ಕೇಜ್ರಿವಾಲ್ ಹವಾಲ ದಂಧೆಯಲ್ಲಿ ತೊಡಗಿದ್ದಾರೆ: ಕಪಿಲ್ ಮಿಶ್ರಾ ಮತ್ತೊಂದು ಬಾಂಬ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಬಂಡಾವೆದ್ದು ಸರಣಿ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ವಿರುದ್ಧ ಭಾನುವಾರ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಆಮ್ ಆದ್ಮಿ ಪಕ್ಷಕ್ಕೆ ನಕಲಿ ಕಂಪನಿಗಳ ಮೂಲಕ ಹವಾಲ ಹಣ ದೇಣಿಗೆ ರೂಪದಲ್ಲಿ ಹರಿದು ಬಂದಿದ್ದು, ಈ ಪೈಕಿ 187 ಕಂಪನಿಗಳು ಒಂದೇ ಹೆಸರಿನಲ್ಲಿವೆ ಎಂದು ದಾಖಲೆ ತೋರಿಸಿದ್ದಾರೆ. ಕೆಲವು ಬ್ಲ್ಯಾಂಕ್ ಚೆಕ್ ಗಳಾಗಿವೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪಕ್ಷಕ್ಕೆ ದೇಣಿಗೆಯಾಗಿ ಕಪ್ಪು ಹಣ ಮತ್ತು ಹವಾಲ ಹಣವನ್ನು ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನಾಳೆ ದಾಖಳೆ ಸಮೇತ ಸಿಬಿಐಗೆ ದೂರು ನೀಡುತ್ತೇನೆಂದು ಹೇಳಿದ್ದಾರೆ.
ರು.45 ಕೋಟಿ ಹಣವನ್ನು ಜಮಾ ಮಾಡಿ ರೂ.19 ಕೋಟಿ ಮಾತ್ರ ಹಣ ಪಡೆದಿದ್ದೇವೆಂದು ಆಪ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ವಿವರ ನೀಡಿದೆ. ತಮ್ಮ ಆಪ್ತರು ಹವಾಲ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಂಬುದು ಕೇಜ್ರಿವಾಲ್ ಅವರಿಗೆ ತಿಳಿದಿದೆ. ಆದರೂ ಕೇಜ್ರಿವಾಲ್ ಅವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಯೇ ಕುಸಿದುಬಿದ್ದ ಕಪಿಲ್ ಮಿಶ್ರಾ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಪಿಲ್ ಮಿಶ್ರಾ ಅವರು ಸಿಬಿಐ ತನಿಖೆಗೆ ಆಗ್ರಹಿಸಿ ಕಳೆದ 4 ದಿನಗಳಿಂದಲೂ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಇಂದು ಕೂಡ ಸತ್ಯಾಗ್ರಹವನ್ನು ಮುಂದುವರೆಸಿದ್ದ ಅವರು, ಪತ್ರಿಕಾಗೋಷ್ಠಿಯಲ್ಲಿ ನಡೆಸುತ್ತಿದ್ದ ವೇಳೆ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಸುದ್ದಿಗೋಷ್ಠಿಯ ಕೊನೆಯ ಹಂತದಲ್ಲಿ ಮಿಶ್ರಾ ಅವರು ತಲೆ ತಿರುಗಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
4 ದಿನಗಳಿಂದಲೂ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಪಿಲ್ ಮಿಶ್ರಾ ಅವರ ಆರೋಗ್ಯದಲ್ಲಿ ಸಾಮಾನ್ಯವಾಗಿಯೇ ಏರುಪೇರುಗಳು ಕಂಡುಬಂದಿತ್ತು. ರಕ್ತದಲ್ಲಿ ಭಾರಿ ಇಳಿಕೆ ಹಾಗೂ ನಿರ್ಜಲೀಕರಣ ಕಂಡು ಬಂದ ಹಿನ್ನಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ನಿನ್ನೆಯಷ್ಟೇ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯ ನಡುವೆಯೂ ಕಪಿಲ್ ಮಿಶ್ರಾ ಅವರು ತಮ್ಮ ಹೋರಾಟವನ್ನು ಮುಂದುವರೆಸಿದ್ದರು.