Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ದೇಶದ ಅತೀ ದೊಡ್ಡ ಸುರಂಗ ಮಾರ್ಗ ಇಂದು ಲೋಕಾರ್ಪಣೆ

ಶ್ರೀನಗರ: ಭಾರತದ ಚೊಚ್ಚಲ ವಿಶ್ವದರ್ಜೆಯ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಏಷ್ಯಾದ ಮೊದಲ ದ್ವಿಮುಖ ಪಥದ ಸುರಂಗ ಮಾರ್ಗವನ್ನು  ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಲಿದ್ದಾರೆ.

ಸುಮಾರು 3000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ನಿನ್ನೆಯಷ್ಟೇ ಶ್ರೀನಗರದ  ಪರಿಂಪೋರಾ-ಪಂತ್ ಚೌಕ್ ಬೈಪಾಸ್ ರಸ್ತೆಯಲ್ಲಿರುವ ಆಸ್ಪತ್ರೆ ಸಮೀಪ ಸೇನಾ ಕಾವಲುಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ ಇಬ್ಬರು ಯೋಧರು ಗಾಯಗೊಂಡಿದ್ದರು. ಹೀಗಾಗಿ ಸುರಂಗ ಮಾರ್ಗ  ಉದ್ಘಾಟನೆಗೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಭಾರತೀಯ ಸೇನೆ ಉನ್ನತ ಶ್ರೇಣಿಯ ಯೋಧರು ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಿದ್ದಾರೆ.

ಇನ್ನು ಈ ಬೃಹತ್ ಸುರಂಗ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, 9.2 ಕಿ.ಮೀ ಉದ್ದದ ಸುರಂಗಮಾರ್ಗದಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದರಲ್ಲಿ  ವಾಹನದಿಂದ ಹೊರಬರುವ ಹೊಗೆಯನ್ನು ಹೊರಹಾಕಲು ಮತ್ತು ಹೊರಗಿನ ಶುದ್ಧವಾದ ಗಾಳಿ ಸುರಂಗದೊಳಕ್ಕೆ ಹೋಗಲು ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತೆಯೇ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ  ಎದುರಾದಲ್ಲಿ ಪ್ರಯಾಣಿಕರ ಸುರಕ್ಷತೆಗೂ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸುರಂಗಮಾರ್ಗದಲ್ಲಿ ಒಟ್ಟು 124 ಕ್ಯಾಮೆರಾಗಳನ್ನು ಮತ್ತು ಉಷ್ಣ ಪತ್ತೆ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.ಪ್ರತಿ 150 ಮೀಟರ್​ಗೆ ಒಂದರಂತೆ ಎಸ್​ಒಎಸ್ ಬಾಕ್ಸ್ ಅಳವಡಿಸಲಾಗಿದ್ದು, ಇದರಿಂದ ಸಮಸ್ಯೆಗೆ ಸಿಲುಕಿಕೊಂಡಿರುವ ಪ್ರಯಾಣಿಕರು ಐಟಿಸಿಆರ್ ಅನ್ನು ಸಂಪರ್ಕಿಸಬಹುದಾಗಿದೆ. ಇದರಲ್ಲೇ ಪ್ರಥಮ ಚಿಕಿತ್ಸೆಯ ಸಾಧನಗಳನ್ನೂ  ಇರಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ.

