Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಅಲ್ಲಿ ಮದುವೆ, ಅಲ್ಲೇ ವಿಧವೆ: ಮಿಸ್ಟರ್‌ ಆ್ಯಂಡ್‌ ಮಿಸೆಸ್‌ ಕೂವಗಂ

ತಮಿಳುನಾಡಿನ ಕೂವಗಂನಲ್ಲಿ ಮೇ 8, 9, 10 ಅರವಾನ್‌ ಹಬ್ಬ ಶುರುವಾಗಲಿದೆ ಇದು ಮಂಗಳಮುಖಿಯರಿಗೆ ವರ್ಷದ ಏಕೈಕ ಧಾರ್ಮಿಕ ಸಡಗರ. ಮಂಗಳಸೂತ್ರ ಹಿಡಿದು ಮದುವೆಗಾಗಿ ಇಲ್ಲಿ ಕೊರಳೊಡ್ಡುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ಸಂಜೆಯ ಮೇಲೆ ಇಲ್ಲಿ ಫ್ಯಾಶನ್‌ ಶೋ ನಡೆಯುತ್ತದೆ. ಆಕರ್ಷಕ ರೂಪರಾಶಿ ಇದ್ದ ಒಬ್ಬರನ್ನು ಆರಿಸಿ, “ಮಿಸ್‌ ಕೂವಗಂ’ ಕಿರೀಟ ತೊಡಿಸುತ್ತಾರೆ. ಇದೆಲ್ಲ ಸಂಭ್ರಮ ಮುಗಿವ ಕೊನೆಯ ದಿನದಲ್ಲಿ ಅವರೆಲ್ಲ ವಿಧವೆ ಆಗುತ್ತಾರೆ. ಅದು ಹೇಗಿರುತ್ತೆ ಎನ್ನುವ ನೋಟ ಇಲ್ಲಿದೆ…

“ಕೂವಗಮ್ ಗೆ ಬಂದರೆ ಹಾಗೆಯೇ ಬರಬೇಡಿ… ಒಂದು ಕ್ಯಾಮೆರಾ ಹಿಡಕೊಂಡು ಬನ್ನಿ. ನನ್ನ ಚೆಂದದ ಫೋಟೋ ತೆಗೀಬಹುದು. ಬನಾರಸ್‌ ಸ್ಯಾರಿಯಲ್ಲಿ ನನ್ನ ನೋಡಬಹುದು. ಬೆನ್ನಿನ ಹಿಂಬದಿ, ತೋಳಿನಲ್ಲಿ, ಹೊಕ್ಕಳಿನ ಸುತ್ತ ಮೂರು ಟ್ಯಾಟೂ ಹಾಕಿಸ್ಕೊಂಡ ಯಾವ ಹೆಣ್ಣನ್ನೂ ನೀವು ಇದುವರೆಗೆ ನೋಡಿಲ್ವಲ್ಲ? ಬಾಹುಬಲಿಯ ತಮನ್ನಾ ನವಿಲುಗರಿಯ ಟ್ಯಾಟೂ ಬಿಡಿಸಿಕೊಂಡರೆ, ಆ ಬಗ್ಗೆ ಬರೆಯುತ್ತೀರಲ್ಲ… ನಮ್ಮ ಟ್ಯಾಟೂವನ್ನೂ ಹಾಗೆಯೇ ವರ್ಣಿಸಿ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಅರ್ಧಗಂಟೆ ಕಾದು ಕೈತುಂಬಾ ಮದರಂಗಿ ಬಿಡಿಸಿಕೊಂಡಿದ್ದನ್ನು ನೀವು ನೋಡಲೇಬೇಕು. ಅವೆಲ್ಲದರ ಫೋಟೋ ತೆಗೀಬಹುದು…’ ಮಂಗಳಮುಖೀ ಕುಸುಮಾ ನಟಿಯಂತೆ, ರೂಪದರ್ಶಿಯಂತೆ, ಪುಟ್ಟ ಬಾಲೆಯಂತೆ ಹೀಗೆ ಆಫ‌ರ್‌ ಕೊಡುವಾಗ ಅವರು ಕೂವಗಂ ತಲುಪಿ ಆಗಿತ್ತು.

