Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಶೋಪಿಯಾನ್: ಪೊಲೀಸ್ ಕ್ಯಾಂಪ್ ಮೇಲೆ ಉಗ್ರರ ದಾಳಿ, 5 ರೈಫಲ್ ಗಳೊಂದಿಗೆ ಪರಾರಿ!

ಶೋಪಿಯಾನ್: ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರ ಸಂಘಟನೆಗಳು ಪದೇ ಪದೇ ದಾಳಿ ಮಾಡುತ್ತಿದ್ದು, ಠಾಣೆಯಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗುತ್ತಿದ್ದಾರೆ.ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ನಿನ್ನೆ ತಡರಾತ್ರಿಯಲ್ಲಿ ಕಾಶ್ಮೀರದ ದಕ್ಷಿಣ ಶೋಪಿಯಾನ್ ನ ಕೋರ್ಟ್ ಕಾಂಪ್ಲೆಕ್ಸ್ ನ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಶಂಕಿತ ಉಗ್ರರ ತಂಡ ಐದು ಶಸ್ತ್ರಗಳೊಂದಿಗೆ  ಪರಾರಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ತಡರಾತ್ರಿಯಲ್ಲಿ ಏಕಾಏಕಿ ದಾಳಿ ಮಾಡಿದ ಉಗ್ರರು ಕೈಗೆ ಸಿಕ್ಕ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಈ ಪೈಕಿ ನಾಲ್ಕು ಸರ್ವೀಸ್ ಇನ್ಸಾಸ್ ರೈಫಲ್ ಗಳು ಮತ್ತು 1 ಎಕೆ 47  ರೈಫಲ್ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೇವಲ ಒಂದು ವಾರದಲ್ಲಿ ಇದು ಎರಡನೇ ಘಟನೆಯಾಗಿದ್ದು, ಈ ಹಿಂದೆ ರಜೌರಿ ಪೊಲೀಸ್ ಕ್ಯಾಂಪ್ ಮೇಲೆ ಉಗ್ರರು ದಾಳಿ ಮಾಡಿ ಶಸ್ತ್ರಾಸ್ತ್ರ ದೋಚಿದ್ದರು. ಕಳೆದ ಒಂದು ತಿಂಗಳಲ್ಲಿ ಉಗ್ರರು ಸುಮಾರು 35 ಶಸ್ತ್ರಾಸ್ತ್ರಗಳನ್ನು  ದೋಚಿದ್ದು, ಈ ಪೈಕಿ 21 ಇನ್ಸಾಸ್ ರೈಫಲ್ ಮತ್ತು 12 ಎಸ್ ಎಲ್ ಆರ್, 2 ಎಕೆ 47 ರೈಫಲ್, ಒಂದು ಲಘು ಮಷಿನ್ ಗನ್ ಹಾಗೂ 3 ಕಾರ್ಬೈನ್ ಮಷಿನ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳ ಮೇಲಿನ ಉಗ್ರರ ದಾಳಿ ಮತ್ತು ಶಸ್ತ್ರಾಸ್ತ್ರ ದರೋಡೆ ಹೆಚ್ಚಾಗುತ್ತಿದ್ದು, ಸ್ಥಳೀಯ ಯುವಕರೂ ಕೂಡ ಕೃತ್ಯದಲ್ಲಿ ಪಾಲ್ಗೊಳ್ಳುತ್ತಿರುವುದೂ ಕೂಡ  ಆತಂಕಕ್ಕೆ ಕಾರಣವಾಗಿದೆ.

ಒಟ್ಟಾರೆ ಅತ್ತ ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿ ಇತ್ತ ಕಾಶ್ಮೀರದಲ್ಲಿ ಆಂತರಿಕ ಹಿಂಸಾಚಾರ ಮತ್ತೊಂದೆಡೆ ಸ್ಥಳೀಯ ಉಗ್ರಗಾಮಿಗಳ ಉಪಟಳದಿಂದಾಗಿ ಭಾರತೀಯ ಸೈನಿಕರಿಗೆ ನೆಮ್ಮದಿ ಇಲ್ಲದಂತಾಗಿದೆ.

No Comments

Leave A Comment