Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಚಿನ್ನಾಭರಣ ಸುಲಿಗೆ ಉದ್ಯಮಿಯನ್ನು ಲೈಂಗಿಕ ಕ್ರಿಯೆಗೆ ಕರೆದು ಸುಲಿಗೆ: ಪೊಲೀಸ್ ಬಲೆಗೆ ಹನಿಟ್ರ್ಯಾಪ್ ಗ್ಯಾಂಗ್

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಗಂಗಾಧರ್ ಎಂಬುವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ, ₹ 10 ಲಕ್ಷ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ಇಬ್ಬರು ಮಹಿಳೆಯರಿರುವ ಆರು ಮಂದಿಯ ಗ್ಯಾಂಗ್ ಬ್ಯಾಟರಾಯನಪುರ ಪೊಲೀಸರ ಬಲೆಗೆ ಬಿದ್ದಿದೆ.

‘ಕೋಣನಕುಂಟೆಯ ರುಕ್ಮಿಣಿ (37), ಬ್ಯಾಂಕ್ ಕಾಲೊನಿಯ ಜಯಂತಿ (28), ಚಳ್ಳಘಟ್ಟದ ಮಂಜುನಾಥ (32), ಮಹಾದೇವ (27), ಸ್ವಾಮಿ (27) ಹಾಗೂ ನಾಯಂಡಹಳ್ಳಿಯ ಮಹೇಶ (24) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ₹ 1.45 ಲಕ್ಷ ನಗದು ಹಾಗೂ 75 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಂಧಿತ ಮಹಿಳೆಯರು ಪತಿ–ಮಕ್ಕಳಿಂದ ಪ್ರತ್ಯೇಕವಾಗಿದ್ದಾರೆ. ಉಳಿದ ನಾಲ್ವರು ಕ್ಯಾಬ್ ಚಾಲಕರು. ಸುಲಭವಾಗಿ ಹಣ ಗಳಿಸಲು ಇಂಥ ಅಡ್ಡದಾರಿ ಹಿಡಿದಿದ್ದಾರೆ. ಶ್ರೀಮಂತ ವ್ಯಕ್ತಿಗಳನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುವ ರುಕ್ಮಿಣಿ ಹಾಗೂ ಜಯಂತಿ, ಅವರು ತಮ್ಮ ಜತೆ ಮಲಗುವ ದೃಶ್ಯಗಳನ್ನು  ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು.’

‘ಸ್ವಲ್ಪ ಸಮಯದ ನಂತರ ಉಳಿದ ನಾಲ್ವರೂ ಮನೆಗೆ ನುಗ್ಗುತ್ತಿದ್ದರು. ಬಳಿಕ ಅವರಿಗೆ ಆ ವಿಡಿಯೊ ತೋರಿಸಿ, ನೀವು ಪರ ಸ್ತ್ರೀ ಜತೆ ಅನೈತಿಕ ಸಂಬಂಧ ಹೊಂದಿರುವ ವಿಚಾರವನ್ನು ಪತ್ನಿ–ಮಕ್ಕಳಿಗೆ ಹೇಳುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿ ನಗದು–ಚಿನ್ನಾಭರಣ ದೋಚುತ್ತಿದ್ದರು’ ಎಂದು ಮಾಹಿತಿ ನೀಡಿದರು.
ಕಣ್ಣಿಗೆ ರಾಚಿತು ಚಿನ್ನ:  ರಿಯಲ್ ಎಸ್ಟೇಟ್ ವ್ಯವಹಾರದ ಜತೆಗೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರೂ ಆಗಿರುವ ಗಂಗಾಧರ್, ಯಾವಾಗಲೂ ನಾಲ್ಕೈದು ಉಂಗುರಗಳು ಹಾಗೂ ಚಿನ್ನದ ಸರಗಳನ್ನು ಹಾಕಿಕೊಂಡು ಓಡಾಡುತ್ತಿದ್ದರು. ಅದನ್ನು ಕಂಡ ಆರೋಪಿಗಳು, ಹನಿಟ್ರ್ಯಾಪ್ ಮೂಲಕ ಒಡವೆ ದೋಚಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ ಮಂಜುನಾಥ, ಈ ಇಡೀ ಸಂಚಿನ ರೂವಾರಿ. ಶ್ರೀಮಂತ ವ್ಯಕ್ತಿಗಳನ್ನು ತಮ್ಮ ಜಾಲದಲ್ಲಿ ಸಿಲುಕಿಸಿದರೆ, ಅವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂಬುದು ಆತನ ಯೋಚನೆಯಾಗಿತ್ತು.

ಶಾಸಕರೊಬ್ಬರ ಜತೆ ಓಡಾಡುತ್ತಿದ್ದ ಗಂಗಾಧರ್ ಅವರನ್ನು ಹಲವು ದಿನಗಳಿಂದ ಗಮನಿಸಿದ್ದ ಮಂಜುನಾಥ, ರುಕ್ಮಿಣಿ ಮೂಲಕ ಕರೆ ಮಾಡಿಸಿ ಅವರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಲು ನಿರ್ಧರಿಸಿದ್ದ. ಆದರೆ, ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ರುಕ್ಮಿಣಿ ಮೈ–ಕೈ ಸುಟ್ಟುಕೊಂಡಿದ್ದರು. ಈ ಕಾರಣಕ್ಕೆ ಆಕೆಯ ಸ್ನೇಹಿತೆ ಜಯಂತಿಯನ್ನು ಸಿದ್ಧಪಡಿಸಿದ್ದ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

