Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಪನಾಮ ಪ್ರಕರಣ: ಷರೀಫ್ ವಿರುದ್ಧ ಪಾಕ್ ಸುಪ್ರೀಂ ಪಂಚಪೀಠ ಭಿನ್ನ ತೀರ್ಪು

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹಾಗೂ ಕುಟುಂಬ ಭಾರೀ ಪ್ರಮಾಣದ ಭ್ರಷ್ಟಾಚಾರದಲ್ಲಿ ಶಾಮೀಲಾಗಿದೆ ಎಂದು ಮಾಹಿತಿ ಹೊರಹಾಕಿದ್ದ ಪನಾಮಾ ಪೇಪರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಗುರುವಾರ 3/2ರ ಬಹುಮತದಲ್ಲಿ ಷರೀಫ್ ವಿರುದ್ಧ ತನಿಖೆಗೆ ಜಂಟಿ ತನಿಖಾ ತಂಡವನ್ನು(ಜೆಐಟಿ) ರಚಿಸಿ ಆದೇಶ ನೀಡಿದೆ.

ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜೆಐಟಿ(ಜಂಟಿ ತನಿಖಾ ತಂಡ) 2 ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಷರೀಫ್ ಮಕ್ಕಳಾದ ಹಸನ್ ಹಾಗೂ ಹುಸೈನ್ ಕೂಡಾ ಜೆಐಟಿ ಎದುರು ಹಾಜರಾಗಬೇಕೆಂದು ಸೂಚನೆ ನೀಡಿದೆ.

ಷರೀಫ್ ಬಚಾವ್?
ಪನಾಮ ಪೇಪರ್ ಲೀಕ್ ಪ್ರಕರಣದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ದೋಷಿಯನ್ನಾಗಿ ಮಾಡಿ, ಪ್ರಧಾನಿ ಹುದ್ದೆ ತೊರೆಯುವಂತೆ ಮಾಡಬೇಕೆಂಬ ಬಗ್ಗೆ ಸಮರ್ಪಕವಾದ ಸಾಕ್ಷ್ಯಾಧಾರ ಇಲ್ಲ ಎಂದು ಹೇಳುವ ಮೂಲಕ ಪಂಚಪೀಠ ನ್ಯಾಯಾಧೀಶರ ತೀರ್ಪು ಭಿನ್ನವಾಗಿ ಹೊರಬಿದ್ದಿದೆ.

ಜಸ್ಟೀಸ್ ಸಯೀದ್ ಖೋಸಾ, ಜಸ್ಟೀಸ್ ಗುಲ್ಜಾರ್ ಅಹ್ಮದ್, ಜಸ್ಟೀಸ್ ಎಜಾಜ್ ಅಫ್ಜಲ್ ಖಾನ್, ಜಸ್ಟೀಸ್ ಅಝಮತ್ ಸಯೀದ್ ಹಾಗೂ ಜಸ್ಟೀಸ್ ಇಜಾಝುಲ್ ಅಶಾನ್ ಅವರನ್ನೊಳಗೊಂಡ ಪಂಚ ನ್ಯಾಯಾಧೀಶರ ಪೀಠ ವಾದ, ಪ್ರತಿವಾದ ಪೂರ್ಣಗೊಂಡ ಬಳಿಕ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ನ್ಯಾಯಾಧೀಶರಲ್ಲಿ 3/2ರ ಬಹುಮತದ ಭಿನ್ನ  ತೀರ್ಪು( ಇದು 540 ಪುಟಗಳ ತೀರ್ಪು ನೀಡಿದ್ದರು. ಐವರಲ್ಲಿ ಜಸ್ಟೀಸ್ ಖೋಸಾ ಮತ್ತು ಜಸ್ಟೀಸ್ ಗುಲ್ಜಾರ್ ಅವರು ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಬೇಕೆಂದು ತೀರ್ಪು ನೀಡಿದ್ದರು. ಆದರೆ ಉಳಿದ ಮೂವರು ನ್ಯಾಯಾಧೀಶರು ಪ್ರಧಾನಿ ವಿರುದ್ಧ ತನಿಖೆಗೆ ಆದೇಶಿಸಿ ತೀರ್ಪು ನೀಡಿದ್ದಾರೆ.