ಈ ಬೃಹತ್ ಸುರಂಗಮಾರ್ಗ ಎರಡು ರಸ್ತೆಗಳನ್ನು ಹೊಂದಿದ್ದು, ಒಂದು ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಇದು 13 ಮೀಟರ್ ಅಗಲವಿದೆ. ಇದಕ್ಕೆ ಹೊಂದಿಕೊಂಡೇ  ಸುರಕ್ಷತಾ ದೃಷ್ಟಿಯಿಂದ ನಿರ್ವಿುಸಿರುವ ಸುರಂಗಮಾರ್ಗವಿದ್ದು, ಇದು 6 ಮೀಟರ್ ಅಗಲವಿದೆ. ಎರಡೂ ಟ್ಯೂಬ್​ ಗಳು 9 ಕಿಮೀ ಉದ್ದವಿದ್ದು, 29 ಕ್ರಾಸ್ ಪ್ಯಾಸೇಜ್ ​ಗಳಿವೆ. 8 ಮೀಟರ್​ಗೆ ಒಂದರಂತೆ ಶುದ್ಧಗಾಳಿ ತರುವ  ಕೇಂದ್ರಗಳಿವೆ. ಈ ಸುರಂಗಮಾರ್ಗ ಟ್ರಾನ್ಸ್ ವರ್ಸ್ ವೆಂಟಿಲೇಷನ್ ವ್ಯವಸ್ಥೆ ಅಳವಡಿಸಿರುವ ದೇಶದ ಪ್ರಥಮ ಮತ್ತು ವಿಶ್ವದ ಆರನೇ ಮಾರ್ಗವಾಗಿದೆ.

ಐದೂವರೆ ವರ್ಷಗಳ ಅವಧಿಯಲ್ಲಿ ಸುರಂಗಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ ಫ್ರಾಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆ ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಿದೆ. ರಾಷ್ಟ್ರೀಯ  ಹೆದ್ದಾರಿ 44ರ ಮೂಲಕ ಪ್ರಯಾಣಿಸುವಾಗ ಸುರಂಗ ಮಾರ್ಗದಿಂದಾಗಿ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿ 2 ಗಂಟೆಗಳಷ್ಟು ಇಳಿಕೆಯಾಗಲಿದ್ದು, ಪ್ರತಿನಿತ್ಯ ಸುಮಾರು 27 ಲಕ್ಷ ಮೌಲ್ಯದಷ್ಟು ಇಂಧನ  ಉಳಿತಾಯವಾಗಲಿದೆ.  ಈ ಎರಡು ನಗರಗಳ ನಡುವಿನ ಅಂತರ ಸುಮಾರು 31 ಕಿಲೋಮೀಟರ್​ಗಳಷ್ಟು ಕಡಿತಗೊಳ್ಳಲಿದೆ.ಈ ಸುರಂಗ ಮಾರ್ಗದಲ್ಲಿ ಒಟ್ಟು ಮೂರು ನಿಲ್ದಾಣಗಳನ್ನು ಮಾಡಲಾಗಿದ್ದು, ಕುಡ್, ಪಟ್ನಿಟಾಪ್, ಬಟೋಟೆ ಪ್ರದೇಶಗಳನ್ನು ಇದರ ಮೂಲಕ ಸಂಪರ್ಕಿಸಬಹುದಾಗಿದೆ. ಇನ್ನು ಸುರಂಗ ಮಾರ್ಗದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ       ಬಿಎಸ್​ಎನ್​ಎಲ್, ಏರ್​ಟೆಲ್, ಐಡಿಯಾಗೆ ನೆಟ್​ ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಈ ಸುರಂಗ ಮಾರ್ಗದಲ್ಲಿ ಗಂಟೆಗೆ 50 ಕಿಮೀ ವೇಗದ ಮಿತಿ ನಿಗದಿ ಪಡಿಸಲಾಗಿದ್ದು, 5 ಮೀಟರ್​ ಗಿಂತ ಹೆಚ್ಚು ಎತ್ತರವಿರುವ ವಾಹನ  ಸಂಚಾರಕ್ಕೆ ಅವಕಾಶವಿಲ್ಲ. 2011ರ ಮೇ 23ರಂದು ಸುರಂಗ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೀಗ ಸುಧೀರ್ಘ 6 ವರ್ಷಗಳ ಬಳಿಕ ಸುರಂಗ ಮಾರ್ಗ ಲೋಕಾರ್ಪಣೆಯಾಗುತ್ತಿದೆ.

No Comments

Leave A Comment