Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟಿಗೆ ಮುರಳಿ ಮುಲಾಮು

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೆ ಆಗಮಿಸಿರುವ ಉಸ್ತುವಾರಿ ಮುರಳೀಧರ ರಾವ್, ಉಭಯ ಬಣಗಳ ತಲಾ ಇಬ್ಬರು ಪದಾಧಿಕಾರಿಗಳನ್ನು ತೆಗೆದುಹಾಕುವ ಮೂಲಕ ಪಕ್ಷದ ಭಿನ್ನಮತೀಯ ಮುಖಂಡರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಭಿನ್ನಮತ ತಾರಕಕ್ಕೇರುತ್ತಿದ್ದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆಯ ಮೇರೆಗೆ ಶನಿವಾರ ಬೆಂಗಳೂರಿಗೆ ಆಗಮಿಸಿದ ಮುರಳೀಧರ ರಾವ್ ಸಂಜೆ ಪಕ್ಷದ ಹಲವು ಮುಖಂಡರ ಜತೆ ವೈಯಕ್ತಿಕವಾಗಿ ಮಾತುಕತೆ ನಡೆಸಿದರು. ಅದರ ಪರಿಣಾಮವಾಗಿ ಪದಾಧಿಕಾರಿ ಹುದ್ದೆಯಿಂದ ನಾಲ್ಕು ಜನರಿಗೆ ಕೊಕ್ ನೀಡುವ ನಿರ್ಧಾರ ಮಾಡಿದರು. ಮುರಳೀಧರ ರಾವ್, ರಾತ್ರಿ ವೇಳೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೊಂದಿಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಅದರ ಬೆನ್ನಲ್ಲೇ ರಾಜ್ಯ ಘಟಕದ ಉಪಾಧ್ಯಕ್ಷ ಹುದ್ದೆಯಿಂದ ಭಾನುಪ್ರಕಾಶ್, ನಿರ್ಮಲಕುಮಾರ್ ಸುರಾನ, ವಕ್ತಾರ ಗೋ. ಮಧುಸೂದನ್, ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷದ ಜವಾಬ್ದಾರಿಗಳಿಂದ ಮುಕ್ತಗೊಳಿಸಿರುವ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದಿಢೀರ್ ಸರ್ಜರಿ: ಮುರಳೀಧರರಾವ್ ಮೊದಲಿಗೆ ಸಂತೋಷ್ ಜತೆ ಪ್ರತ್ಯೇಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ತಮ್ಮ ವಿರುದ್ಧ ಟೀಕೆ ಮಾಡಿರುವ ಮಧುಸೂದನ್ ಹಾಗೂ ರೇಣುಕಾಚಾರ್ಯ ಅವರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದರೆನ್ನಲಾಗಿದೆ. ಆ ನಂತರ ರಾತ್ರಿ 10.30ರ ಸುಮಾರಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮುರಳೀಧರರಾವ್ ಅವರು ಸಂತೋಷ್ ಅವರ ಆಗ್ರಹವನ್ನು ಮನವರಿಕೆ ಮಾಡಿಕೊಟ್ಟರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಯಡಿಯೂರಪ್ಪ, ತಮ್ಮ ಬೆಂಬಲಿಗರಿಬ್ಬರಿಗೆ ಪದಾಧಿಕಾರಿ ಹುದ್ದೆಯಿಂದ ಕೊಕ್ ಕೊಡುವುದೇ ಆದಲ್ಲಿ ಸಂಘಟನೆ ಉಳಿಸಿ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯ ಉಪಾಧ್ಯಕ್ಷರಾದ ಭಾನುಪ್ರಕಾಶ್ ಹಾಗೂ ನಿರ್ಮಲಕುಮಾರ್ ಸುರಾನಾ ವಿರುದ್ಧವೂ ಕ್ರಮ ಜರುಗಿಸಿ ಎಂಬ ಒತ್ತಾಯ ಮಾಡಿದರು.

