Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಪೊಲೀಸ್‌ ಪತ್ನಿಗೆ ಚುಡಾವಣೆ;ಲೋಕಾಯುಕ್ತ, ರಾಜ್ಯಪಾಲರಿಗೆ ದೂರು

ಉಡುಪಿ: ಪೊಲೀಸ್‌ ಕಾನ್ಸ್‌ಟೆಬಲ್‌ ಪತ್ನಿಗೆ ಚುಡಾಯಿಸಿದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಪೊಲೀಸ್‌ ಕಾನ್ಸ್‌ಟೆಬಲ್‌ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದು, ಇನ್ನು ಮೂರ್‍ನಾಲ್ಕು ದಿನದೊಳಗೆ ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹಾಗೂ ರಾಜ್ಯಪಾಲ ವಜೂಭಾç ವಾಲಾ ಅವರನ್ನು ಭೇಟಿ ಮಾಡಿ ದೂರು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್‌ ಅವರು ತಿಳಿಸಿದ್ದಾರೆ.

ಮಲ್ಪೆ ಠಾಣೆಯ ಪೊಲೀಸ್‌ ಪೇದೆ ಮೂಲತಃ ಬೆಳಗಾವಿಯವರಾದ ಪ್ರಕಾಶ್‌ ಎಂ. ಸಪ್ತಸಾಗರೆ ಅವರ ಪತ್ನಿ ಜ್ಯೋತಿ ಅವರನ್ನು ಚುಡಾಯಿಸಿದ್ದಕ್ಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಕಂಪೆನಿಯ ಉದ್ಯೋಗಿ ಕುಮಾರ್‌ (34) ಎನ್ನುವವರ ಮೇಲೆ ಮಲ್ಪೆ ಪೊಲೀಸರು ನಡೆಸಿರುವ ಹಲ್ಲೆಗೆ ಸಂಬಂಧಿಸಿ ನಡೆದ ಬೆಳವಣಿಗೆಯಲ್ಲಿ ಕಾನ್ಸ್‌ಟೆಬಲ್‌ ಪ್ರಕಾಶ್‌ ಅವರನ್ನು ಎಸ್‌ಪಿಯವರು ಸಸ್ಪೆಂಡ್‌ ಮಾಡಿದ್ದಾರೆ. ಇದರಿಂದ ಮನನೊಂದ ಪ್ರಕಾಶ್‌ ಎ. 5ರಿಂದ ನಡೆದ ಬೆಳವಣಿಗೆಗಳನ್ನು ರಾಜ್ಯದಲ್ಲಿ ಪೊಲೀಸರ ಪರ ಹೋರಾಟ ನಡೆಸುತ್ತಿರುವ ವಿ. ಶಶಿಧರ್‌ ಅವರ ಗಮನಕ್ಕೆ ತಂದು ಅಸಹಾಯಕತೆಯನ್ನು ತೋಡಿಕೊಂಡಿದ್ದರು.

ಈ ಬಗ್ಗೆ ಮಾತನಾಡಿದ ಶಶಿಧರ್‌ ಅವರು, ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಪೊಲೀಸರ ಸಮಸ್ಯೆಗಳನ್ನು ಪರಿಹರಿಸುವಂತೆ ಹೋರಾಟ ನಡೆಸಿದ್ದಕ್ಕಾಗಿ ದೇಶದ್ರೋಹದ ಕೇಸು ದಾಖಲಿಸಿರುವುದರ ಪರಿಣಾಮ ಬೆಂಗಳೂರು ಬಿಟ್ಟು ಹೊರಗೆ ಹೋಗದಂತೆ ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿರುವ ಕಾರಣ ಬೆಂಗಳೂರಿನಿಂದಲೇ ಪ್ರತಿಕ್ರಿಯಿಸುತ್ತಿದ್ದೇನೆ. ಇಲ್ಲವಾದರೆ ಉಡುಪಿಗೆ ಬಂದು ಅಲ್ಲಿಯೇ ಮಾತನಾಡುತ್ತಿದ್ದೆ ಎಂದಿದ್ದಾರೆ.