ಆ ಕೂವಗಂ ಇರೋದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆ ಯಲ್ಲಿ. ವರ್ಷಪೂರ್ತಿ ಟ್ರಾಫಿಕ್‌ನ ರೆಡ್‌ ಸಿಗ್ನಲ್ಲಿಗೆ ಕಾಯುವ ಮಂಗಳಮುಖೀಯರ ಹಾದಿ, ಮೇ ತಿಂಗಳಲ್ಲಿ ಗ್ರೀನ್‌ ಸಿಗ್ನಲ್ ಪಡೆದು ಕೂವಗಂ ಕಡೆಗೆ ಸಾಗುತ್ತದೆ. ಅಲ್ಲಿನ ಅರವಾನ್‌ ದೇಗುಲದಲ್ಲಿ ಅವರಿಗೆ ಹದಿನೆಂಟು ದಿನಗಳ ಧಾರ್ಮಿಕ ಸಡಗರ. ಇವತ್ತು ಹದಿನಾಲ್ಕನೇ ದಿನ. ಮಂಗಳಸೂತ್ರ ಹಿಡಿದು ಮದುವೆಗಾಗಿ ಇಲ್ಲಿ ಕೊರಳೊಡ್ಡುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ಸಂಜೆಯ ಮೇಲೆ ಇಲ್ಲಿ ಫ್ಯಾಶನ್‌ ಶೋ. ಆಕರ್ಷಕ ರೂಪರಾಶಿ ಇದ್ದ ಒಬ್ಬರನ್ನು ಆರಿಸಿ, “ಮಿಸ್‌ ಕೂವಗಂ’ ಕಿರೀಟ ತೊಡಿಸುತ್ತಾರೆ. ಇದೆಲ್ಲ ಸಂಭ್ರಮ ಮುಗಿವ ಕೊನೆಯ ದಿನದಲ್ಲಿ ಅವರೆಲ್ಲ ವಿಧವೆ ಆಗುತ್ತಾರೆ. ಇಷ್ಟಪಟ್ಟು ಧರಿಸಿದ್ದ ಬಳೆಯನ್ನು ಒಡೆಯುವಾಗ, ಮೊಗದಲ್ಲಿ ನಗು ಹೂತುಹೋಗುತ್ತದೆ. ಹಣೆಯ ಮೇಲಿನ ಬಿಂದಿಗೆ ಅಳಿಸುವಾಗ, ಅವರು ಆ ಕ್ಷಣ ಕನ್ನಡಿ ನೋಡುವುದಿಲ್ಲ. ಸಾಕೆನ್ನಿಸುವಷ್ಟು ಸುರಿಸುವ ಕಣ್ಣೀರಿನಿಂದ ಮೇಕಪ್ಪೆಲ್ಲ ಕರಗಿ ಮೊಗ ಹಗುರಾಗುವಾಗ, ಮನಸ್ಸು ಭಾರವೋ ಭಾರ.

