Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಕಾಡಾನೆ ದಾಳಿ: ಯೋಧರಿಬ್ಬರು ಸಾವು

ಬೆಂಗಳೂರು: ಬೆಂಗಳೂರು ಹೊರವಲಯದ‌ ಕನಕಪುರ ರಸ್ತೆಯ ಕಗ್ಗಲಿಪುರ ಅರಣ್ಯ ಗಡಿ ಪ್ರದೇಶದಲ್ಲಿ ಒಂಟಿ ಸಲಗದ ದಾಳಿಗೆ ಕೇಂದ್ರ ಮೀಸಲು ಪೊಲೀಸ್‌ ತುಕಡಿಯ ಇಬ್ಬರು ಯೋಧರು ಸಾವಿಗೀಡಾಗಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಈ ಪ್ರದೇಶವು ಕೇಂದ್ರ ಮೀಸಲು ಪೊಲೀಸ್‌ ತುಕಡಿಯ ತರಬೇತಿ ಶಿಬಿರ ವ್ಯಾಪ್ತಿಲ್ಲಿದ್ದು, ಹಾವೇರಿ ಮೂಲದ ಪೇದೆ ಪುಟ್ಟಪ್ಪ ಲಮಾಣಿ (35), ತಮಿಳುನಾಡು ಮೂಲದ ಎಎಸ್‌ಐ ದಕ್ಷಿಣಾಮೂರ್ತಿ (55) ಮೃತ ಯೋಧರು. ದಕ್ಷಿಣಾಮೂರ್ತಿ ಶೌಚಕ್ಕೆ ತೆರಳಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ಇದನ್ನು ತಡೆಯಲು ಹೋದ ಪುಟ್ಟಪ್ಪ ಲಮಾಣಿ ಮೇಲೂ ಆನೆ ದಾಳಿ ನಡೆಸಿದ್ದು, ಇಬ್ಬರೂ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬನ್ನೇರುಘಟ್ಟ ಅರಣ್ಯದ ವ್ಯನ್ಯಜೀವಿಗಳು ನಾಡಿಗೆ ಬಾರದಂತೆ ಸುತ್ತ ದೊಡ್ಡ ಕಂದಕ ನಿರ್ಮಿಸಲಾಗಿದೆ. ಹಾಗಿದ್ದರೂ ಸಾವನದುರ್ಗ ಕಾಡಿನಿಂದ ಬನ್ನೇರುಘಟ್ಟ ಅರಣ್ಯದ ಕಡೆಗೆ ಹೋಗುತ್ತಿದ್ದ ಕಾಡಾನೆ ರವಿವಾರ ಮುಂಜಾನೆ 6.30ರ ಸುಮಾರಿಗೆ ಕಗ್ಗಲಿಪುರದ ಗಡಿ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್‌ನ ನೀರಿನ ಟ್ಯಾಂಕ್‌ ಬಳಿ ಪ್ರತ್ಯಕ್ಷವಾಗಿತ್ತು. ಈ ಸಂದರ್ಭದಲ್ಲಿ ಶೌಚಕ್ಕೆ ಹೋಗಿದ್ದ ದಕ್ಷಿಣಾಮೂರ್ತಿ ಕಡೆಗೆ ಆನೆ ಧಾವಿಸುತ್ತಿರುವುದನ್ನು ಕಂಡ ಪೇದೆಗಳು ದಕ್ಷಿಣಾಮೂರ್ತಿ ಅವರಿಗೆ ಸೂಚನೆ ನೀಡಿ, ಜೋರಾಗಿ ಕೂಗಿಕೊಂಡರು. ಇದರಿಂದ ಕೆರಳಿದ ಆನೆ ದಕ್ಷಿಣಾಮೂರ್ತಿ ಅವರನ್ನು ಸೊಂಡಿಲಿನಿಂದ ಎಸೆದು, ದೇಹವನ್ನು ತುಳಿದು ಛಿದ್ರಮಾಡಿ ಪೊದೆಯೊಳಗೆ ಅವಿತುಕೊಂಡಿತು.