ಷರೀಫ್ ಹಾಗೂ ಕುಟುಂಬ ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರದಂತೆ ಲಂಡನ್ ನಲ್ಲಿ ಕಾನೂನು ಬಾಹಿರವಾಗಿ ಆಸ್ತಿಯನ್ನು ಹೊಂದಿರುವುದಾಗಿ ಆರೋಪಿಸಿ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ಏನಿದು ಪನಾಮ ಪೇಪರ್ ಕೇಸ್?
“ಪನಾಮ ಪೇಪರ್’ ಎಂಬುದು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದರಿಂದ ಬಿಡುಗಡೆಗೊಂಡ ದಾಖಲೆಗಳು. ಕೆಲವು ಮೂಲಗಳಿಂದ ತಮಗೆ ಈ ಅಮೂಲ್ಯ ದಾಖಲೆಗಳು ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್‌ ಫೋನ್ಸೆಕಾದಿಂದ ಗುಪ್ತವಾಗಿ ಲಭ್ಯವಾಗಿತ್ತು.

ದಾಖಲೆಗಳಲ್ಲಿ ಏನಿತ್ತು?
ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಬಿಲಿಯನೇರ್‌ಗಳು, ಸೆಲೆಬ್ರಿಟಿಗಳು ಇತ್ಯಾದಿ ರಹಸ್ಯವಾಗಿ ವಿವಿಧೆಡೆ ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ಇದರಲ್ಲಿ ಮಾಹಿತಿ ಇದೆ. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.

ತೆರಿಗೆ ಕಳ್ಳರ ಸ್ವರ್ಗ ಪನಾಮ
ಪನಾಮ ಉತ್ತರ ಮತ್ತು ದಕ್ಷಿಣ ಅಮೆರಿಕದ ನಡುವೆ ಇರುವ ಒಂದು ಪುಟ್ಟ ದೇಶ. ಅಂತಾರಾಷ್ಟ್ರೀಯ ವ್ಯವಹಾರ, ಹಡಗು ಮಾರ್ಗಕ್ಕೆ ಹೆಸರಾದ ದೇಶ. ಸ್ವಿಜರ್ಲೆಂಡ್‌ ರೀತಿ ಪನಾಮ ಕೂಡ ತೆರಿಗೆ ಕಳ್ಳರ ಸ್ವರ್ಗ. ವಿವಿಧ ದೇಶಗಳ ಕಂಪನಿಗಳು, ಉದ್ಯಮಿಗಳು, ಸೆಲೆಬ್ರೆಟಿಗಳು ಇಲ್ಲಿನ ಬ್ಯಾಂಕ್‌ಗಳಲ್ಲಿ ತೆರಿಗೆ ವಂಚಿಸಿ ಹಣ ಕೂಡಿಟ್ಟ ಉದಾಹರಣೆಗಳಿವೆ. ವಿಶೇಷವಾಗಿ ಅಮೆರಿಕದ ಕಂಪನಿಗಳು, ಉದ್ಯಮಿಗಳು ಪನಾಮದ ಬ್ಯಾಂಕ್‌ ಗಳಲ್ಲಿ ಹಣ ಕೂಡಿಟ್ಟಿದ್ದಾರೆ ಎನ್ನಲಾಗಿದೆ. ಇದರ ಮೊತ್ತ ಶತಕೋಟಿ ಮೌಲ್ಯಕ್ಕೂ ಮೀರಿದೆ. 3 ಲಕ್ಷಕ್ಕೂ ಮೀರಿ ನಕಲಿ ಕಂಪನಿಗಳನ್ನೂ ಇಲ್ಲಿ ಸೃಷ್ಟಿಸಿ ವ್ಯವಹಾರ ನಡೆಸಿದ್ದಾಗಿ ಹೇಳಲಾಗಿತ್ತು.
Read more at http://www.udayavani.com/kannada/news/world-news/208691/panamagate-pak-sc-orders-jit-to-probe-corruption-charges-against-pm-nawaz-sharif#Kwv35tFELbHO5y13.99

No Comments

Leave A Comment