ಯಡಿಯೂರಪ್ಪ ಸಲಹೆ ಒಪ್ಪಿದ ಮುರಳೀಧರರಾವ್ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸಿ, ಎರಡೂ ಗುಂಪಿನ ತಲಾ ಇಬ್ಬರನ್ನು ಪದಾಧಿಕಾರಿ ಹುದ್ದೆಯಿಂದ ಕಿತ್ತು ಹಾಕುವ ತೀರ್ವನಕ್ಕೆ ಅನುಮತಿ ಪಡೆದರು ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತ ಪಡಿಸಿವೆ. ಮುರಳೀಧರರಾವ್ ಭಾನುವಾರ ಸಹ ಮಾತುಕತೆ ಮುಂದುವರೆಸಲಿದ್ದಾರೆ.

ಈಶ್ವರಪ್ಪ ವಿರುದ್ಧವೂ ಕ್ರಮ ಸಾಧ್ಯತೆ: ನಾಲ್ವರು ಪದಾಧಿಕಾರಿಗಳ ವಿರುದ್ಧದ ಕ್ರಮ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಆರಂಭಿಕ ಕ್ರಮಗಳಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಇನ್ನಷ್ಟು ಗಂಭೀರ ಶಿಸ್ತುಕ್ರಮ ಜರುಗುವ ಸಾಧ್ಯತೆ ಇದೆ ಎನ್ನಲಾಗಿದೆ. ವರಿಷ್ಠರ ಎಚ್ಚರಿಕೆ ಹೊರತಾಗಿಯೂ ಬ್ರಿಗೇಡ್ ಚಟುವಟಿಕೆ ಮುಂದುವರಿಸಿ, ಪಕ್ಷ ಹಾಗೂ ರಾಜ್ಯಾಧ್ಯಕ್ಷರಿಗೆ ಗಡುವು ನೀಡುತ್ತಿರುವ ಈಶ್ವರಪ್ಪ ವಿರುದ್ಧವೂ ವರಿಷ್ಠರು ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚರ್ಚೆ ನಡೆಸಿದ ಇತರ ನಾಯಕರು: ಪಿ. ಮುರಳೀಧರರಾವ್ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್, ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಶ್ರೀರಾಮುಲು, ಆಯನೂರು ಮಂಜುನಾಥ್, ಸಿ.ಎಂ. ಉದಾಸಿ, ಅಶ್ವತ್ಥನಾರಾಯಣ, ಅಬ್ದುಲ್ ಅಜೀಂ, ಚೀ.ನಾ.ರಾಮು, ಡಿ.ಎಸ್.ವೀರಯ್ಯ, ಬಸವರಾಜು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಭಾರತಿ ಶೆಟ್ಟಿ ಸೇರಿ ಕೆಲ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅಭಿಪ್ರಾಯವನ್ನು ರಾವ್ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಲಿದ್ದಾರೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಮೂಲಗಳು ಹೇಳಿವೆ.

ಅಮಿತ್ ಷಾ ಗರಂ

ಮತ್ತೊಂದೆಡೆ ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೆ ಬಿಟ್ಟಿದ್ದಕ್ಕೆ ಉಸ್ತುವಾರಿ ಮುರಳೀಧರ ರಾವ್ ವಿರುದ್ಧ ಅಮಿತ್ ಷಾ ಗರಂ ಆಗಿದ್ದಾರೆ. ರಾಜ್ಯ ಉಸ್ತುವಾರಿಗಳು ಸಬಲರಾಗಿದ್ದರೆ ಈ ಪರಿಸ್ಥಿತಿ ಬರುವುದಿಲ್ಲ ಎಂದಿರುವ ಷಾ, ಕೂಡಲೆ ರಾಜ್ಯಕ್ಕೆ ತೆರಳಿ ಕಾರ್ಯಕರ್ತರು, ನಾಯಕರ ಮನಸ್ಸನ್ನು ಅರಿಯಿರಿ. ನಿಮ್ಮ ಮೂಲಕ ಸತ್ಯ ತಿಳಿಯಬೇಕೇ ಹೊರತು ನೇರವಾಗಿ ಭೇಟಿ ಮಾಡುವ ಸ್ಥಿತಿ ಬರಬಾರದು ಎಂದು ತಿಳಿಸಿದ್ದಾರೆ. ಈ ಕಾರಣಕ್ಕೆ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದ ಮುರಳೀಧರ ರಾವ್ ರಾಜ್ಯಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಹೆಸರನ್ನು ಬಳಸಿ ಬಹಿರಂಗ ವಾಗಿ ಟೀಕೆ ಮಾಡಿದ್ದಕ್ಕೆ ರಾಷ್ಟ್ರೀಯ ನಾಯಕರು ಮುನಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಿನ್ನರ ಮೇಲೆ ಷಾ ಬೇಹು