“ಬೆಂಗಳೂರಿನ ಟ್ರಾಫಿಕ್ಕು ಸಿಗ್ನಲ್ಲುಗಳಲ್ಲಿ ನಿಂತು ಬೆವರೀ ಬೆವರಿ ಕಪ್ಪಾದೆ. ಸನ್‌ಸ್ಕ್ರೀನ್‌ ಹಚ್ಚಿಕೊಳ್ದಿದ್ರೆ ಇನ್ನೂ ಹೇಗಾಗ್ತಿದ್ನೋ!’ ಎಂದರು ಕುಸುಮಾ. ಮುಖದಲ್ಲಿ ಬ್ಲಾಕ್‌ಹೆಡ್ಸ್‌ ಜಾಸ್ತಿಯಾಗಿ, ಅದನ್ನು ಶಿವಾಜಿನಗರದ ಲೇಡಿಸ್‌ ಬ್ಯೂಟಿಪಾರ್ಲರಿನಲ್ಲಿ ಫೇಸ್‌ವಾಶ್‌ ಮಾಡಿಸಿಕೊಂಡು ತೆಗೆಸಿಕೊಂಡರಂತೆ. ಚಿಕ್ಕಪೇಟೆಯಲ್ಲಿ ಮಂಗಳ ಸಖೀಯರೊಂದಿಗೆ ಸೀರೆ, ಕುಪ್ಪಸದ ಪೀಸು, ಪ್ಯಾಡೆಡ್‌ ಬ್ರಾ, ವೆಲ್ವೇಟ… ಪೆಟ್ಟಿಕೋಟನ್ನು ಕೊಳ್ಳುವಾಗ ಅವತ್ತು ರಾತ್ರಿ ಒಂಬತ್ತಾಗಿತ್ತು. ಮಲ್ಲೇಶ್ವರಂನ ಎಂಟನೇ ಕ್ರಾಸಿಗೆ ಬಂದು, ಎರಡು ಜೊತೆ ಕಿವಿಯೋಲೆ, ಒಂದು ಡಜನ್‌ ಬಳೆಯನ್ನು ಒಂದೂಕಾಲು ತಾಸು ಆರಿಸಿ, ದಣಿದ, ಕತೆ ಹೇಳುತ್ತಾರೆ. ಮಾಮೂಲಿ ಟೈಲರ್‌ ಒಬ್ಬನಿಗೆ ಅಳತೆ ಕೊಟ್ಟು ಕುಪ್ಪಸವನ್ನು ವಾರದ ಮೊದಲೇ ಹೊಲಿಸುವಾಗ, ತುಸು ದಪ್ಪಗಾಗಿದ್ದೇನೆ ಅಂತನ್ನಿಸಿ ಕೆನ್ನೆ ಕೆಂಪಗೆ ಮಾಡಿಕೊಂಡರಂತೆ. ಶಿವಾಜಿನಗರದ ಪಾರ್ಲರಿನಲ್ಲಿ ನೀಟಾಗಿ ಐಬ್ರೋ ಮಾಡಿಸಿದ್ದಾರೆ . ಮೆಜೆಸ್ಟಿಕ್ಕಿನಲ್ಲಿ ಕಪ್ಪು ಬಣ್ಣಕ್ಕೆ ತುಸು ಸಮೀಪವಿರುವ ವಿಗ್‌ ಖರೀದಿಸುವಾಗ, ಅಲ್ಲಿ ಹಾದುಹೋದ ಹೆಣ್ಣಿನ ಜಡೆ ಮೇಲೆ ಆಸೆ ಹುಟ್ಟಿತಂತೆ. ಅದನ್ನೊಮ್ಮೆ ಕೈಯಲ್ಲಿ ಮುಟ್ಟೋಣ ಅಂತನ್ನಿಸಿತಂತೆ. ಅಲ್ಲಿಯೇ ಖರೀದಿಸಿದ ಕಾಂಡೋಮ ಪ್ಯಾಕೆಟ್ಟಿನ ಬಗ್ಗೆ ಹೇಳಿಕೊಳ್ಳಲು ಅವರೇನೂ ನಾಚಲಿಲ್ಲ.

ಕೂವಗಂನ ಹಬ್ಬಕ್ಕೆ ಹೊರಡುವಾಗ ಕುಸುಮಾ ಒಬ್ಬರೇ ಇಂಥ ಸಡಗರದಲ್ಲಿ ತೇಲುವುದಿಲ್ಲ. ಲಕ್ಷ ಲಕ್ಷ ಮಂಗಳಮುಖೀಯರು ಹಬ್ಬಕ್ಕೂ ಕೆಲವು ದಿನಗಳ ಮುಂಚೆ ತಮ್ಮ ಇಡೀ ವರುಷದ ದುಡಿಮೆಯಲ್ಲಿ ಉಳಿದ ಭಾಗವನ್ನು ಅಲಂಕಾರಕ್ಕಾಗಿ ವಿನಿಯೋಗಿಸುವರು. ಲೇಟೆಸ್ಟ್‌ ಟ್ರೆಂಡನ್ನು ಹುಡುಕಾಡುತ್ತಾ, ಅದನ್ನು ಅಳವಡಿಸಿಕೊಳ್ಳುವ ಉತ್ಸಾಹದಲ್ಲಿರುವರು. ಕೂವಗಂನಲ್ಲಿ ಏರ್ಪಡುವುದು ವಿಶ್ವದ ಅತಿದೊಡ್ಡ ಹೆಣ್ತನದ ಮೇಳ. ಅಲ್ಲಿ ಎಲ್ಲೆಂದರಲ್ಲಿ ಕೇಳುವುದು ಚಪ್ಪಾಳೆಗಳೇ. ಎಂದೋ ಪೇಂಟಿಂಗ್‌ ಮಾಡಿಸಿದ ಲಾಡುjಗಳನ್ನು ಹೊಕ್ಕಿ, ಅವರದೇ ಲೋಕದಲ್ಲಿ ಕಳೆದುಹೋಗಿ, ಪುಟ್ಟಪುಟ್ಟ ಫ್ಯಾನ್ಸಿ ಸ್ಟೋರುಗಳೆದುರು ಸಂಗಾತಿಯೊಂದಿಗೆ ಕೈಕೈ ಹಿಡಿದು ವಿಹರಿಸುವಾಗ ವರ್ಷವಿಡೀ ಇಲ್ಲೇ  ನೆಲೆ ನಿಲ್ಲೋಣ ಎಂಬ ಆಸೆ ಎಲ್ಲರ ಕಂಗಳಲ್ಲಿ ಹಣತೆಯಂತೆ ಹೊತ್ತಿಕೊಳ್ಳುತ್ತದೆ.

