Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಲಕ್ಕಿ ಹರಿಪ್ರಿಯಾ ಸರ್ಜಾ ತೃತೀಯ

ಬೆಂಗಳೂರು: ನಟಿ ಹರಿಪ್ರಿಯಾ ಅವರಿಗೆ ಈ ಅಕ್ಷಯ ತದಿಗೆ ಬರೀ ಅಕ್ಷಯ ತೃತೀಯ ಅಷ್ಟೇ ಅಲ್ಲ. ಏಕೆಂದರೆ ಈ ಬಾರಿ ಅದು ಅವರಿಗೆ ‘ಸರ್ಜಾ ತೃತೀಯ’ ಕೂಡ. ಅಂದರೆ ಸರ್ಜಾ ಕುಟುಂಬದ ಮೂರನೇ ಹೀರೋ ಜತೆಗೂ ನಟಿಸುವ ಅವಕಾಶ ಹರಿಪ್ರಿಯಾಗೆ ಒದಗಿ ಬಂದಿದ್ದಲ್ಲದೆ, ಆ ಚಿತ್ರದ ಮುಹೂರ್ತ ಶುಭದಿನವಾದ ಅಕ್ಷಯ ತೃತೀಯದಂದೇ ನಡೆದಿದೆ. ಆ ಮೂಲಕ ಅವರ ಪಾಲಿಗೆ ಅದೊಂದು ರೀತಿಯಲ್ಲಿ ‘ಸರ್ಜಾ ತೃತೀಯ’ ಎಂಬಂತಾಗಿದೆ.

ಏಳು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ತಮಿಳು ಚಿತ್ರ ‘ವಲ್ಲಕೊಟ್ಟೈ’ನಲ್ಲಿ ನಟ ಅರ್ಜುನ್ ಸರ್ಜಾ ಜತೆ ಹರಿಪ್ರಿಯಾ ಮೊಟ್ಟಮೊದಲ ಬಾರಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಅರ್ಜುನ್- ಹರಿಪ್ರಿಯಾ ಜೋಡಿ ಸಿನಿಪ್ರಿಯರಿಂದ ಅಪಾರ ಮೆಚ್ಚುಗೆ ಗಳಿಸಿತ್ತು. ಅದಾದ 5 ವರ್ಷಗಳ ಬಳಿಕ ಸರ್ಜಾ ಕುಟುಂಬದ ಮತ್ತೋರ್ವ ನಟ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಚಿತ್ರದಲ್ಲೂ ಹರಿಪ್ರಿಯಾಗೆ ಅವಕಾಶ ಲಭಿಸಿತ್ತು. ಇದೀಗ ನಿರ್ದೇಶಕ ಗುರು ದೇಶಪಾಂಡೆ ಆಕ್ಷನ್-ಕಟ್​ನಲ್ಲಿ ಚಿರು ಅಭಿನಯಿಸಲಿರುವ ‘ಸಂಹಾರ’ ಚಿತ್ರದ ನಾಯಕಿಯರಲ್ಲಿ ಹರಿಪ್ರಿಯಾ ಕೂಡ ಒಬ್ಬರು. ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ.. ಹೀಗೆ ಒಂದೇ ಕುಟುಂಬದ ಮೂವರು ಹೀರೋಗಳ ಚಿತ್ರಗಳಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ಹರಿಪ್ರಿಯಾ ಸಂಭ್ರಮವನ್ನು ಹೆಚ್ಚಿಸಿದೆಯಂತೆ. ‘ಅರ್ಜುನ್ ಸರ್ಜಾ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದಾಗ ನನಗೆ ಅದೇ ದೊಡ್ಡ ಸಂಭ್ರಮವಾಗಿತ್ತು. ಅವರ ಜತೆ ನಟಿಸಬೇಕು ಎಂಬುದು ಬಹುದಿನದ ಆಸೆಯಾಗಿತ್ತು. ಹಾಗಾಗಿ ಅಂಥದ್ದೊಂದು ಅವಕಾಶ ಇದೆ ಎಂದಾಗ ನಾನು ಕಥೆ ಏನು ಎಂಬ ಬಗ್ಗೆಯೂ ಅಷ್ಟು ಗಮನ ನೀಡಲಿಲ್ಲ. ಅವರೊಂದಿಗೆ ನಟಿಸುವುದಷ್ಟೇ ನನಗೆ ದೊಡ್ಡ ವಿಷಯವಾಗಿತ್ತು’ ಎಂದು ಅಂದಿನ ಖುಷಿಯನ್ನು ನೆನಪಿಸಿಕೊಳ್ಳುತ್ತಾರೆ ಹರಿಪ್ರಿಯಾ. ‘ಆ ಚಿತ್ರಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿ ಯಶಸ್ವಿಯಾಯಿತು. ಅರ್ಜುನ್ ಸರ್ಜಾ ಅವರು ನನ್ನನ್ನು ಮಗಳಂತೆ ನೋಡಿಕೊಂಡಿದ್ದರು. ಅವರಿಗೂ ನನ್ನಷ್ಟೇ ದೊಡ್ಡ ಮಗಳಿದ್ದಾರೆ. ಈಗಲೂ ನಾನು ಅವರಿಂದ ಆಗಾಗ ಸಲಹೆಗಳನ್ನು ಕೇಳಿ ಪಡೆಯುತ್ತಿರುತ್ತೇನೆ. ಆಮೇಲೆ 2 ವರ್ಷಗಳ ಹಿಂದೆ ಧ್ರುವ ಸರ್ಜಾ ಜತೆ ‘ಭರ್ಜರಿ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದು ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈಗ ‘ಸಂಹಾರ’ ಚಿತ್ರದಿಂದಾಗಿ ಚಿರಂಜೀವಿ ಸರ್ಜಾ ಜತೆಗೂ ನಟಿಸುವ ಅವಕಾಶ ಸಿಕ್ಕಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಹರಿಪ್ರಿಯಾ.

ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ.. ಹೀಗೆ ಸರ್ಜಾ ಕುಟುಂಬದ ಮೂವರು ಹೀರೋಗಳ ಚಿತ್ರದಲ್ಲೂ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿರುವುದು ಬಹುಶಃ ನನಗೊಬ್ಬಳಿಗೇ ಅನಿಸುತ್ತೆ. ಸರ್ಜಾ ಕುಟುಂಬದ ಮೂವರು ಹೀರೋಗಳಿಗೂ ಹೀರೋಯಿನ್ ಆಗಿದ್ದೇನೆ ಎಂಬುದೇ ಹೆಮ್ಮೆ.

 ಹರಿಪ್ರಿಯಾ, ನಟಿ

No Comments

Leave A Comment