Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕಾಗಿ ಮಂಗಳವಾರ ಕಾಂಗ್ರೆಸ್ ನೋಟಿಸ್ ನೀಡಿದೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು, ಮುಖ್ಯಮಂತ್ರಿಗಳ ಹಾಗೂ ಸಭಾನಾಯಕರ ಸೂಚನೆಯಂತೆ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕಾಗಿ ನೋಟಿಸ್ ನೀಡಲಾಗಿದೆ. ಮುಂದಿನ 14 ದಿನಗಳೊಳಗಾಗಿ ಪರಿಷತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಈ ಸಂಬಂಧ ಇಂದು ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ವಿ.ಎಸ್. ಉಗ್ರಪ್ಪ ಅವರು ತಿಳಿಸಿದ್ದಾರೆ.

ಜೂನ್ 5 ರಿಂದ ಆರಂಭವಾಗಲಿರುವ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದೆ.

75 ಸದಸ್ಯರ ಸ್ಥಾನಗಳುಳ್ಳ ವಿಧಾನ ಪರಿಷತ್‌ನಲ್ಲಿ 35 ಸ್ಥಾನಗಳನ್ನು ಹೊಂದುವ ಮೂಲಕ ಕಾಂಗ್ರೆಸ್ ಈಗ ದೊಡ್ಡ ಪಕ್ಷವಾಗಿದ್ದು, ಸ್ವತಂತ್ರವಾಗಿ ಸಭಾಪತಿ ಸ್ಥಾನ ಹಿಡಿಯಲು ಇನ್ನು ಮೂರು ಸ್ಥಾನಗಳ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಈಗಿನ ಸಭಾಪತಿ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರನ್ನು ಸಭಾಪತಿ ಹುದ್ದೆಯಿಂದ ಕೆಳಗಿಳಿಸಿ ಆ ಹುದ್ದೆಗೆ ಎಸ್.ಆರ್. ಪಾಟೀಲ್‌ ಅವರನ್ನು ತರಲಾಗುತ್ತಿದೆ.

ಇನ್ನು ವಿಧಾನ ಪರಿಷತ್‌ನಲ್ಲಿ ಬಹುಮತ ಇರದ ಕಾಂಗ್ರೆಸ್, ಸಭಾಪತಿ ಹುದ್ದೆಯನ್ನು ಪಡೆಯಲು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳಬೇಕಿದೆ. ಜೆಡಿಎಸ್ ಪಕ್ಷ ಸಹ ಸಭಾಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಕಾಂಗ್ರೆಸ್ ಪಕ್ಷವನ್ನು ಓಲೈಸಿಕೊಂಡು ಸಭಾಪತಿ ಹುದ್ದೆ ಪಡೆಯುವ ಹವಣಿಕೆಯಲ್ಲಿದೆ.

No Comments

Leave A Comment