ಕೂವಗಂನಲ್ಲಿ ಮಂಗಳಮುಖಿಯರು ಕೂತಾಂಡವರನ್ನು ಆರಾಧಿಸುತ್ತಾರೆ. ಅರ್ಜುನನ ಮಗ ಅರವಾನ್‌ನ ಬಲಿಗೆ ಹೋಗುವ ಮುನ್ನ ನಡೆಯುವ ಘಟನಾವಳಿಗಳನ್ನು ಅಭಿನಯಿಸಿ ತೋರಿಸುವುದು ಒಂದು ರೂಢಿ. ಅರ್ಜುನ ಮತ್ತು ನಾಗಕನ್ಯೆ ಚಿತ್ರಾಂಗದಾಗೆ ಜನಿಸಿದವನು ಅರವಾನ್‌. ಕುರುಕ್ಷೇತ್ರ ಯುದ್ಧವನ್ನು ಗೆಲ್ಲಲು ಅರವಾನ್‌ನನ್ನು ಕಾಳಿಗೆ ಬಲಿ ಕೊಡಲು ಪಾಂಡವರು ನಿರ್ಧರಿಸುತ್ತಾರೆ. ಆದರೆ, ಅದು ಷರತ್ತು; “ಬ್ರಹ್ಮಚಾರಿಯಾಗಿ, ಆಸೆಗಳನ್ನು ಎದೆಯಲ್ಲಿಟ್ಟುಕೊಂಡು ಜೀವ ಸಮರ್ಪಿಸಲಾರೆ’ ಎನ್ನುತ್ತಾನೆ ಅರವಾನ್‌. “ಅದಕ್ಕೆ ಏನು ಪರಿಹಾರ ಕಲ್ಪಿಸಬೇಕು?’ ಎಂಬ ಪಾಂಡವರ ಪ್ರಶ್ನೆಗೆ, “ಶಾಸ್ತ್ರಕ್ಕೆ ಅಂತ ಒಂದು ಮದುವೆ ಆಗಬೇಕು. ಒಂದು ರಾತ್ರಿ ಹೆಣ್ಣಿನೊಂದಿಗೆ ನಾನು ಸುಖೀಸಬೇಕು’ ಎನ್ನುತ್ತಾನೆ ಅರವಾನ್‌. ನಾಳೆಯೇ ಸಾಯುತ್ತಾನೆ ಎಂದಾದರೆ ಆತನನ್ನು ಮದುವೆ ಆಗುವ ಹೆಣ್ಣಾದರೂ ಯಾರು? ಒಂದು ರಾತ್ರಿಯ ಸುಖಕ್ಕೋಸ್ಕರ ಬಾಳನ್ನೇ ಸಮರ್ಪಿಸುವ ಹೆಣ್ಣು ಅಲ್ಲಿ ಕಾಣಿಸಲೇ ಇಲ್ಲ. ಯಾವ ಹೆಣ್ಣೂ ಇದಕ್ಕೆ ಒಪ್ಪಲಿಲ್ಲ. ಆದರೆ, ಅರವಾನ್‌ನ ಮನಸ್ಸಿಗೆ ಬೇಸರಪಡಿಸಲು ಅರ್ಜುನನಿಗೆ ಇಷ್ಟವಿಲ್ಲ. ಅರ್ಜುನನು ಸ್ತ್ರೀ ಅವತಾರ ತಾಳಿ, ಅರವಾನ್‌ನನ್ನು ಮದುವೆ ಆಗುತ್ತಾನೆ. ರಾತ್ರಿಯಿಡೀ ಅವನನ್ನು ಸುಖೀಸುತ್ತಾನೆ. ಮರುದಿನ ಅರವಾನ್‌ನ ಶಿರಚ್ಛೇದವಾಗುತ್ತೆ. ಈ ಪುರಾಣ ಕತೆಯಂತೆ ಅರಾವಣ ಮಂಗಳಮುಖಿಯರ ಮೂಲಪುರುಷ. ಕಷ್ಟದಲ್ಲೂ, ಇಷ್ಟದಲ್ಲೂ ಹೃದಯದಲ್ಲಿ ನೆಲೆಗೊಂಡ ಆರಾಧ್ಯದೈವ.

