Log In
BREAKING NEWS >
ದೀಪ ಪ್ರಜ್ವಲಿಸುವುದರೊ೦ದಿಗೆ ಕಲ್ಯಾಣಪುರ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರಿ೦ದ ಅದ್ದೂರಿಯ ಚಾಲನೆ........ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಕೆಮಿಕಲ್ ಬಾಂಬ್ ದಾಳಿಗೆ ಪ್ರತೀಕಾರ; ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ!

ಡಮಾಸ್ಕಸ್: ಸಿರಿಯಾದ ಬಂಡುಕೋರರ ನೆಲೆಗಳ ಮೇಲೆ ಇತ್ತೀಚೆಗೆ ನಡೆದಿದ್ದ ವಿಷಾನಿಲ ಬಾಂಬ್ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಸೇನೆ ಸಿರಿಯಾ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ.

ಬಂಡುಕೋರರು ಹೆಚ್ಚಾಗಿರುವ ಸಿರಿಯಾದ ವಿವಿಧೆಡೆ ವಿಷಾನಿಲ ಬಾಂಬ್ ದಾಳಿ ನಡೆಸಲಾಗಿತ್ತು. ಪರಿಣಾಮ ಸುಮಾರು 100ಕ್ಕೂ ಹೆಚ್ಚು ನಾಗರಿಕರು ಹತರಾಗಿದ್ದರು. ಘಟನೆಗೆ ಯಾವುದೇ ಉಗ್ರಸಂಘಟನೆಯೂ ಹೊಣೆಹೊತ್ತಿರಲಿಲ್ಲ. ಅಂತಿಮವಾಗಿ ಈ ದಾಳಿಯನ್ನು ಸಿರಿಯಾ ಸೇನೆ ನಡೆಸಿರಬಹುದು ಎಂದು ಶಂಕಿಸಲಾಗಿತ್ತು. ಸಿರಿಯಾ ಸರ್ಕಾರಕ್ಕೆ ಸೇರಿದ ವಿಮಾನಗಳು ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸಿವೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಗುರುವಾರ ಸಿರಿಯಾ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೂಡ ರವಾನಿಸಿತ್ತು. ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಾಏಕಿ ಸಿರಿಯಾ ಸೇನೆ ಮೇಲೆ ದಾಳಿ ಮಾಡುವಂತೆ ತಮ್ಮ ಸೇನಾಪಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಪರಿಣಾಮ ಗುರುವಾರ ರಾತ್ರಿಯಿಂದಲೇ ಅಮೆರಿಕ ನೌಕಾಪಡೆಗಳು ಸಿರಿಯಾ ಸೇನಾನೆಲೆಗಳತ್ತ ಕ್ಷಿಪಣಿ ದಾಳಿ ಮಾಡುತ್ತಿವೆ.

ಸಿರಿಯಾ ಸೇನೆಯ ಮೂಲಗಳು ತಿಳಿಸಿರುವಂತೆ ನಿನ್ನೆ ರಾತ್ರಿ ಸುಮಾರು 8.45ರಿಂದ ದಾಳಿ ಆರಂಭವಾಗಿದ್ದು, ಅಮೆರಿಕದ ಯುದ್ಧ ನೌಕೆಗಳು ಮೆಡಿಟರೇನಿಯನ್ ಸಮುದ್ರದಿಂದ ಸುಮಾರು 60 ಟಾಮ್ಹಾಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಪ್ರಮುಖವಾಗಿ ಸಿರಿಯಾದ ಷರ್ಯಾತ್ ಸೇನಾನೆಲೆಯನ್ನು ಗುರಿಯಾಗಿಸಿಕೊಂಡು 60 ಟಾಮ್ಹಾಕ್ ಖಂಡಾಂತರ ಕ್ಷಿಪಣಿಗಳ ಮೂಲಕ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಿರಿಯಾದ ಸೇನಾನೆಲೆಗಳ ಮೇಲೆ ಅಮೆರಿಕದ ಕ್ಷಿಪಣಿ ದಾಳಿ ನಡೆದಿರುವುದನ್ನು ಸಿರಿಯಾದ ಸರ್ಕಾರಿ ಟಿವಿ ಖಚಿತಪಡಿಸಿದೆ. ಅಮೆರಿಕ ಸೇನಾ ಮೂಲಗಳು ತಿಳಿಸಿರುವಂತೆ ಇದೇ ಷರ್ಯಾತ್ ಸೇನಾನೆಲೆಯಿಂದಲೇ ಬಂಡುಕೋರರ ಪ್ರದೇಶದ ಮೇಲೆ ವಿಷಾನಿಲ ಬಾಂಬ್ ದಾಳಿ ನಡೆದಿದ್ದು, ಹೀಗಾಗಿ ಇದೇ ಸೇನಾ ನೆಲೆಯ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ದಾಳಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್, ಅಸಾದ್ ಮತ್ತು ಅಮೆರಿಕ ದೇಶದ ನಡುವಿನ ಸಂಬಂದ ಮೊದಲಿನಿಂದಲೂ ಹಳಸಿದೆ. ಇದೇ ಕಾರಣಕ್ಕೆ ಸಮಯಕ್ಕಾಗಿ ಕಾಯುತ್ತಿದ್ದ ಅಮೆರಿಕ ಇದೀಗ ವಿಷಾನಿಲ ದಾಳಿ ನೆಪದಲ್ಲಿ ಸಿರಿಯಾದ ಮೇಲೆ ದಾಳಿ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

No Comments

Leave A Comment