Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ನಾಗರಾಜ 11 ದಿನ ಪೊಲೀಸರ ವಶಕ್ಕೆ

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ಬಂಧನಕ್ಕೊಳಗಾಗಿರುವ ನಾಗರಾಜ್‌ ಮತ್ತು ಆತನ ಇಬ್ಬರು ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರೀಯನ್ನು ಹೆಣ್ಣೂರು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮೇ 22ರವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಬಂಧಿಸಿದ ಆರೋಪಿಗಳನ್ನು ಗುರುವಾರ ರಾತ್ರಿ ಬೆಂಗಳೂರಿಗೆ ಕರೆತಂದ ಪೊಲೀಸರು ಶುಕ್ರವಾರ ಸಂಜೆ ಮೆಯೋ ಹಾಲ್‌ನಲ್ಲಿರುವ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಪ್ರಕರಣದಲ್ಲಿ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದ್ದು, 11 ದಿನಗಳ ಕಾಲ ವಶಕ್ಕೆ ನೀಡುವಂತೆ ಸರ್ಕಾರಿ ವಕೀಲರ ಮೂಲಕ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲರಾದ ನರೇಶ್‌ 11 ದಿನ ಕಾಲಾವಕಾಶ ನೀಡದ್ದಂತೆ ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು 11 ದಿನ ಪೊಲೀಸ್‌ ವಶಕ್ಕೆ ಆದೇಶಿದರು.

ಇದಕ್ಕೂ ಮೊದಲು ಮೂವರು ಆರೋಪಿಗಳನ್ನು ಅಂಬೇಡ್ಕರ್‌ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಇದೇ ವೇಳೆ ನಾಗರಾಜನ ಆಪ್ತರು, ಇದೀಗ ಬಂಧನಕ್ಕೊಳಗಾಗಿರುವ ಶರವಣ ಮತ್ತು ಜೈಕೃಷ್ಣನನ್ನು ಮತ್ತೆ 5 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಲಾಗಿದೆ.

ನಾಗನ ಪತ್ನಿ ವಶಕ್ಕೆ ಸಾಧ್ಯತೆ: ನಾಗರಾಜ್‌ನ ಸಂಬಂಧಿ ಸೌಂದರ್ಯರಾಜ್‌ ಪೊಲೀಸರ ವಿಚಾರಣೆ ವೇಳೆ ಪ್ರಕರಣದಲ್ಲಿ ನಾಗರಾಜ ಪತ್ನಿ ಲಕ್ಷಿ ಬಗ್ಗೆ ಹೇಳಿಕೆ ನೀಡಿದ್ದು, ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯ ಬಗ್ಗೆ ಲಕ್ಷಿ ಅವರಿಗೆ ಸಂಪೂರ್ಣ ಮಾಹಿತಿ ಇತ್ತು. ಪತಿಗೆ ಸಹಕಾರ ನೀಡುತ್ತಿದ್ದರು. ಪತಿ ನಾಗರಾಜ್‌ ನಾಪತ್ತೆಯಾದ ದಿನದಿಂದಲೂ ಆತನ ಜತೆ ಸಂಪರ್ಕದಲ್ಲಿ ದ್ದರು.

“ಯಾವುದೇ ಕಾರಣಕ್ಕೂ ಪೊಲೀಸರಿಗೆ ಸಿಗ ಬೇಡಿ. ಖರ್ಚಿಗೆ ಹಣವನ್ನು ನಾನು ಒದಗಿಸುತ್ತೇನೆ. ತುರ್ತು ಸಂದರ್ಭ ಎದುರಾದರೆ, ನನ್ನ ಸಂಬಂಧಿಗಳ ಬಳಿ ಹಣ ಪಡೆದುಕೊಳ್ಳುವಂತೆ’ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲಾ ನನ್ನ ಹಣೆಬರಹ: ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರ ಪ್ರಶ್ನೆಗಳಿಗೆ ತಲೆ ಆಡಿಸುತ್ತಲೇ ಉತ್ತರಿಸಿದ ನಾಗರಾಜ್‌, ಒಂದೂ ಮಾತನ್ನು ಆಡಲಿಲ್ಲ. ಅಲ್ಲದೇ ಕಲಾಪ ಮುಗಿಸಿಕೊಂಡು ಕೋರ್ಟ್‌ ಆವರಣದಿಂದ ಹೊರಬರುತ್ತಿದ್ದ ನಾಗರಾಜ್‌ ಮಾಧ್ಯಮದವರನ್ನು ಕಂಡು ಸಂಜ್ಞೆ ಮೂಲಕ ಎಲ್ಲ ನನ್ನ ಹಣೆಬರಹ, ಏನು ಮಾಡಲು ಸಾಧ್ಯವಿಲ್ಲ ಎಂದು ಹಣೆ ಚಚ್ಚಿಕೊಳ್ಳುತ್ತಿದ್ದ. ಇದೇ ವೇಳೆ ಕೋರ್ಟ್‌ ಆವರಣದಲ್ಲಿ ನಾಗರಾಜ್‌ನ ಬೆಂಬಲಿಗರು, ಸಂಬಂಧಿಕರು ಸೇರಿದಂತೆ ನೂರಾರು ಮಂದಿ ಸೇರಿದ್ದರು.