“ಮದುವೆ ಒಂದು ತಪಸ್ಸು. ಅದು ಮೋಕ್ಷಕ್ಕೆ ಇರುವ ಮಾರ್ಗ’ ಎನ್ನುವುದು ಅರವಾನ್‌ನ ಕೊನೆಯ ಮಾತು. ಇಲ್ಲಿಗೆ ಬರುವ ಲಕ್ಷ ಲಕ್ಷ ಮಂಗಳಮುಖಿಯರ ಕಿವಿಯಲ್ಲಿ ಇದೇ ಮೊಳಗುತ್ತಿರುತ್ತದೆ. ಬರುವ ಎಲ್ಲರೂ ಮದುವೆ ಮಂಟಪಕ್ಕೆ ಕಾಲಿಡುವ ವಧುವಿನಂತೆ ಸಿಂಗಾರ ಮಾಡಿಕೊಂಡು ಬಂದಿರುತ್ತಾರೆ. ಒಂದು ದಿನದ ಮಟ್ಟಿಗೆ ಮದುವೆ ಆಗುತ್ತಾರೆ. ಪತಿ ಕಳೆದುಕೊಂಡ ಸ್ತ್ರೀರೂಪಿ ಅರ್ಜುನ, ಹೇಗೆ ವಿಧವೆ ಪಟ್ಟ ಹೊತ್ತು, ಸಂಪ್ರದಾಯ ಆಚರಿಸಿಕೊಳ್ಳುವನೋ ಅದೇ ರೀತಿ ಇಲ್ಲಿ ಮಂಗಳಮುಖಿಯರು ಬಿಳಿ ಸೀರೆ ಉಟ್ಟು ದುಃಖದ ಮಡುವಿನಲ್ಲಿ ಸೆರೆ ಆಗುವರು. ಇವೆಲ್ಲ ನಡೆಯುವುದು ಪ್ರತಿವರ್ಷದ ಚಿತ್ರ ಪೌರ್ಣಮಿಯಂದು. ಮಂಗಳಮುಖೀ ಆದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಕನಿಷ್ಠ ಒಮ್ಮೆಯಾದರೂ ಆಚರಿಸಿಕೊಳ್ಳಬೇಕಾದ ಪದ್ಧತಿ ಇದು.

“ಇಪ್ಪತ್ತು ವರುಷದ ಕೆಳಗೆ ಈ ಸಂಭ್ರಮ 18 ದಿನಗಳ ಧಾರ್ಮಿಕ ಹಬ್ಬವಾಗಿತ್ತು. ಆದರೆ, ಅಷ್ಟೊಂದು ದಿನ ಕೂವಗಂ ಎಂಬ ಮೂಲಸೌಕರ್ಯವೇ ಇಲ್ಲದ ಹಳ್ಳಿಯಲ್ಲಿ ಇರಲಾಗುವುದಿಲ್ಲ ಎಂಬ ಕಾರಣಕ್ಕೆ ಈಗ ಕೇವಲ ಮೂರು ದಿನಕ್ಕೆ ಸಂಭ್ರಮ ಆಚರಿಸುತ್ತಾರೆ. ಮೊದಲೆರಡು ದಿನ ಫ್ಯಾಶನ್‌ ಶೋ, ಸೌಂದರ್ಯ ಸ್ಪರ್ಧೆ ಇರುತ್ತೆ. 2002, 2005, 2006ರಲ್ಲಿ ಬೆಂಗಳೂರಿನ ಮಂಗಳಮುಖಿಯರೇ ಮಿಸ್‌ ಕೂವಗಂ ಆಗಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬೆಂಗಳೂರಿನ ಸುಮನ್‌. ನೆರೆದ ಲಕ್ಷಾಂತರ ಮಂಗಳಮುಖೀಯರಿಗೆ ಅಲ್ಲಿನ ದೇಗುಲದ ಪೂಜಾರಿಗಳು ಅರವಾನ್‌ನ ಹೆಸರಿನಲ್ಲಿ ಮಂಗಳಸೂತ್ರವನ್ನು ಕುತ್ತಿಗೆ ಕಟ್ಟುತ್ತಾರೆ. ನಂತರ ಅವರೇ ಮುತ್ತೈದೆ ಪಟ್ಟದಿಂದಲೂ ಮುಕ್ತಿಗೊಳಿಸುತ್ತಾರೆ.

