ಉತ್ತರಾಖಂಡದಲ್ಲಿ ಭಾರೀ ಭೂಕುಸಿತ: 25 ಸಾವಿರ ಪ್ರವಾಸಿಗರು ಅತಂತ್ರ
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಾಥಿ ಪರ್ವತ್ನಲ್ಲಿ ಶುಕ್ರವಾರ ಸಂಜೆ ಭಾರೀ ಭೂಕುಸಿತ ಸಂಭವಿಸಿದ್ದು, ಚಾರ್ಧಾಮ್ ಯಾತ್ರೆ ಕೈಗೊಂಡು ಬದ್ರಿನಾಥ್ ಕಡೆ ಹೊರಟಿದ್ದ 25 ಸಾವಿರ ಮಂದಿ ಅತಂತ್ರರಾಗಿದ್ದಾರೆ.
ಭೂಕುಸಿತವು ಸುಮಾರು 150 ಮೀಟರ್ನಷ್ಟು ಪ್ರದೇಶದ ಮೇಲೆ ಪರಿಣಾಮ ಬೀರಿದ್ದು, ಋಷಿಕೇಶ್- ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ನಷ್ಟು ಪ್ರದೇಶ ಹಾನಿಗೊಳಗಾಗಿದೆ. ಇದೊಂದು ಭಾರೀ ಪ್ರಮಾಣದ ಭೂಕುಸಿತವಾಗಿದ್ದು, ದೊಡ್ಡ ದೊಡ್ಡ ಕಲ್ಲುಬಂಡೆಗಳು ರಸ್ತೆಯ ಮೇಲೆ ಬಿದ್ದಿವೆ. ಈ ಅವಶೇಷಗಳನ್ನು ತೆರವು ಮಾಡಲು ಇನ್ನೂ 2 ದಿನಗಳು ಬೇಕಾಗಬಹುದು. ಆದರೂ, ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ ಎಂದು ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿರುವ ಗಡಿ ರಸ್ತೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಭೂಕುಸಿತದ ದುರಂತಗಳು ಸಾಮಾನ್ಯವಾಗಿದ್ದು, ಕಳೆದ ವರ್ಷ ಮೇಘಸ್ಫೋಟ ಮತ್ತು ಭೂಕುಸಿತಕ್ಕೆ 30 ಮಂದಿ ಬಲಿಯಾಗಿದ್ದರು. ಜತೆಗೆ ಉಂಟಾದ ದಿಢೀರ್ ಪ್ರವಾಹದಿಂದ ನಂದಪ್ರಯಾಗ್ ಪ್ರದೇಶದತ್ತಲೂ ನೀರು ಹರಿದುಬಂದಿತ್ತು.