ನಾಳೆಯಿಂದ ಬೆಂಗಳೂರು-ಮಂಗಳೂರು ಹೊಸ ಹಗಲು ರೈಲು ಸಂಚಾರ ಆರಂಭ
ಬೆಂಗಳೂರು: ಮಂಗಳೂರು ಮತ್ತು ಯಶವಂತಪುರ ಮಧ್ಯೆ ವಾರಕ್ಕೆ ಮೂರು ಬಾರಿ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ನಾಳೆಯಿಂದ ಕಾರ್ಯಾಚರಣೆ ಆರಂಭಿಸಲಿದೆ. ಮಡಗಾಂವ್ ನಿಂದ ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ನಾಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ವಿಶೇಷ ರೈಲು ಮಂಗಳೂರು ಜಂಕ್ಷನ್ ನಿಂದ ನಾಳೆ ಬೆಳಗ್ಗೆ 11.30ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16575/16576 ಯಶವಂತಪುರದಿಂದ ಭಾನುವಾರ, ಮಂಗಳವಾರ ಮತ್ತು ಗುರುವಾರಗಳಂದು ಬೆಳಗ್ಗೆ 7.50ಕ್ಕೆ ಹೊರಟು ಮಂಗಳೂರಿಗೆ ಸಂಜೆ 5.30ಕ್ಕೆ ತಲುಪಲಿದೆ. ಮಂಗಳೂರಿನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 11.30ಕ್ಕೆ ಹೊರಟು ಯಶವಂತಪುರಕ್ಕೆ ರಾತ್ರಿ 8.30ಕ್ಕೆ ತಲುಪಲಿದೆ.
ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ.ನಗರ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳಗಳಲ್ಲಿ ನಿಲುಗಡೆಯಾಗುತ್ತದೆ.
ರೈಲಿನಲ್ಲಿ ಏಳು ಸಾಮಾನ್ಯ ಚೈರ್ ಕಾರ್ಸ್, 5 ಸಾಮಾನ್ಯ ಮತ್ತು ದ್ವಿತೀಯ ದರ್ಜೆ ಬೋಗಿಗಳು, ಎರಡು ದ್ವಿತೀಯ ದರ್ಜೆ ಮತ್ತು ಲಗ್ಗೇಜು ಹಾಗೂ ವಿಶೇಷ ಚೇತನರಿಗೆ ಅನುಕೂಲವಾಗುವ ಬ್ರೇಕ್ ವ್ಯಾನ್ ಕಂಪಾರ್ಟ್ ಮೆಂಟ್ ಗಳನ್ನು ಒಳಗೊಂಡಿರುತ್ತದೆ.