ದೊಡ್ಡ ದೊಡ್ಡ ಹೊಲಗಳ ನಡುವೆ ಪುಟ್ಟ ದೇಗುಲ ಅದು. ಬೇರೆ ಸಮಯದಲ್ಲಿ ಈ ಹೊಲಗಳಲ್ಲಿ ನಾಟಿ ನಡೆಯುತ್ತದೆ. ಕಟಾವು ಮುಗಿದ ಮೇಲಷ್ಟೇ ಕೂವಗಂನಲ್ಲಿ ಈ ಸಂಭ್ರಮ. ಸಿಂಗಾಪುರ, ಮಲೇಷ್ಯಾದಿಂದಲೂ ಮಂಗಳಮುಖೀಗಳು ಬರುತ್ತಾರೆ.

ಇಲ್ಲಿಯ ತನಕ ಹೇಳಿದ್ದು ಕೂವಗಂ ಎಂಬ ಪುಟಾಣಿ ಹಳ್ಳಿಯಲ್ಲಿ ನಡೆಯುವ ಸಂಭ್ರಮದ ಒಂದು ಮುಖ. ಇನ್ನೊಂದು ಸ್ವರೂಪ ಯಾರಿಗೂ ಬೇಸರ ಹುಟ್ಟಿಸೀತು. ಇಲ್ಲಿಗೆ ಚೆಂದದ ಮಂಗಳಮುಖೀಯರು ಬರುತ್ತಾರೆಂದು ಕಾದು ಕೂರುವ ಮಾಮೂಲಿ ಪುರುಷರ ಹಾವಳಿ ಇಲ್ಲಿ ಹೆಚ್ಚು. ಬಸ್ಸಿಳಿದ ಕೂಡಲೇ ಹಿಂಬಾಲಿಸಿ ಬಂದು, ಕಿರಿಕಿರಿ ನೀಡುವ ಇವರನ್ನು ನಿಯಂತ್ರಿಸಲು ಕನಿಷ್ಠ ಖಾಕಿ ಕಾವಲೂ ಇಲ್ಲಿಲ್ಲ. ಕಡೇಪಕ್ಷ ಹೆಲ್ಪ್ಲೈನ್‌ ಅನ್ನೂ ಇಲ್ಲಿ ಇಟ್ಟಿಲ್ಲ. ಬರುವ ಲಕ್ಷ ಲಕ್ಷ ಮಂದಿಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ಮೂರೂ ದಿನ ರಾತ್ರಿ ವೇಳೆ ಇಲ್ಲಿನ ರಸ್ತೆ ನೋಡಿದರೆ, ಟ್ರಾಫಿಕ್ಕಿನಲ್ಲಿ, ಬಸ್‌ಸ್ಟಾಂಡಿನಲ್ಲಿ ಕಾಣುವ ಮಂಗಳಮುಖೀಗಳು ಅನಾಥರಂತೆ ಮಲಗಿರುವುದು ಯಾರಿಗೂ ಅಯ್ಯೋ ಎನ್ನಿಸದೇ ಇರದು. ಆ ಧೂಳಿನಲ್ಲೇ ಇವರು ಸಂಭ್ರಮದ ನಿದ್ರೆಗೆ ಜಾರಿರುತ್ತಾರೆ. “ಕನಿಷ್ಠ ವಸತಿ ವ್ಯವಸ್ಥೆಯನ್ನೂ ಸರ್ಕಾರ ಮಾಡಿಲ್ಲ’ ಎನ್ನುವುದು ಬೆಂಗಳೂರಿನ ಹೆಸರು ಹೇಳಲಿಚ್ಚಿಸದ ಮಂಗಳಮುಖೀಯೊಬ್ಬರ ಬೇಸರದ ಮಾತು.