2 ಲಕ್ಷ ಬಹುಮಾನ: ಕಳೆದ 27 ದಿನಗಳ ಕಾಲ ನಾಗರಾಜ್‌ನ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಎಸಿಪಿ ರವಿಕುಮಾರ್‌ ಮತ್ತು ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ನೇತೃತ್ವದ 15 ಮಂದಿ ತಂಡಕ್ಕೆ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ 2 ಲಕ್ಷ ರೂ. ನಗದು ಬಹುಮಾನ ಘೊಷಿಸಿದ್ದಾರೆ. ಅಲ್ಲದೇ ನಾಗರಾಜ್‌ನ ಬಂಧನ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಶೇಷ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ದೇವಾಲಯಗಳ ಪ್ರಸಾದ ಸಂಗ್ರಹಿಸುತ್ತಿದ್ದ ಅಪ್ಪ ಮಕ್ಕಳು 
ನಾಗರಾಜ್‌ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಎರಡು ಬೈನಾಕ್ಯುಲರ್‌ಗಳು ಮತ್ತು ಪ್ರಸಾದದ ಬ್ಯಾಗ್‌ಗಳು ಪತ್ತೆಯಾಗಿವೆ. ತಮಿಳುನಾಡಿನ ಬೆಟ್ಟಗಳ ಮೇಲಿರುವ ದೇವಾಲಯಗಳಲ್ಲಿ ತಂಗುತ್ತಿದ್ದ ಆರೋಪಿಗಳು, ಅಲ್ಲಿಂದಲೇ ರಸ್ತೆ ಕಡೆ ಬೈನಾಕ್ಯುಲರ್‌ ಮೂಲಕ ಪೊಲೀಸರ ಬರುವಿಕೆಯನ್ನು ಪತ್ತೆ ಹಚ್ಚುತ್ತಿದ್ದರು.

ಒಂದು ವೇಳೆ ಕರ್ನಾಟಕ ನೋಂದಣಿಯ ಕಾರುಗಳು ಕಂಡು ಬಂದರೆ, ಪೊಲೀಸರು ಸಂಚರಿಸುತ್ತಿದ್ದ ಮಾರ್ಗವನ್ನು ಗಮನಿಸಿ ಕೂಡಲೇ ಅಲ್ಲಿಂದ ಕಾಲ್ಕಿಳುತ್ತಿದ್ದರು. ದೇವಾಲಯದಲ್ಲಿ ಸ್ವೀಕರಿಸುತ್ತಿದ್ದ ಪ್ರಸಾದವನ್ನು ಕಾರಿನಲ್ಲಿ ಶೇಖರಣೆ ಮಾಡಿಕೊಳ್ಳುತ್ತಿದ್ದರು. ಒಂದು ವೇಳೆ ಊಟ ಸಿಗದಿದ್ದಾಗ ಇದನ್ನೆ ತಿಂದು ದಿನದೂಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಕೊಂಡಾವರಂ ಬಳಿ ಪೊಲೀಸರ ಬಲೆಗೆ ಬಿದ್ದ ನಾಗರಾಜ್‌ನನ್ನು ಪೊಲೀಸರು ವಾಹನಕ್ಕೆ ಹತ್ತಿಸಿಕೊಳ್ಳುತ್ತಿದ್ದಂತೆ ಅಸ್ವಸ್ಥನಾಗಿ ಬಿದ್ದಿದ್ದಾನೆ. ನನಗೆ ತಲೆ ಸುತ್ತು ಬರುತ್ತಿದೆ. ಕುಳಿತುಕೊಳ್ಳಲು ಸಾಧ್ಯವಿಲ್ಲ. ರಕ್ತದೊತ್ತಡ ಕಡಿಮೆಯಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಾನೆ. ಈತನ ಹೈಡ್ರಾಮಾ ತಿಳಿದ ಪೊಲೀಸರು ವಾಹನದಲ್ಲಿ ಹತ್ತಿಸಿಕೊಂಡು ಕರೆತಂದಿದ್ದಾರೆ.

ಹಿಂಸಿಸಿದರೆ ಮತ್ತೆ ಕೋರ್ಟ್‌ಗೆ 
ನಾಗರಾಜ ಮತ್ತು ಅವರ ಇಬ್ಬರು ಮಕ್ಕಳಾದ ಶಾಸಿ, ಗಾಂಧಿಯನ್ನು ಮೇ 22ರ ವರೆಗೆ ಪೊಲೀಸರು ವಶಕ್ಕೆ ಪಡೆದಿದ್ದು, 4-5 ದಿನಗಳ ಕಾಲ ವಿಚಾರಣೆಯನ್ನು ಗಮನಿಸುತ್ತೇವೆ. ಈ ವೇಳೆ ನಮ್ಮ ಕಕ್ಷಿದಾರರಿಗೆ ಹಿಂಸೆ ನೀಡಿದ್ದು ಕಂಡು ಬಂದರೆ, ಪ್ರತ್ಯೇಕ ತನಿಖೆ ನಡೆಸುವಂತೆ ಹೈಕೋರ್ಟ್‌ ಮೊರೆ ಹೋಗುತ್ತೇವೆ.
-ನರೇಶ್‌, ನಾಗನ ಪರ ವಕೀಲರು

No Comments

Leave A Comment