ನೀರು ಕುಡಿಸಲು ಹೋಗಿದ್ದ ಪುಟ್ಟಪ್ಪ ಬಲಿ
ಗಂಭೀರವಾಗಿ ಗಾಯಗೊಂಡಿದ್ದ ದಕ್ಷಿಣಾಮೂರ್ತಿ ಅವರಿಗೆ ನೀರು ಕುಡಿಸಲು ಹೋದ ಪುಟ್ಟಪ್ಪ ಅವರನ್ನು ಕಂಡ ಒಂಟಿ ಸಲಗ ಪೊದೆಯಿಂದ ಹೊರಬಂದು ದಾಳಿಗೆ ಮುಂದಾಯಿತು. ತತ್‌ಕ್ಷಣ ಅವರು ಅಲ್ಲಿಂದ ಓಡಲಾರಂಭಿಸಿದರೂ ಹಿಂಬಾಲಿಸಿದ ಸಲಗ ಸೊಂಡಿಲಿನಿಂದ ಎಸೆದು ತುಳಿದಿದೆ. ಈ ವೇಳೆ ದೂರದಲ್ಲಿದ್ದ ಮತ್ತೂಬ್ಬ ಪೇದೆ ಕೂಗಾಡಿದ್ದರಿಂದ ಗಲಿಬಿಲಿಗೊಂಡ ಆನೆ ಸಮೀಪದಲ್ಲೇ ಇದ್ದ ಬೈಕ್‌ಗೆ ಗುದ್ದಿ, ತುಳಿದು ಪಕ್ಕದಲ್ಲಿದ್ದ ಕ್ಯಾಂಪ್‌ ಟೆಂಟ್‌ಅನ್ನು ಕಿತ್ತೆಸೆದು ಬಳಿಕ ರೈಲ್ವೇ ಗೇಟ್‌ ದಾಟಿ ಕಾಡಿನೊಳಗೆ ಮರೆಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪುಟ್ಟಪ್ಪ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಪುಟ್ಟಪ್ಪ ಮತ್ತು ದಕ್ಷಿಣಾಮೂರ್ತಿ ಇಬ್ಬರೂ ವಿವಾಹಿತರು. ದಕ್ಷಿಣಾ ಮೂರ್ತಿ ಹನ್ನೆರಡು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಪುಟ್ಟಪ್ಪ ಎರಡು ವರ್ಷಗಳಿಂದ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಐಜಿಪಿ ಸೀಮಂತ್‌ ಕುಮಾರ್‌ ಸಿಂಗ್‌, ರಾಮನಗರದ ಡಿವೈಎಸ್‌ಪಿ ಎಂ.ಕೆ. ಅಯ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆ ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಗ್ಗಲಿಪುರ ಪೊಲೀಸರು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು, ಬೆಂಗಳೂರು ನಗರ ವಿಭಾಗದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

ತಲಾ 5 ಲಕ್ಷ ರೂ. ಪರಿಹಾರ?
ಕಾಡಾನೆ ದಾಳಿಯಿಂದ ಮೃತ ಪಟ್ಟ ಪುಟ್ಟಪ್ಪ ಲಮಾಣಿ ಮತ್ತು ದಕ್ಷಿಣಾಮೂರ್ತಿ ಅವರಿಗೆ ಅರಣ್ಯ ಇಲಾಖೆ ಸಂತಾಪ ಸೂಚಿಸಿದ್ದು, ಇಲಾಖೆಯಿಂದ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಬಹುದು. ಜತೆಗೆ ಕೇಂದ್ರ ಸರಕಾರ ಕೂಡ ಮೃತರ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

‘ಮಕಾನೆ’ ಆನೆ ದಾಳಿ
ರವಿವಾರ ಮುಂಜಾನೆ ಕಾಡಿನಿಂದ ಹೊರಭಾಗದ ತರಳು ಎಸ್ಟೇಟ್‌ ಗ್ರಾಮಕ್ಕೆ ಹೋಗಿ ಹಿಂದಿರುಗುತ್ತಿದ್ದ ಆನೆ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದು, ಆನೆಯನ್ನು ‘ಮಕಾನೆ’ ಎಂದು ಹೇಳಲಾಗಿದೆ. ಈ ಮಕಾನೆಗಳಿಗೆ ದಂತ ಇರುವುದಿಲ್ಲ. ಇವು ಸೊಂಡಿಲಿನಿಂದಲೇ ದಾಳಿ ನಡೆಸುತ್ತವೆ. ರಾಜ್ಯದಲ್ಲಿ ಇಂತಹ ಆನೆಗಳು ಬಹಳಷ್ಟು ಕಡಿಮೆ ಎನ್ನಲಾಗಿದೆ.

No Comments

Leave A Comment