ಈ ಮೂರು ದಿನದಲ್ಲಿ ಎಲ್ಲಿಂದಲೋ ಬಂದವರು ಸಂಗಾತಿ ಆಗುತ್ತಾರೆ. ಆಯಾ ಪ್ರದೇಶಗಳ ಕಾನೂನು, ಪೊಲೀಸರ ಉಪಟಳ, ಬದುಕುವ ಕ್ರಮಗಳು ಮಾತಿಗೆ ವಸ್ತುವಾಗುತ್ತವೆ. ಹಾಗೆ ಚರ್ಚೆ ಆಗುವಾಗ, ಉತ್ತರ ಭಾರತೀಯರಿಗೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಮಂಗಳಮುಖೀಗಳ ಮೇಲೆ ಏನೋ ಅನುಕಂಪ. ಇಲ್ಲಿನ ಬಹುತೇಕ ಮಂಗಳಮುಖಿಯರಿಗೆ ದುಡಿಮೆಯೆಂದರೆ ಟ್ರಾಫಿಕ್ಕಿನಲ್ಲಿ ಭಿಕ್ಷೆ ಬೇಡುವುದಷ್ಟೇ. ಅದೇ ಉತ್ತರ ಭಾರತದಲ್ಲಿ ಮನೆಗಳಲ್ಲಿ ಹುಟ್ಟುಹಬ್ಬ, ಮದುವೆ ಇನ್ನಾéವುದೋ ಶುಭ ಸಮಾರಂಭ ನಡೆದರೆ ಬಧಾ (ಮಂಗಳಮುಖಿಯರಿಗೆ ನೀಡುವ ಸಿಹಿತಿಂಡಿ, ಬಟ್ಟೆ, ಹಣ ಇತ್ಯಾದಿ ಕಾಣಿಕೆ) ನೀಡುತ್ತಾರೆ. ಅವರು ನೀಡುವ “ಬಧಾ’ ಇವರ ಹೊಟ್ಟೆಪಾಡಿಗೆ ಸಾಕು.

ಮೂರು ದಿನದ ರಾತ್ರಿಯೂ ಮುಗಿಯುತ್ತಿದ್ದಂತೆ, ಅಲ್ಲಿಂದ ಭಾರದ ಹೆಜ್ಜೆಗಳನ್ನಿಟ್ಟು, ತಮ್ಮೂರಿಗೆ ಸಾಗುತ್ತಾರೆ. ಮತ್ತೆ ಅದೇ ಟ್ರಾಫಿಕ್‌ ಸಿಗ್ನಲ್ಲು ಕಾಯುತ್ತಿರುತ್ತೆ. ಲಾಠಿ ಹಿಡಿದು ಪೊಲೀಸರು ಬಂದು ಗದರಿಸುತ್ತಾರೆ. ಮತ್ತೆ ರಾತ್ರಿ. ಅದೇ ಕತ್ತಲು. ಬೀದಿ ದೀಪದ ಬೆಳಕು. ಅಲ್ಲೊಂದು ನಗು. ಅರಾವನನ ಆಶೀರ್ವಾದ.

