Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: ದಂಧೆಕೋರರು ಗುಂಪುಕಟ್ಟಿ ತಯಾರಾಗಿ ನಿಂತಿದ್ದರು!-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌

ಉಡುಪಿ: ‘ನಾವು ಕಂಡ್ಲೂರು ತಲುಪುವ ಮೊದಲೇ ಅಲ್ಲಿ ಅಕ್ರಮ ಮರಳು ದಂಧೆಕೋರರು ಗುಂಪುಕಟ್ಟಿಕೊಂಡು ತಯಾರಾಗಿ ನಿಂತಿದ್ದರು. ಅಧಿಕಾರಿಗಳ ಮೇಲೆ ಎರಗಿದ ಗುಂಪು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿತು. ಇನ್ನು ಸ್ವಲ್ಪ ಹೊತ್ತು ನಾವು ಅಲ್ಲೇ ಇದ್ದಿದ್ದರೆ ಏನಾದರೂ ಆಗಬಹುದಾದ ಅಪಾಯ ಇತ್ತು’… ಪೊಲೀಸರ ನೆರವಿಲ್ಲದೆ ಅಕ್ರಮ ಮರಳುಗಾರಿಕೆ ವಿರುದ್ಧ ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿದಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಘಟನೆಯನ್ನು ವಿವರಿಸಿದ್ದು ಹೀಗೆ.

ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿಯಬೇಕಾದ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿದ ಅವರು, ‘ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಬಗ್ಗೆ ಬಹಳ ದೂರುಗಳು ಬಂದಿದ್ದವು. ಜನರು ನೀಡಿದ ಮಾಹಿತಿ ಆಧರಿಸಿ ಹಲವು ಬಾರಿ ದಾಳಿಯನ್ನೂ ನಡೆಸಲಾಗಿತ್ತು. ಆದರೆ, ದಾಳಿ ಮಾಹಿತಿಯನ್ನು ಮೊದಲೇ ಸಂಗ್ರಹಿಸುತ್ತಿದ್ದ ಆರೋಪಿಗಳು ವಾಹನ, ಪರಿಕರ ಸಮೇತ ಪರಾರಿಯಾಗಿರುತ್ತಿದ್ದರು. ಆದ್ದರಿಂದ ನಾವು ಕೇವಲ ಮರಳನ್ನು ಮಾತ್ರ ಜಪ್ತಿ ಮಾಡಬೇಕಾಗುತ್ತಿತ್ತು. ಅವರು ಮತ್ತೆ ಅದೇ ಕೃತ್ಯದಲ್ಲಿ ತೊಡಗುತ್ತಿದ್ದರು. ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ಮಾಡುವ ವಿಷಯ ಸಿಬ್ಬಂದಿಯಿಂದಲೇ ಸೋರಿಕೆಯಾಗುತ್ತಿದ್ದ ಬಗ್ಗೆ ಸಹ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಆದ್ದರಿಂದ ಈ ಕೃತ್ಯಕ್ಕೆ ಕಡಿವಾಣ ಹಾಕಲೇಬೇಕು ಎಂದು ನಿರ್ಧರಿಸಿ ಕಾರ್ಯಾಚರಣೆಗೆ ಹೊರಟೆ’ ಎಂದು ಅವರು ಹೇಳಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್‌, ಅವರ ಪತಿ ಶಂಕರ ಲಿಂಗ, ಅಂಪಾರು ಗ್ರಾಮ ಲೆಕ್ಕಾಧಿಕಾರಿ ಕಾಂತರಾಜು ಹಾಗೂ ನನ್ನ ಗನ್‌ಮ್ಯಾನ್‌ ಪೃಥ್ವಿರಾಜ್‌ ರಾತ್ರಿ 10.30ರ ಸುಮಾರಿಗೆ ಹಳ್ನಾಡಿಗೆ ಹೊರಟೆವು. ನಾವು ನಿರ್ದಿಷ್ಟ ಸ್ಥಳ ತಲುಪುವ ಮೊದಲೇ 10 ಬೈಕ್‌ಗಳಲ್ಲಿ 20 ಜನ ನಮ್ಮನ್ನು ಹಿಂಬಾಲಿಸಿದರು. ಇದು ಗಮನಕ್ಕೆ ಬಂದ ನಂತರ ವಾಹನ ನಿಲ್ಲಿಸಿದೆವು ಗನ್‌ಮ್ಯಾನ್ ಬೈಕ್‌ ಸವಾರರಿಗೆ ಎಚ್ಚರಿಕೆ ನೀಡಿದ ನಂತರ ಅವರು ಅಲ್ಲಿಂದ ಕಾಲ್ಕಿತ್ತರು’ ಎಂದರು.

‘ಹಳ್ನಾಡಿಗೆ ಹೋದ ನಂತರ ಅಲ್ಲಿ ಆರೇಳು ತಾತ್ಕಾಲಿಕ್‌ ಶೆಡ್‌ ನಿರ್ಮಿಸಿಕೊಂಡು ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದು ಗೊತ್ತಾಯಿತು. ನಮ್ಮನ್ನು ನೋಡಿದ ಆರೋಪಿಗಳು ಓಡಿ ಹೋದರು. ಅವರಲ್ಲಿ ಆರು ಮಂದಿಯನ್ನು ನಾವು ಹಿಡಿದುಕೊಂಡೆವು. ಎರಡು ವಾಹನವನ್ನೂ ಜಪ್ತಿ ಮಾಡಿದೆವು. ಅಲ್ಲಿಂದ ನಾವು ಕಂಡ್ಲೂರಿಗೆ ಹೊರಟೆವು’ ಎಂದು ಅವರು ವಿವರಿಸಿದರು.

