ಭಾರತೀಯ ಕಂಪ್ಯೂಟರ್ ಎಂಜಿನಿಯರ್ ಗಳಿಗೆ ಇನ್ನು ಅಮೆರಿಕದ ಹೆಚ್-1ಬಿ ವಿಸಾ ಕಠಿಣ!
ವಾಷಿಂಗ್ಟನ್: ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಆಘಾತ ನೀಡಿದ್ದು, ಹೆಚ್-1ಬಿ ವೀಸಾ ದುರ್ಬಳಕೆ ತಡೆಗೆ ಅಮೆರಿಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು ಹೆಚ್-1ಬಿ ವೀಸಾ ದುರುಪಯೋಗದ ವಿರುದ್ಧ ಹಲವು ಕಠಿಣ ಕ್ರಮಗಳ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಹೆಚ್-1ಬಿ ವೀಸಾ ಮೂಲಕ ಅಮೆರಿಕಕ್ಕೆ ಉದ್ಯೋಗಾರ್ಥವಾಗಿ ಬರುವುದಕ್ಕೆ ಕಂಪ್ಯೂಟರ್ ಪ್ರೋಗ್ರಾಮರ್ ಆಗಿರುವುದಷ್ಟೇ ಒಂದು ಅರ್ಹತೆಯಲ್ಲ. ಅದಕ್ಕೆ ಸೂಕ್ತ ಅರ್ಹತೆಯೂ ಬೇಕು. ಇದನ್ನು ಸಾಬೀತು ಪಡಿಸಲು ಇನ್ನೂ ಹೆಚ್ಚಿನ ದಾಖಲೆಗಳನ್ನು ನೀಡಿ ಎಂದು ಅಮೆರಿಕದ ಕಂಪನಿಗಳಿಗೆ ಆಂತರಿಕ ಭದ್ರತಾ ಇಲಾಖೆಯು ಸೂಚಿಸಿದೆ.
ಈ ಬಗ್ಗೆ ಮಾತನಾಡಿರುವ ಸಿವಿಲ್ ರೈಟ್ಸ್ ಡಿವಿಷನ್ನ ಹಂಗಾಮಿ ಸಹಾಯಕ ಅಟಾರ್ನಿ ಜನರಲ್ ಟಾಮ್ ವ್ಹೀಲರ್ ಅವರು, “ಕಂಪನಿಗಳು ಹೆಚ್-1ಬಿ ವೀಸಾವನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ಆ ಮೂಲಕ ಅಮೆರಿಕದ ನೌಕರರಿಗೆ ಅನ್ಯಾಯ ಎಸಗುವುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಸಹಿಸುವುದಿಲ್ಲ. ಅಮೆರಿಕದ ನೌಕರರು ಅವಕಾಶ ವಂಚಿತರಾಗಬಾರದು. ಅದಕ್ಕಾಗಿ ನ್ಯಾಯಾಂಗ ಇಲಾಖೆ ಅಮೆರಿಕದ ನೌಕರರ ಅವಕಾಶ ಕಸಿಯುತ್ತಿಲ್ಲ ಎಂಬ ವಾದವನ್ನು ಮರು ಪರಿಶೀಲಿಸಲು ಸಿದ್ಧವಿದೆ.