ಮಲ್ಪೆ ಠಾಣೆಯಲ್ಲಿ ದೂರು ದಾಖಲು
ಆಸ್ಪತ್ರೆಯಲ್ಲಿ ದಾಖಲಾಗಿರುವ ಮಲ್ಪೆ ಫಿಶ್‌ನೆಟ್‌ ಫ್ಯಾಕ್ಟರಿಯ ಉದ್ಯೋಗಿ ಮೂಲತಃ ಬೆಳಗಾವಿಯ ಕುಮಾರ ಅವರು ಕಾನ್ಸ್‌ಟೆಬಲ್‌ ವಿರುದ್ಧ ಮಲ್ಪೆ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಎ. 5ರ ಸಂಜೆ 6 ಗಂಟೆಗೆ ಮಲ್ಪೆ ಬಸ್‌ ನಿಲ್ದಾಣದ ಬಳಿಯ ಎಚ್‌ಡಿಎಫ್ಸಿ ಎಟಿಎಂ ಸಮೀಪ ನಿಂತುಕೊಂಡಿದ್ದೆ. ಬಳಿಕ ಸ್ನೇಹಿತ ಬಾಲಾಜಿಯೊಂದಿಗೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ಆರೋಪಿ ಪ್ರಕಾಶ್‌ ಅಡ್ಡಗಟ್ಟಿ “ನಾನು ಮಲ್ಪೆಯ ಪೊಲೀಸ್‌, ನನ್ನ ಹೆಂಡತಿಗೆ ಚುಡಾಯಿಸುತ್ತೀಯಾ’ ಎಂದು ಹೇಳಿ ಕೈ, ಹೊಟ್ಟೆಗೆ ಹೊಡೆದು ನೆಲಕ್ಕೆ ದೂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಲಂ. 341, 323 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಮಹಿಳಾ ಠಾಣೆಗೆ ದೂರು
ಪೊಲೀಸ್‌ ಪ್ರಕಾಶ್‌ ಅವರ ಪತ್ನಿ ಜ್ಯೋತಿ (21) ಅವರು ಎ. 5ರ ಸಂಜೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ತನಗೆ ಹೇಗೆ ಕಿರುಕುಳ ನೀಡಿದರು ಎನ್ನುವುದನ್ನು ಲಿಖೀತವಾಗಿ ವಿವರಿಸಿ ಉಡುಪಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬೈಕಿನಲ್ಲಿ ಬಂದು ಬೆನ್ನಿಗೆ ಹೊಡೆದಿರುವುದನ್ನೂ ಉಲ್ಲೇಖೀಸಲಾಗಿದೆ. ಅದರಂತೆ ಆರೋಪಿ ಕುಮಾರ್‌ ಮತ್ತು ಇನ್ನೋರ್ವನ ವಿರುದ್ಧ ಸೆಕ್ಷನ್‌ 354, 323 ಜತೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಾರಂಭಗೊಂಡಿದೆ.

