Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಹಿಂದೂ ಹುಡುಗಿಯನ್ನು ಪ್ರೀತಿಸಿದ್ದಕ್ಕೇ ಮುಸ್ಲಿಂ ಯುವಕನ ಕೊಲೆ!

ರಾಂಚಿ: ಹಿಂದೂ ಹುಡುಗಿಯನ್ನು ಪ್ರೀತಿಸಿದ ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಹುಡುಗನನ್ನು ಗ್ರಾಮಸ್ಥರು ಹೊಡೆದು ಕೊಂದಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.ಜಾರ್ಖಂಡ್ ನ ಗುಮ್ಲಾ ಜಿಲ್ಲೆಯ ಸೊಸೊ ಎಂಬ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಮೊಹಮದ್ ಷಾಲಿಕ್ ಎಂಬ 19ರ ಹರೆಯದ ಯುವಕನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಥಳಿಸಿ ಕೊಂದು ಹಾಕಿದ್ದಾರೆ. ಪ್ರಕರಣ ಸಂಬಂಧ  ಇದೀಗ ಗುಮ್ಲಾ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ಓರ್ವ ಶಂಕಿತ ಆರೋಪಿಯನ್ನು ಕೂಡ  ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?

ಸೋಸೋ ಗ್ರಾಮದ 15 ವರ್ಷದ ಯುವತಿ ಹಾಗೂ 19 ವರ್ಷದ ರಾಜಾ ಕಾಲೊನಿ ನಿವಾಸಿಯಾದ ಮಹಮದ್ ಷಾಲಿಕ್ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಷಾಲಿಕ್  ಸಾಕಷ್ಟು ಬಾರಿ ಯುವತಿಯನ್ನು ತನ್ನ ಬೈಕ್ ನಲ್ಲಿ  ಮನೆಯ ಬಳಿ ಬಿಟ್ಟು ಹೋಗಿದ್ದ. ಒಂದೆರಡು ಬಾರಿ ಗಮನಿಸಿದ್ದ ಯುವತಿ ಮನೆಯವರು ಒಮ್ಮೆ ಮಹಮದ್ ಶಾಲಿಕ್ ನನ್ನು ಕರೆದು ಎಚ್ಚರಿಕೆ ಕೂಡ ನೀಡಿದ್ದರು. ಇದಕ್ಕೆ ಬಗ್ಗದೇ ಮಹಮದ್ ಶಾಲಿಕ್ ಹಾಗೂ ಯುವತಿ ತಮ್ಮ ಪ್ರೇಮ  ಸಂಬಂಧವನ್ನು ಮುಂದುವರೆಸಿದ್ದರು.

ಈಗ್ಗೇ ಕಳೆದ ರಾಮನವಮಿಯಂದು ಕೂಡ ಈ ಜೋಡಿ ಭೇಟಿಯಾಗಿತ್ತು. ಅಂದು ತನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಯುವತಿ ಕೇಳಿದ್ದಳು. ಆದರೆ ಅರೆ ಮನಸ್ಸಿನಿಂದಲೇ ಯುವತಿಯನ್ನು ಸೋಸೋ ಗ್ರಾಮಕ್ಕೆ ಡ್ರಾಪ್ ಮಾಡಿದ್ದ  ಮಹಮದ್ ಷಾಲಿಕ್ ಮನೆಗೆ ವಾಪಸಾಗುತ್ತಿದ್ದಾಗ ಸ್ಥಳೀಯರು ಇದನ್ನು ಗಮನಿಸಿ ಆತನನ್ನು ಕಡೆ ಹಿಡಿದಿದ್ದರು. ಬಳಿಕ ಗ್ರಾಮದ ಮುಖ್ಯಸ್ಥರೆಲ್ಲಾ ಸೇರಿ ಆತನ್ನನು ಕಂಬಕ್ಕೆ ಕಟ್ಟಿಹಾಕಿದರು. ಬಳಿಕ ಯುವತಿಯ ಮುಂದೆಯೇ ಷಾಲಿಕ್  ನನ್ನು ಮನಸೋ ಇಚ್ಛೆ ಥಳಿಸಿದ್ದಾರೆ.

ಅತ್ತ ಷಾಲಿಕ್ ಕುಟುಂಬಸ್ಥರು ಆತ ಮನೆಗೆ ಬಾರದೇ ಇದ್ದದ್ದರಿಂದ ಗಾಬರಿಯಾಗಿದ್ದರು. ಏತನ್ಮಧ್ಯೆ ಕೆಲ ಯುವಕರು ಷಾಲಿಕ್ ಮನೆಗೆ ಬಂದು ಆತನನ್ನು ಸೋಸೋ ಗ್ರಾಮದಲ್ಲಿ ಕಟ್ಟಿಹಾಕಿರುವ ವಿಚಾರವನ್ನು ತಿಳಿಸಿದ್ದಾರೆ. ಕೂಡಲೇ  ಘಟನಾ ಸ್ಥಳಕ್ಕೆ ತೆರಳಿದ ಪೋಷಕರು ಮರಕ್ಕೆ ಕಟ್ಟಿಹಾಕಿದ್ದ ಷಾಲಿಕ್ ನನ್ನು ಬಿಡಿಸಿದ್ದಾರೆ. ಅಲ್ಲದೆ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ  ರಾಂಚಿಯಲ್ಲಿರುವ ಆರ್‍ಐಎಂಎಸ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರೆ. ಅದರಂತೆ ಷಾಲಿಕ್ ನನ್ನು ರಾಂಚಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆತ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಗುಮ್ಲಾ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಿರುವ ಪೊಲೀಸರು ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.  ಅಂತೆಯೇ ಪ್ರಕರಣ ಸಂಬಂಧ ಯುವತಿಯ ಓರ್ವ ಸಂಬಂಧಿಕ ಸೇರಿದಂತೆ ಒಟ್ಟು ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು 15ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್ ಐಆರ್ ದಾಖಲು ಮಾಡಿಕೊಂಡಿದ್ದಾರೆ.

No Comments

Leave A Comment