ಮಿಸ್ಡ್ ಕಾಲ್ ಕೊಟ್ಟಳು: ‘ಜಯಂತಿಗೆ ಹೊಸ ಮೊಬೈಲ್ ಹಾಗೂ ಸಿಮ್ ಕಾರ್ಡ್ ಕೊಡಿಸಿದ ಮಂಜುನಾಥ, ಗಂಗಾಧರ್‌ ಅವರನ್ನು ತಮ್ಮ ದಾರಿಗೆ ತರಲು ಒಂದು ತಿಂಗಳ ಗಡುವು ಕೊಟ್ಟಿದ್ದ. ಫೆ.18ರಂದು ಆಕೆ ಗಂಗಾಂಧರ್‌ ಮೊಬೈಲ್‌ಗೆ ಮಿಸ್ಡ್ ಕಾಲ್ ಕೊಟ್ಟಿದ್ದಳು. ಅವರು ವಾಪಸ್ ಕರೆ ಮಾಡಿದಾಗ, ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಮಾತನಾಡಿದ್ದಳು’ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

‘ನಂತರ ನಿರಂತರವಾಗಿ ಸಂದೇಶಗಳನ್ನು ಕಳುಹಿಸುವ ಮೂಲಕ ಅವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆದಳು. ಮಾರ್ಚ್ 17ರ ಮಧ್ಯಾಹ್ನ  ಗಂಗಾಧರ್ ಆವಲಹಳ್ಳಿಯ ತುಂಗಾ ಬಾರ್‌ನಲ್ಲಿ ಮದ್ಯಪಾನ ಮಾಡುತ್ತ ಕುಳಿತಿದ್ದರು. ಈ ವೇಳೆ ಕರೆ ಮಾಡಿದ ಜಯಂತಿ, ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಳು. ಅದಕ್ಕೆ ಅವರು ಒಪ್ಪುತ್ತಿದ್ದಂತೆಯೇ ರುಕ್ಮಿಣಿಯನ್ನು ಕರೆದುಕೊಂಡು ಕಾರಿನಲ್ಲಿ ಬಾರ್ ಬಳಿ ಹೋಗಿದ್ದಳು.’
‘ಗಂಗಾಧರ್‌ ಅವರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡ ಮಹಿಳೆಯರು, ಚಳ್ಳಘಟ್ಟದಲ್ಲಿರುವ ಮಂಜುನಾಥ್‌ನ ತೋಟದ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆಗಾಗಲೇ ಪೂರ್ವಯೋಜಿತ ಸಂಚಿನಂತೆ ಉಳಿದ ನಾಲ್ವರು  ಆ ತೋಟದ ಮನೆಯಲ್ಲೇ ಇದ್ದರು.’

‘ಹೊರಗೆ ಎದ್ದು ಹೋಗಬಾರದೆಂದು ಮೊದಲು ಗಂಗಾಧರ್ ಅವರನ್ನು ಬೆತ್ತಲೆ ಮಾಡಿ ಕೂರಿಸಿದ ಆರೋಪಿಗಳು, ಬಳಿಕ ಒಡವೆ ಬಿಚ್ಚಿಕೊಂಡಿದ್ದರು. ಅಲ್ಲದೆ, ₹10 ಲಕ್ಷ ಕೊಡುವಂತೆ ಬೆದರಿಕೆ ಕೂಡ ಹಾಕಿದ್ದರು. ಆಗ ಸ್ನೇಹಿತನಿಗೆ ಕರೆ ಮಾಡಿದ ಗಂಗಾಧರ್, ಹಣ ತೆಗೆದುಕೊಂಡು ಚಳ್ಳಘಟ್ಟಕ್ಕೆ ಬರುವಂತೆ ಸೂಚಿಸಿದ್ದರು. ಸ್ಥಳಕ್ಕೆ ಬಂದ ಸ್ನೇಹಿತನಿಂದ ಹಣ ಪಡೆದ ಆರೋಪಿಗಳು, ಬಳಿಕ ಇಬ್ಬರನ್ನೂ ಕೆಂಗೇರಿಗೆ ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದರು.’
‘ಮೊದಲು ದೂರು ಕೊಡಲು ಒಪ್ಪದ ಗಂಗಾಧರ್, ಸ್ನೇಹಿತನ ಬಲವಂತಕ್ಕೆ ಮಣಿದು 2 ದಿನಗಳ ಬಳಿಕ ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟರು. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಿಕೊಂಡೆವು.  ಮೊಬೈಲ್ ಕರೆ ವಿವರ ಆಧರಿಸಿ ಮಾರ್ಚ್ 27ರಂದು ರುಕ್ಮಿಣಿ ಹಾಗೂ ಜಯಂತಿಯನ್ನು ಬಂಧಿಸಲಾಯಿತು. ಮಾರ್ಚ್ 31ರಂದು ಉಳಿದವರೂ ಸಿಕ್ಕಿ ಬಿದ್ದರು.’

‘ನ್ಯಾಯಾಧೀಶರ ಅನುಮತಿ ಮೇರೆಗೆ ಆರೋಪಿಗಳನ್ನು ಏಪ್ರಿಲ್ 5ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಗ್ಯಾಂಗ್ ಇದೇ ರೀತಿ ಹಲವರಿಗೆ ವಂಚಿಸಿರುವುದು ಗೊತ್ತಾಗಿದೆ. ಇವರಿಂದ ಮೋಸ ಹೋದವರು ಬ್ಯಾಟರಾಯನಪುರ ಠಾಣೆಗೆ ದೂರು ಕೊಡಬಹುದು. ಹೆಸರು–ವಿವರಗಳನ್ನು ಗೌಪ್ಯವಾಗಿಡುತ್ತೇವೆ’ ಎಂದು ತನಿಖಾಧಿಕಾರಿಗಳು ಹೇಳಿದರು.

No Comments

Leave A Comment