ಆಯಾ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತ ವಾಸ್ತವ ಮಾಹಿತಿ ಗಳನ್ನು ಪಡೆದು ಅದಕ್ಕೆ ತಕ್ಕಂತೆ ಕಾರ್ಯತಂತ್ರ ಹೆಣೆಯುವಲ್ಲಿ ನಿಪುಣರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ತಮ್ಮದೇ ಗೌಪ್ಯ ತಂಡದ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಬೆಂಗಳೂರಿನಲ್ಲಿ ನಡೆಸಿದ ‘ಸಂಘಟನೆ ಉಳಿಸಿ’ ಸಭೆ ಬಗ್ಗೆ ರಾಜ್ಯ ಸಮಿತಿ ವರದಿ ನೀಡುವ ಮೊದಲೇ ಅಮಿತ್ ಷಾ ತಮ್ಮ ತಂಡವನ್ನು ಬೇಹುಗಾರಿಕೆಗೆ ನಿಯೋ ಜಿಸಿ, ನೇರ ವರದಿ ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಮಹತ್ವದ್ದಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಸ್ಥಳೀಯ ಮುಖಂಡರನ್ನು ನೆಚ್ಚಿಕೊಳ್ಳದೆ ತಮ್ಮದೇ ತಂಡ ರೂಪಿಸಿಕೊಂಡು ರಾಜ್ಯದ ಪ್ರತಿಯೊಂದು ಮಾಹಿತಿ ಪಡೆದು ಅವರು ಕಾರ್ಯ ತಂತ್ರಗಳನ್ನು ರೂಪಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಯಾವುದೇ ಪಕ್ಷದಲ್ಲಿ ಭಿನ್ನ ಮತೀಯ ಚಟುವಟಿಕೆ ನಡೆದರೆ ರಾಜ್ಯ ಘಟಕ ಅಥವಾ ಸ್ಥಳೀಯ ಮುಖಂಡರಿಂದ ಪಕ್ಷದ ವರಿಷ್ಠರು ವರದಿ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಒಂದು ಬಣ ಅಥವಾ ಪರ-ವಿರೋಧ ಗುಂಪಿನಿಂದ ವರದಿ ಪಡೆದರೆ ಅದು ಸಂಪೂರ್ಣ ಸತ್ಯವಾಗಿರುತ್ತದೆ ಎಂಬ ಖಚಿತತೆ ಇರುವುದಿಲ್ಲ. ಸಮಸ್ಯೆ ಪರಿಹರಿಸಲು ಸರಿಯಾದ ನಿರ್ಧಾರ, ಕ್ರಮ ಕೈಗೊಳ್ಳಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಅಮಿತ್ ಷಾ ಸ್ಥಳೀಯ ಮುಖಂಡರನ್ನು ನೆಚ್ಚಿಕೊಳ್ಳದೆ ತಮ್ಮದೇ ತಂಡದಿಂದ ಮಾಹಿತಿ ಕಲೆಹಾಕಿದ್ದಾರೆ.

