Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ದೇಗುಲ ಜೀರ್ಣೋದ್ಧಾರದಿಂದ ಪುಣ್ಯ ಪ್ರಾಪ್ತಿ: ಸಂಯಮೀಂದ್ರ ಶ್ರೀ

ಕಾಪು: ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಎಂಬ ದಾಸವಾಣಿಯಂತೆ ಕಾಪು ಕೊಂಕಣಿ ಮಠ ಶ್ರೀ ವೆಂಕಟರಮಣ ದೇವಸ್ಥಾನ ಸಮಗ್ರವಾಗಿ ಜೀರ್ಣೋದ್ಧಾರ ಗೊಂಡು ಶೋಭಿಸುತ್ತಿರುವುದು, ದೇಗುಲದಲ್ಲಿ ಶ್ರೀ ಹಯಗ್ರೀವ ಸಹಿತ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಹಾಗೂ ಶ್ರೀ ಮುಖ್ಯಪ್ರಾಣ ದೇವರ ಪುನರ್‌ ಪ್ರತಿಷ್ಠೆ ಸಾಂಗವಾಗಿ ನೇರವೇರಿರುವುದು ಮತ್ತು ಈ ಪುಣ್ಯ ಪರ್ವಕಾಲದಲ್ಲಿ ನಾವೆಲ್ಲರೂ ಸಾಕ್ಷಿಗಳಾಗಿರುವುದು ನಮ್ಮ ಮತ್ತು ಹಿರಿಯರ ಪೂರ್ವ ಜನ್ಮದ ಪುಣ್ಯದ ಫಲ ಎಂದು ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಸಮಗ್ರವಾಗಿ ಪುನರ್‌ ನಿರ್ಮಾಣ ಗೊಂಡಿರುವ ಕಾಪು ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಆಲಯ ಸಮರ್ಪಣೆ ಮತ್ತು ಪುನರ್‌ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಎ. 21ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಭಗವದನುಗ್ರಹ ಪ್ರಾಪ್ತಿ ಹಯಗ್ರೀವ ದೇವರು ಜ್ಞಾನದ ಪ್ರತೀಕವಾಗಿದ್ದು, ಹಯಗ್ರೀವ ಸಹಿತ ವೆಂಕಟರಮಣ ಮತ್ತು ಮುಖ್ಯಪ್ರಾಣ ದೇವರನ್ನು ಪುನರ್‌ ಪ್ರತಿಷ್ಠೆ ಮಾಡುವ ಮೂಲಕ ಜ್ಞಾನ, ಭಕ್ತಿ ಮತ್ತು ಶಕ್ತಿಯನ್ನು ಪುನಶ್ಚೇತನಗೊಳಿಸಿದಂತಾಗಿದೆ. ಏಕಮತದ ಸೇವೆ ಫಲವಾಗಿ ಕಾಪು ಕೊಂಕಣಿ ಮಠ ಶ್ರೀ ವೆಂಕಟರಮಣ ದೇವಸ್ಥಾನ 80 ವರ್ಷಗಳ ಬಳಿಕ ಪುನರ್‌ ನಿರ್ಮಾಣಗೊಂಡಿದ್ದು, ಇದೇ ರೀತಿಯ ಏಕಮತ ಮುಂದೆಯೂ ಚಿರಂತನವಾಗಿರಲಿ ಎಂದರು.