‘ಕಂಡ್ಲೂರಿನಲ್ಲಿ ಸಹ ದಾಳಿ ನಡೆಸಿ ಮರಳು, ವಾಹನ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ದಾಳಿಯ ವಿಷಯ ಕಂಡ್ಲೂರಿನಲ್ಲಿದ್ದ ದಂಧೆಕೋರರಿಗೆ ಗೊತ್ತಾಗಿತ್ತು ಮತ್ತು ಅವರೆಲ್ಲ ಗುಂಪು ಕಟ್ಟಿಕೊಂಡು ಜಟಾಪಟಿಗೆ ಸಿದ್ಧರಾಗಿ ನಿಂತಿದ್ದರು. ಅಲ್ಲಿಗೆ ಹೋಗುತ್ತಿದ್ದಂತೆ ನಮ್ಮನ್ನು ಸುತ್ತುವರೆದ ಅವರು ‘ಯಾರು ನೀವು ಇಲ್ಲಿಗೇಕೆ ಬಂದಿದ್ದೀರ’ ಎಂದು ಪ್ರಶ್ನಿಸಿದರು. ನಾನು ಜಿಲ್ಲಾಧಿಕಾರಿ ಎಂದು ಹೇಳಿದೆ, ಆ ಸಂದರ್ಭದಲ್ಲಿ ಮಾತಿನ ಚಕಮಕಿ ಆಗಿ ಅವರು ಹಲ್ಲೆ ಮಾಡಿದರು. ಕಾಂತರಾಜು ಅವರು ತೀವ್ರವಾಗಿ ಗಾಯಗೊಂಡರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಹಾಗೂ ಅಪಾಯದ ಮುನ್ಸೂಚನೆ ಅರಿತ ನಾವು ಅಲ್ಲಿಂದ ಸೀದಾ ಉಡುಪಿಗೆ ಬಂದು ನಗರ ಠಾಣೆಗೆ ದೂರು ನೀಡಿದೆ. ಕಾರ್ಯಾಚರಣೆ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮಾಹಿತಿ ನೀಡಿರಲಿಲ್ಲ’ ಎಂಬುದಾಗಿ ಅವರು ಹೇಳಿದರು.

ಆರೋಪಿಯನ್ನು ಬೆನ್ನಟ್ಟಿದಾಗ ಹಲ್ಲೆ: ಜಿಲ್ಲಾಧಿಕಾರಿ ಅವರ ಗನ್‌ಮ್ಯಾನ್ ಪೃಥ್ವಿರಾಜ್ ಜೋಗಿ ಅವರು ಅಪಾಯವನ್ನು ಲೆಕ್ಕಿಸದೆ ಆರೋಪಿಯೊಬ್ಬನನ್ನು ಬೆನ್ನಟ್ಟಿ ಹಿಡಿದು ಸಾಹಸ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಯೂ ನಡೆದಿದೆ.

‘ತಪ್ಪಿಸಿಕೊಂಡು ಹೋದ ಆರೋಪಿ ಮನೆಯೊಳಗೆ ನುಗ್ಗಿದ. ಆತನನ್ನು ಬೆನ್ನಟ್ಟಿ ಹಿಡಿದು ಹೊರಗೆ ಕರೆ ತರುವ ವೇಳೆ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದರು. ಆದರೂ ನಾನು ಆತನನ್ನು ಬಿಡಲಿಲ್ಲ’ ಎಂದು ಗನ್‌ಮ್ಯಾನ್‌ ಪೃಥ್ವಿರಾಜ್ ಹೇಳಿದರು.

ಒಟ್ಟು 13 ಮಂದಿಯ ಬಂಧನ
ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿಯನ್ನು ಹಾಗೂ ಹಳ್ನಾಡು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಒಬ್ಬ ಆರೋಪಿಯ ಬೆರಳಿಗೆ ಗಾಯವಾಗಿದ್ದು ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅದನ್ನು ಕುಂದಾಪುರ ಠಾಣೆಗೆ ವರ್ಗಾಯಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಹೇಳಿದರು.

‘ಜಿಲ್ಲಾಧಿಕಾರಿ ಅವರು ನಮಗೆ ಮಾಹಿತಿ ನೀಡಿರಲಿಲ್ಲ. ನಿಯಂತ್ರಣ ಕೊಠಡಿ ಸಿಬ್ಬಂದಿ ನನಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ನಂತರ ಕೂಡಲೇ ನಗರ ಠಾಣೆಗೆ ತೆರಳಿದೆ. ಅಕ್ರಮ ಮರಳುಗಾರಿಕೆ ತಡೆಯ ಕಾರ್ಯಪಡೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜತೆಗೆ ಪೊಲೀಸ್‌ ಸಿಬ್ಬಂದಿಯೂ ಇದ್ದಾರೆ. ಯಾವುದೇ ದಾಳಿ ಸಂಘಟಿಸಿ ಮಾಹಿತಿ ನೀಡಿದರೆ ಪೊಲೀಸರು ಅವರೊಂದಿಗೆ ತೆರಳುವರು’ಎಂದರು

No Comments

Leave A Comment