Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ದೇವೇಗೌಡ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘224 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ’ ಎಂದರು.

‘ಕಾಂಗ್ರೆಸ್‌ ನಾಯಕ ಎಚ್. ವಿಶ್ವನಾಥ್ ಅವರ ಬಗ್ಗೆ ನನಗೆ ಗೌರವ ಇದೆ. ಬೇಷರತ್ತಾಗಿ ಯಾರೇ ಪಕ್ಷ ಸೇರಿದರೂ ಸ್ವಾಗತ. ವಿಶ್ವನಾಥ್ ಅವರ ಬಳಿ ಮಾತನಾಡಿದ್ದೇವೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಈಗಾಗಲೇ ಹೇಳಿದ್ದಾರೆ. ಅಲ್ಲದೆ, ವಿಶ್ವನಾಥ್ ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದೂ ಹೇಳಿದ್ದಾರೆ. ನಾನು ಅವರ ಪಕ್ಷವನ್ನು ಒಡೆಯಲು ಹೋಗುವುದಿಲ್ಲ. ಆದರೆ, ಕುಮಾರಸ್ವಾಮಿ ಅವರು ವಿಶ್ವನಾಥ್ ಜತೆ‌ ಸಂಪರ್ಕದಲ್ಲಿ ಇದ್ದಾರೆ’ ಎಂದು ದೇವೇಗೌಡ ಅವರು ತಿಳಿಸಿದರು.

ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಯಲ್ಲ: ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಗಳ ಪೈಕಿ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಯಲ್ಲ. ಈ ವದಂತಿ ಹೇಗೆ ಹಬ್ಬಿತೋ ತಿಳಿಯದು. ಈ ಬಗ್ಗೆ ನಡೆಯುತ್ತಿರುವುದು ಗಂಭೀರ ಚರ್ಚೆಯೋ ಅಥವಾ ಹಾರಿಕೆಯ ಸುದ್ದಿಯೋ ತಿಳಿಯದು. ಈ ವಿಚಾರವಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ರಾಜ್ಯದ ಹಿತ ಮುಖ್ಯ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದೇ ನನ್ನ ಗುರಿ’ ಎಂದು ಅವರು ಹೇಳಿದರು.

No Comments

Leave A Comment