ಪ್ರಧಾನ ಅರ್ಚಕ ವೇ|ಮೂ| ಕಮಲಾಕ್ಷ ಭಟ್‌ ನೇತೃತ್ವದಲ್ಲಿ ಪುನರ್‌ ಪ್ರತಿಷ್ಠಾ ಮಹೋತ್ಸ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ
ಗೊಂಡವು. ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಗೋಕುಲದಾಸ್‌ ಆನಂದ್ರಾಯ ಶೆಣೈ, ಆಡಳಿತ ಮೊಕ್ತೇಸರ ಕೆ. ಶ್ರೀಧರ್‌ ಆನಂದ್ರಾಯ ಶೆಣೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಹರಿ ಭಟ್‌ ಕಾಪು, ಕಾಪು ಸದಾನಂದ ನಾಯಕ್‌ ಮಂಗಳೂರು, ಕಾಪು ಮೋಹನ್‌ದಾಸ್‌ ಭಟ್‌ ಮುಂಬಯಿ, ಕಾಪು ರಾಧಾಕೃಷ್ಣ ಕಾಮತ್‌, ಕಾರ್ಯದರ್ಶಿ ಸದಾಶಿವ ರಾಧಾಕೃಷ್ಣ ಕಾಮತ್‌, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಪುರುಷೋತ್ತಮ್‌ ನಾಯಕ್‌, ಟ್ರಸ್ಟಿಗಳಾದ ಶ್ರೀಪತಿ ಪ್ರಭು, ಸಂಜಯ ಭಟ್‌, ರಾಮ ನಾಯಕ್‌, ರಘುವೀರ್‌ ಭಟ್‌, ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಕಾಪು ಪೇಟೆಯ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಸಮ್ಮಾನ-ಗೌರವಾರ್ಪಣೆ 
ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕರಿಸಿದ ಎಂಜಿನಿಯರ್‌ ವೆಂಕಟೇಶ್‌ ಪೈ, ವಾಸ್ತು ಶಿಲ್ಪಿ ಪ್ರಸಾದ್‌ ಮುನಿ ಯಂಗಳ, ಶಿಲಾ ಶಿಲ್ಪಿಗಳಾದ ಎನ್‌. ನಾರಾಯಣ್‌ ಮತ್ತು ಅಶೋಕ್‌ ಕಾರ್ಕಳ, ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ ಮತ್ತು ಹರೀಶ್‌ ಆಚಾರ್ಯ ಕಲ್ಲಮುಂಡ್ಕೂರು, ಜೀರ್ಣೋದ್ಧಾರ ಕಾರ್ಯಗಳ ಉಸ್ತುವಾರಿ ಕಾಪು ಪ್ರಸಾದ್‌ ಶೆಣೈ ಅವರನ್ನು ಸಮ್ಮಾನಿಸಲಾಯಿತು.

ಜನಪ್ರತಿನಿಧಿಗಳು, ಗಣ್ಯರ ಭೇಟಿ 
ಕಾಪು ಶಾಸಕ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಗಣ್ಯರಾದ ಕೆ.ಪಿ. ಆಚಾರ್ಯ, ಸುರೇಶ್‌ ಶೆಟ್ಟಿ ಗುರ್ಮೆ, ಶೀಲಾ ಕೆ. ಶೆಟ್ಟಿ, ಮೋಹನ್‌ ಬಂಗೇರ, ಶೇಖರ್‌ ಆಚಾರ್ಯ, ಶ್ರೀಕರ ಶೆಟ್ಟಿ ಕಲ್ಯ, ಕೆ. ಸತ್ಯೇಂದ್ರ ಪೈ, ಗಂಗಾಧರ ಸುವರ್ಣ, ಅರುಣ್‌ ಶೆಟ್ಟಿ ಪಾದೂರು, ಸುರೇಶ್‌ ನಾಯಕ್‌ ಕುಯಿಲಾಡಿ, ದೀಪಕ್‌ ಕುಮಾರ್‌ ಎರ್ಮಾಳ್‌, ಮನೋಹರ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಅಯೋಧ್ಯಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರು, ವಿವಿಧ ಸಮಾಜಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 

ಮಂಜೇಶ್ವರ, ಮೂಲ್ಕಿ, ಕಟಪಾಡಿ, ಕಾರ್ಕಳ, ಪಡುಬಿದ್ರಿ, ಶಿರ್ವ, ಉಡುಪಿ ಸೇರಿದಂತೆ ಹದಿನೆಂಟು ಪೇಟೆಯ ವಿವಿಧ ದೇವಸ್ಥಾನಗಳ ಪ್ರತಿನಿಧಿಗಳು ಪುನರ್‌ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

No Comments

Leave A Comment