ಜತೆಗೆ ಹೆಚ್-1ಬಿ ವೀಸಾ ವಿತರಣೆಯ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಸಹ ಸಿದ್ಧವಿದೆ ಎಂದು ತಿಳಿಸಿದ್ದಾರೆ.ಏಪ್ರಿಲ್ 3 ರಿಂದ ಪ್ರಸ್ತುತ ಹಣಕಾಸು ವರ್ಷದ ಹೆಚ್-1ಬಿ ವೀಸಾ ಅರ್ಜಿಗಳ ಸಲ್ಲಿಕೆ ಆರಂಭವಾಗಿದೆ. 85 ಸಾವಿರ ಹೆಚ್-1ಬಿ ವೀಸಾ ವಿತರಣೆಯಾಗುವ ಸಾಧ್ಯತೆ ಇದ್ದು ಅಮೆರಿಕದ ಐಟಿ ಕಂಪನಿಗಳು ವೀಸಾ ಪಡೆಯಲು ಪೈಪೋಟಿ ಆರಂಭಿಸಿವೆ. ಐಟಿ ಕಂಪೆನಿಗಳು. ಪ್ರಮುಖವಾಗಿ ಭಾರತೀಯ ಕಂಪೆನಿಗಳು, ಹೆಚ್-1ಬಿ ವೀಸಾದ ಗರಿಷ್ಠ ಬಳಕೆದಾರರಾಗಿವೆ.ಇನ್ನ ಅಮೆರಿಕನ್ನರ ವಿರುದ್ಧ ತಾರತಮ್ಯ ಎಸಗದಂತೆ ಐಟಿ ಕಂಪೆನಿಗಳಿಗೆ ಟ್ರಂಪ್ ಆಡಳಿತ ಎಚ್ಚರಿಕೆ ನೀಡಿದ್ದು, ಇದಕ್ಕೆ ತಪ್ಪಿದಲ್ಲಿ ಕಂಪೆನಿಗಳ ವಿರುದ್ಧ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಹೇಳಲಾಗಿದೆ. ಏತನ್ಮಧ್ಯೆ ಐಟಿ ಕಂಪನಿಗಳ ಧೋರಣೆ ವಿರೋಧಿಸಿರುವ ಸ್ಥಳೀಯ ಸಂಘಟನೆಗಳು ಹೆಚ್-1ಬಿ ವೀಸಾ ನಿಯಮಾವಳಿಗಳನ್ನು ಬದಲಿಸಬೇಕು ಎಂದು ಹೋರಾಟ ನಡೆಸುತ್ತಿವೆ.ಯುಎಸ್ ಸಿಐಎಸ್ ನ ಕ್ರಮಗಳು ಮತ್ತು ಅದರ ಪರಿಣಾಮ
1. ಯುಎಸ್ ಸಿಐಎಸ್ ನ ನೂತನ ಕಠಿಣ ಕ್ರಮದಿಂದಾಗಿ ಡಿಸೆಂಬರ್ 22 2000 ರ ಅಮೆರಿಕ ಸರ್ಕಾರದ ಹೆಚ್-1ಬಿ ವೀಸಾ ಗೈಡೆನ್ಸ್ ಮೆಮೋ ರದ್ದಾಗಿದ್ದು, ಕಂಪನಿಗಳಿಂದ ಹೆಚ್-1ಬಿ ವೀಸಾ ಪಡೆಯುವವರು ಕೇವಲ ಕಂಪ್ಯೂಟರ್ ಪದವಿ ಹೊಂದಿದ್ದರೆ ಸಾಲದು, ತಮ್ಮ ಸಾಮರ್ಥ್ಯ ಪ್ರದರ್ಶಿಸಬಲ್ಲ ಹೆಚ್ಚಿನ ದಾಖಲೆಗಳನ್ನು ನೀಡಬೇಕಿರುತ್ತದೆ.