ಇಲ್ಲಿಗೇಕೆ ಬರುತ್ತೇವೆಂದರೆ…
ಕೂವಗಂ ಎನ್ನುವುದು ನಮ್ಮ ಪಾಲಿಗೆ ಸ್ವರ್ಗ. ಇಲ್ಲಿ ನಮಗೆ ಸ್ವಾತಂತ್ರ ಇರುತ್ತೆ. ಇಷ್ಟ ಬಂದ ಸೀರೆ ಉಟ್ಟರೆ ಯಾರೂ ಆಡಿಕೊಳ್ಳುವುದಿಲ್ಲ. ಮೇಕಪ್‌ ಮಾಡಿಕೊಂಡರೆ, ಬೇರಾರೂ ಮುಸಿಮುಸಿ ನಕ್ಕು ಗೇಲಿ ಮಾಡುವುದಿಲ್ಲ. ಬಯಸಿದ ಜ್ಯುವೆಲ್‌ ಧರಿಸಿ, ರೂಪಾಲಂಕಾರದಿಂದ ಮಿನುಗಬಹುದು. ಆದರೆ, ನಮ್ಮ ಪಾಲಿಗೆ ಬೇರೆ ದಿನಗಳು ಹೀಗಿರುವುದಿಲ್ಲ. ನಾವು ಸಿಟಿ ಪ್ರದೇಶಗಳಲ್ಲಿ ಓಡಾಡುವಾಗ ಪೊಲೀಸರು ಕಿರಿಕಿರಿ ಮಾಡ್ತಾರೆ. ಜನ ನಮ್ಮನ್ನು ಬೇರೆ ರೀತಿಯೇ ನೋಡ್ತಾರೆ. ಮನಸ್ಸಿಗೆ ಹಿಡಿಸಿದಂತೆ ಅಂದಚೆಂದ ಪ್ರದರ್ಶಿಸಲಾಗದು. ನಮ್ಮವರೊಟ್ಟಿಗೆ ಕಾಲ ಕಳೆಯಲೂ ಆಗದು. ಭಾವನೆಗಳನ್ನು ತೋರಿಸಿಕೊಳ್ಳುವುದಂತೂ ಅಸಾಧ್ಯದ ಮಾತು.
– ಸುಮನಾ, ಬೆಂಗಳೂರಿನ ಮಂಗಳಮುಖಿ

ಇಲ್ಲಿ ಏನೇನು ಇರುತ್ತೆ?
ವರ್ಷಕ್ಕೊಮ್ಮೆ ನಡೆಯುವ ಅರವಾನ್‌ ಹಬ್ಬ 18 ದಿನಗಳ ಸಂಭ್ರಮ. ಆದರೆ, ಮೂಲ ಸೌಕರ್ಯಗಳ ಕೊರತೆಯ ಕಾರಣಕ್ಕೆ ಈಗ ಮೂರು ದಿನಗಳಿಗೆ ಇಳಿದಿದೆ. ಹೆಣ್ಣೆಂದರೆ ಅಂದಚೆಂದವನ್ನು ಅತಿಯಾಗಿ ಪ್ರೀತಿಸುವ ಜೀವ. ಆ ಕಾರಣಕ್ಕಾಗಿಯೇ ಇಲ್ಲಿ ಮಂಗಳಮುಖೀಯರು ಅಲಂಕಾರದಲ್ಲಿಯೇ ಮುಳುಗಿರುತ್ತಾರೆ. ಮೇಕಪ್‌ ಕಿಟ್‌ಗಳನ್ನು ತಮ್ಮೂರಿಂದಲೇ ತಂದು, ಇಲ್ಲಿ ಇಷ್ಟ ಬಂದಂತೆ ಅಲಂಕರಿಸಿಕೊಳ್ತಾರೆ. ಸಂಜೆ ವೇಳೆ ಫ್ಯಾಶನ್‌ ಶೋ ಇರುತ್ತೆ. ಗುತ್ತಿಗೆಗೆ ನೀಡಿದ ಖಾಸಗಿ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಇದನ್ನು ಏರ್ಪಡಿಸುತ್ತದೆ. ಭರ್ಜರಿ ಸಂಗೀತ, ಶಿಳ್ಳೆ, ಚಪ್ಪಾಳೆಗಳು ಬೀಳುತ್ತವೆ. ಇದಾದ ಬಳಿಕ ಅತಿ ಸುಂದರವಾಗಿದ್ದವರಿಗೆ “ಮಿಸ್‌ ಕೂವಗಂ’ ಕಿರೀಟ ತೊಡಿಸುತ್ತಾರೆ.

ಇವೆಲ್ಲದರ ನಡುವೆ ಎಚ್‌ಐವಿ ಕುರಿತು ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಿರುತ್ತಾರೆ. ಏಡ್ಸ್‌ ಸಂಬಂಧ ವಿವಿಧ ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಲಾಗುತ್ತದೆ. ಸುತ್ತಮುತ್ತಲಿನ ಕೆಲವು ಎನ್‌ಜಿಒಗಳು ಇದರ ಹೊಣೆ ಹೊತ್ತಿರುತ್ತವೆ.

No Comments

Leave A Comment