತೆ ಚಿತ್ರಪ್ರೇಮಿಗಳು, ರಾಜ್‌ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ರಾಜ್‌ ಕುಮಾರ್‌ ಅವರೊಂದಿಗಿನ ಸುಮಧುರ ದಾಂಪತ್ಯದಲ್ಲಿ ಮೂವರು ಪುತ್ರರು,ಇಬ್ಬರು ಪುತ್ರಿಯರನ್ನು ಪಡೆದಿದ್ದರು. ಹಿರಿಯ ಪುತ್ರ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ,ಪುನೀತ್‌ ರಾಜ್‌ಕುಮಾರ್‌, ಪುತ್ರಿಯರಾದ ಪೂರ್ಣಿಮಾ ಮತ್ತು ಲಕ್ಷ್ಮೀ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ್ದನ್ನು ಪುರಸ್ಕರಿಸಿ ಬೆಂಗಳೂರು ವಿಶ್ವವಿದ್ಯಾಲಯ ಪಾರ್ವತಮ್ಮ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತ್ತು.

ರಾಜ್‌ ಅಭಿನಯಿಸಿದ್ದ ತ್ರಿಮೂರ್ತಿ ಚಿತ್ರ ಪಾರ್ವತಮ್ಮ ಹುಟ್ಟು ಹಾಕಿದ್ದ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ  ನಿರ್ಮಾಣ ಮಾಡಿದ ಮೊದಲ ಚಿತ್ರವಾಗಿದ್ದು ಭಾರೀ ಯಶಸ್ಸು ಕಂಡಿತ್ತು.

ನೇತ್ರದಾನ
ಪತಿಯಂತೆಯೇ ನೇತ್ರದಾನ ಮಾಡಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಆದರ್ಶಪ್ರಾಯರಾಗಿದ್ದಾರೆ.

No Comments

Leave A Comment