Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ತನಿಖೆಗೆ ಲಖನೌ ಪೊಲೀಸರು ಶೀಘ್ರ ಬೆಂಗಳೂರಿಗೆ ತಿವಾರಿ ಸಾವು: ಸಿಬಿಐಗೆ

ಲಖನೌ: ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು ಮಾಡಿದೆ.

ಲಖನೌನ ಸರ್ಕಾರಿ ಅತಿಥಿಗೃಹವೊಂದರ ಸಮೀಪದ ರಸ್ತೆಯಲ್ಲಿ ತಿವಾರಿ ಅವರ ಮೃತದೇಹ ಕಳೆದ ಬುಧವಾರ ಬೆಳಿಗ್ಗೆ ಪತ್ತೆಯಾಗಿತ್ತು. ತಿವಾರಿ ಕುಟುಂಬದ ಸದಸ್ಯರು ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿ, ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು. ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ತಿವಾರಿ ಅವರ ಅಣ್ಣ ಮಯಾಂಕ್‌ ತಿವಾರಿ ಅವರು ಅದಕ್ಕೂ ಮೊದಲು ಹಜ್ರತ್‌ಗಂಜ್‌ ಪೊಲೀಸ್‌ ಠಾಣೆಗೆ ಅನುರಾಗ್‌ ಅವರ ಕೊಲೆಯಾಗಿದೆ ಎಂದು ದೂರು ನೀಡಿದ್ದರು. ಅದರ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕರ್ನಾಟಕದ ಹಲವು ಅಧಿಕಾರಿಗಳು ಭಾಗಿಯಾಗಿರುವ ದೊಡ್ಡ ಹಗರಣವೊಂದನ್ನು ಬಯಲಿಗೆ ತರಲು ಪ್ರಯತ್ನಿಸುತ್ತಿದ್ದೇನೆ’ ಎಂದು ಅನುರಾಗ್‌ ತಮಗೆ ಹೇಳಿದ್ದರು ಎಂದು ಮಯಾಂಕ್‌ ತಿಳಿಸಿದ್ದಾರೆ.

‘ಕೆಲವು ದಾಖಲೆಗಳಿಗೆ ಸಹಿ ಮಾಡುವಂತೆ ತಮ್ಮನ ಮೇಲೆ ಭಾರಿ ಒತ್ತಡ ಇತ್ತು. ಸಹಿ ಮಾಡಲು ಆತ ನಿರಾಕರಿಸಿದ್ದ. ಹತ್ತು ವರ್ಷದ ವೃತ್ತಿ ಜೀವನದಲ್ಲಿ ಆತನನ್ನು ಏಳರಿಂದ ಎಂಟು ಬಾರಿ ವರ್ಗಾಯಿಸಲಾಗಿದೆ’ ಎಂದು ದೂರಿನಲ್ಲಿ ಮಯಾಂಕ್‌ ಹೇಳಿದ್ದಾರೆ.

ಜೀವ ಬೆದರಿಕೆ ಇದೆ ಎಂದು ಎರಡು ತಿಂಗಳ ಹಿಂದೆ ಅನುರಾಗ್‌ ಹೇಳಿದ್ದರು. ಆಗ ಅವರು ಸ್ವಲ್ಪ ಕಾಲ ಯಾರಿಗೂ ಸಿಗದೆ ಅಡಗಿಕೊಂಡಿದ್ದರು ಎಂದೂ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಲಖನೌ ಪೊಲೀಸರು ಬೆಂಗಳೂರಿಗೆ: ಉತ್ತರ ಪ್ರದೇಶ ಪೊಲೀಸರ ವಿಶೇಷ ತಂಡವೊಂದು ತನಿಖೆಗಾಗಿ ಬೆಂಗಳೂರಿಗೆ ಶೀಘ್ರವೇ ಬರಲಿದೆ. ಕುಟುಂಬ ಸದಸ್ಯರು ಮಾಡುತ್ತಿರುವ ಆರೋಪಗಳ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ. ಅನುರಾಗ್‌ ಅವರ ಮೇಲಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಸುಳಿವು ಕೊಡದ ಮರಣೋತ್ತರ ಪರೀಕ್ಷೆ: ಅನುರಾಗ್‌ ಅವರ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಸಂಬಂಧಿಸಿ ನಿಖರವಾದ ಯಾವುದೇ ಸುಳಿವು ಸಿಕ್ಕಿಲ್ಲ.  ಉಸಿರು ಕಟ್ಟಿ ಸಾವು ಸಂಭವಿಸಿದೆ ಎಂಬ ಮಾಹಿತಿ ಅಷ್ಟೇ ಸಿಕ್ಕಿತ್ತು. ಹಾಗಾಗಿ ಹೆಚ್ಚಿನ ಪರೀಕ್ಷೆಗೆ ಅವರ ಒಳಾಂಗಗಳು, ರಕ್ತದ ಮಾದರಿ ಮತ್ತು ಹೃದಯವನ್ನು ಸಂರಕ್ಷಿಸಿ ಇಡಲಾಗಿದೆ.

ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳ ವರದಿ
ಅನುರಾಗ್‌ ತಿವಾರಿ ಸಾವಿನ ಸಂಬಂಧ ಮಾಹಿತಿ ಸಂಗ್ರಹಿಸಲು ಉತ್ತರ ಪ್ರದೇಶಕ್ಕೆ ತೆರಳಿದ್ದ  ಐಎಎಸ್‌ ಅಧಿಕಾರಿ ಪಂಕಜ್‌ ಕುಮಾರ್ ಪಾಂಡೆ ಹಾಗೂ ಡಿಪಿಎಆರ್‌ ಉಪ ಕಾರ್ಯದರ್ಶಿ ಅಭಿರಾಮ್‌ ಜಿ. ಶಂಕರ್‌ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಇಬ್ಬರೂ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಉತ್ತರ ಪ್ರದೇಶಕ್ಕೆ ಕಳುಹಿಸಿತ್ತು. ಅನುರಾಗ್‌ ಅವರ ತಂದೆ ಹಾಗೂ ಸಹೋದರರು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಆ ಅವರ ಕೈಸೇರಿರುವ ವರದಿಯನ್ನು ರಹಸ್ಯವಾಗಿ ಇಡಲಾಗಿದೆ.

ನಡಿಗೆ ಅಭ್ಯಾಸ ಇಲ್ಲ
ಅನುರಾಗ್‌ ಅವರಿಗೆ ಬೆಳಗ್ಗಿನ ನಡಿಗೆಯ ಅಭ್ಯಾಸ ಇಲ್ಲ. ಅವರು ಬೆಳಿಗ್ಗೆ ಬಹಳ ಬೇಗ ಏಳುವ ಪ್ರವೃತ್ತಿಯವರೂ ಅಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಯಾಂಕ್‌ ವಿವರಿಸಿದ್ದಾರೆ. ಬೆಳಗ್ಗಿನ ನಡಿಗೆಗೆ ಹೋದ ಅನುರಾಗ್‌ ಅವರಿಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆದು ಪರಾರಿ ಆಗಿರಬಹುದು ಎಂದು ಆರಂಭದಲ್ಲಿ ಪೊಲೀಸರು ಶಂಕಿಸಿದ್ದರು. ಮಯಾಂಕ್‌ ಅವರ ಹೇಳಿಕೆಯಿಂದಾಗಿ ಪೊಲೀಸರ ಶಂಕೆಗೆ ಆಧಾರ ಇಲ್ಲದಂತಾಗಿದೆ.
*
ಅನುರಾಗ್‌ ತಿವಾರಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವುದಕ್ಕೆ ಸ್ವಾಗತ. ಸಂಪೂರ್ಣ ಸಹಕಾರ ನೀಡುತ್ತೇವೆ
ಸಿದ್ದರಾಮಯ್ಯ,
ಮುಖ್ಯಮಂತ್ರಿ

No Comments

Leave A Comment