ಎ. 5ರಂದು ನಡೆದಿತ್ತು ಘಟನೆ
ಮಲ್ಪೆಯಲ್ಲಿ ಎ. 5ರಂದು ಮೆಡಿಕಲ್‌ಗೆ ಹೋಗಲು ಎಟಿಎಂನಿಂದ ಹಣ ತೆಗೆಯುತ್ತಿದ್ದೆ. ಹೊರಗಡೆ ಪತ್ನಿ ಬೈಕಿನ ಹತ್ತಿರ ನಿಂತಿದ್ದಳು. ಈ ವೇಳೆ ಆಗಮಿಸಿದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಪತ್ನಿಗೆ ಕಣ್ಣು ಹೊಡೆದಿದ್ದ. ಬಳಿಕ ಹಿಂಬಾಲಿಸಿಕೊಂಡು ಬಂದು ಚುಡಾಯಿಸಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಠಾಣೆಗೆ ಕರೆದೊಯ್ಯಲಾಗಿತ್ತು. ಪತ್ನಿಯ ಮುಖಾಂತರ ದೂರು ಕೊಟ್ಟರೂ ಸ್ವೀಕರಿಸದೆ ಎಸ್‌ಐಯವರು ಪಿಟ್ಟಿ ಕೇಸು ಹಾಕಿ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದರು. ಎ. 6ರಂದು ಮಾತುಕತೆಗೆ ಸಚಿವ ಪ್ರಮೋದ್‌ ಮಧ್ವರಾಜರ ಪತ್ನಿಯಲ್ಲಿಗೆ ಎಸ್‌ಐಯವರು ಕರೆದುಕೊಂಡು ಹೋಗಿದ್ದರು. ಅಲ್ಲಿ ಸೇರಿದ್ದ 100-150 ಜನರು “ನಿನ್ನ ಹೆಂಡತಿಗೆ ಬುರ್ಖಾ ಹಾಕಿ ಕರೆದುಕೊಂಡು ಹೋಗು’ ಇತ್ಯಾದಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆತನಿಗೆ (ಪತ್ನಿಗೆ ಚುಡಾಯಿಸಿದಾತ) ಚಿಕಿತ್ಸೆ ಕೊಡಿಸಬೇಕೆಂದರು. ಅದರಂತೆ ಮಣಿಪಾಲಕ್ಕೆ ಹೋಗೋಣವೆಂದರೂ ಹೈಟೆಕ್‌ ಆಸ್ಪತ್ರೆಗೇ ದಾಖಲು ಮಾಡಬೇಕು ಎಂದು ಹೇಳಿ ಎ. 6ರಂದು ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದೆ. ಚುನಾವಣಾ ಪ್ರಚಾರದಲ್ಲಿದ್ದ ಸಚಿವರು ಉಡುಪಿಗೆ ಬಂದ ಮೇಲಿನ ಬೆಳವಣಿಗೆಯಲ್ಲಿ ಬದಲಾವಣೆಯಾಗಿ ಎಸ್‌ಪಿಯವರು ಅಮಾನತು ಆದೇಶ ಹೊರಡಿಸಿದ್ದಾರೆ ಎನ್ನುವುದು ಪ್ರಕಾಶ್‌ ಅವರ ಆರೋಪವಾಗಿತ್ತು.

ಪತ್ನಿಯ ರಕ್ಷಣೆ ಮಾಡೋಕಾಗಲ್ವೇ?
“ಸಾರ್ವಜನಿಕ ಸ್ಥಳದಲ್ಲಿ ನನ್ನ ಪತ್ನಿಯ ರಕ್ಷಣೆ ಮಾಡೋಕಾಗಲ್ಲ ಅಂದರೆ ಸಾರ್ವಜನಿಕರನ್ನು ನಾನು ಹೇಗೆ ರಕ್ಷಣೆ ಮಾಡೋದು ಸಾರ್‌…’ ಎಂದು ಕಾನ್ಸ್‌ಟೆಬಲ್‌ ಪ್ರಕಾಶ್‌ ಅವರು ಹೋರಾಟಗಾರ ಶಶಿಧರ್‌ ಅವರೊಂದಿಗೆ ಅಲವತ್ತು
ಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದೆ.

ಕುಮಾರ್‌ ಉತ್ತಮ ಗುಣನಡತೆಯ ವ್ಯಕ್ತಿ: ಪ್ರಮೋದ್‌
ಪ್ರಕರಣದ ಕುರಿತು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕುಮಾರ್‌ ನಮ್ಮ ಕಂಪೆನಿಯಲ್ಲಿ 15 ವರ್ಷದಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಉತ್ತಮ ಗುಣನಡತೆಯ ವ್ಯಕ್ತಿ. ಆತನ ಬಗ್ಗೆ ಯಾರು ಕೂಡ ಪೂರ್ವಾಪರ ತಿಳಿದುಕೊಳ್ಳಬಹುದು. ಪತ್ನಿಯನ್ನು ನೋಡಿದ ಎನ್ನುವ ಕಾರಣಕ್ಕೆ ಆತನ ಮೂಳೆ ಮುರಿಯುವಷ್ಟು ಹೊಡೆಯಲು  ಕಾನ್ಸ್‌ಟೆಬಲ್‌ಗೆ ಅಧಿಕಾರ ಕೊಟ್ಟವರಾರು? ಆಸ್ಪತ್ರೆಯಿಂದ ಠಾಣೆಗೆ “ಮೆಡಿಕೊ ಲೀಗಲ್‌ ಕೇಸ್‌’ (ಎಂಎಲ್‌ಸಿ) ಬಂದ ಪ್ರಕಾರ ಕಾನ್ಸ್‌ಟೆಬಲ್‌ ಮೇಲೆ ಕೇಸು ದಾಖಲಾಗಿದೆ. ಕೇಸು ಆದ ಮೇಲೆ ಸಸ್ಪೆಂಡ್‌ ಮಾಡುವುದು ಇಲಾಖಾ ಪ್ರಕ್ರಿಯೆಯಾಗಿರುತ್ತದೆ ಎಂದರು.