ಮೂವರು ಸದಸ್ಯರ ಟೀಮ್ ಅಮಿತ್ ಷಾ ಕಡೆಯ ಮೂವರ ತಂಡ ಈಶ್ವರಪ್ಪ ಸಭೆಗೆ ಆಗಮಿಸಿ ಸ್ಥಳದಿಂದಲೇ ನೇರ ವರದಿ ರವಾನಿಸಿದೆ. ಈ ತಂಡದ ಕಾರ್ಯಾಚರಣೆ ಬಗ್ಗೆ ರಾಜ್ಯದ ಯಾವ ಮುಖಂಡರಿಗೂ ಮಾಹಿತಿಯಿಲ್ಲ ಎಂಬುದು ಅಚ್ಚರಿಯ ಸಂಗತಿ. ಆದರೆ ತಂಡ ಭೇಟಿ ಕೊಟ್ಟಿರುವುದನ್ನು ಬಿಜೆಪಿಯ ಉನ್ನತ ಮೂಲಗಳು ಖಚಿತ ಪಡಿಸಿವೆ. ಷಾ ನಿಯೋಜಿಸಿದ್ದ ಮೂವರಲ್ಲಿ ಒಬ್ಬ ಕನ್ನಡಿಗ, ಇನ್ನಿಬ್ಬರಲ್ಲಿ ಒಬ್ಬರಿಗೆ ಕನ್ನಡ ಗೊತ್ತಿತ್ತು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಈಶ್ವರಪ್ಪ ಹಾಗೂ ಇತರರ ಭಾಷಣ, ಅಲ್ಲಿನ ಕರಪತ್ರಗಳು, ಸ್ಥಳೀಯ ಚಟುವಟಿಕೆ ಹೀಗೆ ಪ್ರತಿಯೊಂದು ಮಾಹಿತಿ ಸಮಾವೇಶದ ಸ್ಥಳದಿಂದಲೇ ಷಾಗೆ ತಲುಪಿವೆ. ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಅವರು ನವದೆಹಲಿಗೆ ವಾಪಸು ಬಂದ ನಂತರ ರಾಜ್ಯ ಸಮಿತಿ ನೀಡಿರುವ ವರದಿ ಹಾಗೂ ತಮ್ಮ ತಂಡದಿಂದ ಬಂದಿರುವ ಮಾಹಿತಿ ಇಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಪರಿಣಾಮವೇನು?: ಷಾ ಪಡೆದಿರುವ ವರದಿಯ ಪರಿಣಾಮ ಈಗಾಗಲೇ ಗೋಚರವಾಗುತ್ತಿದೆ. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವವರೆಗೆ ಕಾಯದೇ ತಕ್ಷಣವೇ ಅಮಿತ್ ಷಾ ಕೆಲಸ ಆರಂಭಿಸಿದ್ದಾರೆ. ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಬೆಂಗಳೂರಿಗೆ ಆಗಮಿಸಿದ್ದಾರೆ. ರಾವ್ ನಡೆಸುವ ಸಭೆಗಳ ಬಗ್ಗೆಯೂ ಷಾ ತಮ್ಮದೇ ಮೂಲಗಳಿಂದ ಮಾಹಿತಿ ಪಡೆಯಲಿದ್ದಾರೆ. ಆ ನಂತರವೇ ರಾಜ್ಯದಲ್ಲಿನ ಭಿನ್ನಮತಕ್ಕೆ ಮುಲಾಮು ಹಚ್ಚಲಿದ್ದಾರೆ.

ಇದೇ ಮೊದಲು

ಭಿನ್ನಮತೀಯರ ಸಭೆಗೆ ತಮ್ಮದೇ ಬೇಹುಗಾರರ ತಂಡವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕಳುಹಿಸಿದ ಉದಾಹರಣೆ ಇದೇ ಮೊದಲು ಎನ್ನಲಾಗಿದೆ. ಕಾಂಗ್ರೆಸ್​ನಲ್ಲಿ ಇಂತಹ ಘಟನೆಗಳು ನಡೆದರೆ ಎರಡೂ ಗುಂಪುಗಳಿಂದ ವರದಿ ಪಡೆಯಲಾಗುತ್ತದೆ. ಕೇಂದ್ರ ಗುಪ್ತಚರ ಇಲಾಖೆಯಿಂದಲೂ ಮಾಹಿತಿ ತರಿಸಿಕೊಳ್ಳಲಾಗುತ್ತದೆ. ಆದರೆ ತಮ್ಮದೇ ಬೇಹುಗಾರರನ್ನು ಕಳುಹಿಸಿದ ಉದಾಹರಣೆಗಳಿಲ್ಲ. ಬಿಜೆಪಿಯಲ್ಲಿಯೂ ಹಿಂದೆ ಈ ರೀತಿ ಆಗಿಲ್ಲ.

No Comments

Leave A Comment