2. ಹೊಸ ನಿಯಮಗಳ ಜಾರಿ ಬಳಿಕ ಪ್ರಸಕ್ತ ಸಾಲಿನ ಹೆಚ್-1ಬಿ ವೀಸಾ ಪಡೆಯಲಿಚ್ಛಿಸುವವರು ವೃತ್ತಿಪರ ಪದವಿ ಪ್ರಮಾಣ ಪತ್ರ ಮಾತ್ರವಲ್ಲದೇ, ನುರಿತ ಕೌಶಲ್ಯಪಡೆದ ಕುರಿತ ಪ್ರಮಾಣ ಪತ್ರವನ್ನೂ ಹೊಂದಿರ ಬೇಕು. ಮತ್ತು ಆ ವ್ಯಕ್ತಿಗೆ ಕೆಲಸ ನೀಡಬೇಕೆಂದು ಕೊಂಡಿರುವ ಸಂಸ್ಥೆ ಕೂಡ ವ್ಯಕ್ತಿಯ ಎಲ್ಲ ಪ್ರಮಾಣ ಪತ್ರಗಳನ್ನು ಪರಿಶೀಲಿಸಿಯೇ ಮುಂದುವರೆಯಬೇಕು. ಈ ಹಿಂದೆಲ್ಲಾ ಭಾರತದ ಕಡಿಮೆ ಪದವಿ ಪಡೆದಿರುವ ಪ್ರೋಗ್ರಾಮರ್ ಗಳನ್ನು ಅಮೆರಿಕದ ಕಂಪನಿಗಳು ಕಡಿಮೆ ವೇತನಕ್ಕಾಗಿ ಹೆಚ್-1ಬಿ ವೀಸಾ ನೀಡಿ ಕರೆಸಿಕೊಂಡು ದುಡಿಸಿಕೊಳ್ಳುತ್ತಿದ್ದವು.
3. ಇನ್ನು ಅಮೆರಿಕ ಸರ್ಕಾರದ ಕಠಿಣ ಕ್ರಮದಿಂದಾಗಿ ಕೇವಲ ಭಾರತದಂತಹ ದೇಶಗಳ ಉದ್ಯೋಗಸ್ಥರಿಗೆ ಮಾತ್ರವಲ್ಲ ಅಮೆರಿಕ ಕಂಪನಿಗಳಿಗೂ ಭಾರಿ ಆರ್ಥಿಕ ಹೊರೆ ಬೀಳಲಿದ್ದು, ಇದೀಗ ವೃತ್ತಿಪರ ಕೋರ್ಸ್ ಪದವಿ ಹೊಂದುರುವ ಅದರಲ್ಲೂ ಪ್ರಮುಖವಾಗಿ ನುರಿತ ಪ್ರೊಗ್ರಾಮರ್ ಗಳನ್ನು ಮಾತ್ರ ಆಯ್ಕೆ ಮಾಡಬೇಕಿದೆ. ಇಂತಹ ನುರಿತ ಪ್ರೋಗ್ರಾಮರ್ ಗಳಿಗೆ ಭಾರಿ ಮೊತ್ತದ ವೇತನ ನೇಡಬೇಕಾಗುತ್ತದೆ. ಇದು ಕಂಪನಿಗಳ ತಲೆನೋವಿಗೆ ಕಾರಣವಾಗಿದೆ.
4. ಅಮೆರಿಕನ್ನರಿಗೇ ಪ್ರಾಶಸ್ತ್ಯಅಮೆರಿಕ ಸರ್ಕಾರದ ಈ ಕ್ರಮದಿಂದಾಗಿ ಪರೋಕ್ಷವಾಗಿ ಅಮೆರಿಕನ್ನರಿಗೆ ಮಾತ್ರ ಹೆಚ್ಚಿನ ಲಾಭವಾಗಲಿದ್ದು, ಕಡಿಮೆ ವೇತನಕ್ಕೆ ಉದ್ಯೋಗಿಗಳು ಸಿಗದೇ ಇದ್ದಾಗ ಕಂಪನಿಗಳು ಅನಿವಾರ್ಯವಾಗಿ ಅಮೆರಿಕದ ನುರಿತ ಉದ್ಯೋಗಿಗಳತ್ತ ಮುಖ ಮಾಡಬೇಕಾಗುತ್ತದೆ. ಇದು ಅಮೆರಿಕದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದ್ದು, ಭಾರತದಂತಹ ದೇಶಗಳಿಗೆ ಹೊಡೆತ ಬೀಳಲಿದೆ.