“ಬಚಾವಾಗಲು ಕೌಂಟರ್‌ ಕೇಸು’
ತನ್ನ ಕಡೆಯಿಂದ ತಪ್ಪಾಗಿದೆ ಎಂದು ಗೊತ್ತಾದ ಮೇಲೆ ಕಾನ್ಸ್‌ಟೆಬಲ್‌ ಕೇಸು ಮಾಡದಂತೆ ನನ್ನ ವ್ಯವಹಾರ ನೋಡಿಕೊಳ್ಳುತ್ತಿರುವ ಪತ್ನಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದ. ಆಸ್ಪತ್ರೆಯ ವರದಿಯಂತೆ ಕೇಸು ದಾಖಲಾಗಿದೆ. ಆಮೇಲೆ ಆತನ ಪತ್ನಿಯ ಮುಖಾಂತರ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಕುಮಾರ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಸ್ವಾಭಾವಿಕವಾಗಿ ಕೇಸಿನಿಂದ ಬಚಾವಾಗಲು ಕೌಂಟರ್‌ ಕೇಸು ಮಾಡುವುದು ವ್ಯವಸ್ಥೆಯ ಭಾಗವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಚಿವರೇಕೆ ಮೂಗು ತೂರಿಸಬೇಕು?
ಸಚಿವರೊಬ್ಬರು ಪತ್ನಿಯ ಮುಖೇನ ಪೊಲೀಸನ್ನು ಕರೆಯಿಸಿ ಬೈಯುತ್ತಾರೆ ಎಂದಾದರೆ ಅವರ ದೊಡ್ಡಸ್ಥಿಕೆಯನ್ನು ಪ್ರಶ್ನಿಸಲೇಬೇಕು. ಅವರು ದೊರೆಯಲ್ಲ, ಜನರ ಸೇವಕರು. ಪ್ರಕರಣದಲ್ಲಿ ಮೂಗು ತೂರಿಸಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ವಿ. ಶಶಿಧರ್‌ ಹೇಳಿದ್ದಾರೆ.

ಪಿಎಸ್‌ಐಯಿಂದ ಅಮಾನತು ನಿವೇದನೆ 
ಪಿಸಿ ಪ್ರಕಾಶ್‌ ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತಿಸಿದ್ದರು. ಬೈಕ್‌ ಸವಾರರೊಂದಿಗೆ ಏರುಧ್ವನಿಯಲ್ಲಿ ಮಾತನಾಡಿ ಕೈಯಿಂದ ಹಲ್ಲೆಗೆ ಮುಂದಾಗಿ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ಉಂಟು ಮಾಡಿದ್ದಾರೆ. ಶಿಸ್ತಿನ ಇಲಾಖೆಯ ಬಗ್ಗೆ ಕೆಟ್ಟ ಹೆಸರು ತರುವ ರೀತಿಯಲ್ಲಿ ವರ್ತಿಸಿರುವ ಅವರ ಮೇಲೆ ಶಿಸ್ತು ಕ್ರಮ ಜರಗಿಸಬೇಕು ಎಂದು ಮಲ್ಪೆ ಠಾಣಾ ಎಸ್‌ಐ ದಾಮೋದರ್‌ ಕೆ. ಅವರು ಮೇಲಧಿಕಾರಿಗಳಿಗೆ ನಿವೇದನೆ ಸಲ್ಲಿಸಿದ ಕಾರಣ ಮೇಲಧಿಕಾರಿಯವರು ಅಮಾನತು ಆದೇಶ ಹೊರಡಿಸಿದ್ದಾರೆ.

No Comments

Leave A Comment