Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಭೂಗತ ಪಾತಕಿ ಛೋಟಾ ರಾಜನ್‌ ಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ಕೋರ್ಟ್

ನವದೆಹಲಿ: ಮಂಡ್ಯದ ವಿಳಾಸ ನೀಡಿ ನಕಲಿ ಪಾಸ್‌ಪೋರ್ಟ್‌ ಪಡೆದಿದ್ದ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌(55) ಮತ್ತು ಬೆಂಗಳೂರಿನ ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳಿಗೆ 7 ವರ್ಷಗಳ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ.

ಛೋಟಾ ರಾಜನ್ ಹಾಗೂ ಮೂವರು ಮಾಜಿ ಅಧಿಕಾರಿಗಳನ್ನು ದೋಷಿ ಎಂದು ನವದೆಹಲಿಯ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿತ್ತು.

ಛೋಟಾ ರಾಜನ್‌ ಸದ್ಯ ತಿಹಾರ್‌ ಜೈಲಿನಲ್ಲಿದ್ದು, ಉಳಿದ ಆರೋಪಿಗಳಾದ ಜಯಶ್ರೀ ದತ್ತಾತ್ರೇಯ ರಾಹಟೆ, ದೀಪಕ್‌ ನಟವರ್ ಲಾಲ್‌ ಶಾ ಮತ್ತು ಲಲಿತಾ ಲಕ್ಷ್ಮಣನ್‌ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಸೋಮವಾರ ತೀರ್ಪು ಪ್ರಕಟವಾಗುತ್ತಿದ್ದಂತೆ, ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.

ಮಂಡ್ಯದ ವಿಳಾಸ ನೀಡಿದ್ದ: ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ ಮೂವರು ಅಧಿಕಾರಿಗಳ ನೆರವು ಪಡೆದು, ಪಾತಕಿ ರಾಜನ್‌ 1998-99ರಲ್ಲಿ ನಕಲಿ ಪಾಸ್‌ಪೋರ್ಟ್‌ ಪಡೆದುಕೊಂಡಿದ್ದ. “107/ಬಿ, ಹಳೇ ಎಂ.ಸಿ.ರಸ್ತೆ, ಆಜಾದ್‌ ನಗರ, ಮಂಡ್ಯ, ಕರ್ನಾಟಕ’ ಎಂಬ ವಿಳಾಸವನ್ನು ನೀಡಿ ಮೋಹನ್‌ ಕುಮಾರ್‌ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್‌ ಮಾಡಿಕೊಂಡಿದ್ದ.

ಆದರೆ, ಈ ಕುರಿತು ನಂತರ ಸಿಬಿಐ ತನಿಖೆ ನಡೆಸಿದಾಗ, ಆ ವಿಳಾಸದಲ್ಲಿ ಮೋಹನ್‌ ಕುಮಾರ್‌ ಎಂಬ ವ್ಯಕ್ತಿಯಾಗಲೀ, ಆ ವಿಳಾಸವಾಗಲೀ ಇಲ್ಲ ಎಂಬುದು ದೃಢವಾಗಿತ್ತು.
ಜತೆಗೆ, ಅಂಚೆ ನೌಕರರೂ ಎಂಸಿ ರೋಡ್‌ ಮತ್ತು ಆಜಾದ್‌ ನಗರದಲ್ಲಿ 107/ಬಿ ಸಂಖ್ಯೆಯ ಮನೆ ಅಸ್ತಿತ್ವದಲ್ಲೇ ಇಲ್ಲ ಎಂದಿದ್ದರು. ಇದಲ್ಲದೆ, ಪ್ರಯಾಣ ದಾಖಲೆ ಪಡೆಯಲು ರಾಜನ್‌ ನಕಲಿ ಮತದಾರರ ಗುರುತಿನ ಚೀಟಿ ಮತ್ತು ನಕಲಿ ಪಡಿತರ ಕಾರ್ಡ್‌ ಅನ್ನೂ ಮಾಡಿಸಿಕೊಂಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು.

No Comments

Leave A Comment