Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ ಕಟ್ಟಡಕ್ಕೆ ಬೆಂಕಿ; ಮೌಲ್ವಿ, ಕಾರ್ಮಿಕ ಸಜೀವ ದಹನ

ಬೆಂಗಳೂರು: ಹಳೇ ಗುಡ್ಡದಹಳ್ಳಿಯ ವಿನಾಯಕನಗರದ ಪೀಠೋಪಕರಣ ಮಳಿಗೆಗೆ ಶುಕ್ರವಾರ ಮಧ್ಯಾಹ್ನ ಹೊತ್ತಿಕೊಂಡ ಬೆಂಕಿಯು, ಮದರಾಸಗೂ ವ್ಯಾಪಿಸಿದ್ದರಿಂದ ಮೌಲ್ವಿ  ಮಹಮದ್ ಹಫೀಜ್‌ ವುಲ್ಲಾ (35) ಹಾಗೂ ದೆಹಲಿ ಕಾರ್ಮಿಕ ಮೊಹಮದ್ ಮೆಹ್ತಾಬ್ (27) ಸಜೀವ ದಹನವಾಗಿದ್ದಾರೆ.
ಮದರಸಾದಲ್ಲಿದ್ದ ಮಕ್ಕಳು ಹಾಗೂ ಪೀಠೋಪಕರಣ ಮಳಿಗೆಯ ಕಾರ್ಮಿಕರು ಆಗಷ್ಟೇ ಪ್ರಾರ್ಥನೆಗೆ ತೆರಳಿದ್ದರಿಂದ ಅವರೆಲ್ಲ  ಅಪಾಯದಿಂದ ಪಾರಾಗಿದ್ದಾರೆ.

ಹತ್ತು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಒಳಗೆ ಸಿಲುಕಿದ್ದ ಕಟ್ಟಡದ ಮಾಲೀಕ ಇಬ್ರಾಹಿಂ ಕಲೀಂವುಲ್ಲಾ ಹಾಗೂ ಅವರ ಕುಟುಂಬದ ಎಂಟು ಮಂದಿಯನ್ನು ರಕ್ಷಿಸಿದರು.

ಇಬ್ರಾಹಿಂ ಅವರು 12X50 ಅಡಿ ವಿಸ್ತೀರ್ಣದ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ನೆಲ ಮಹಡಿಯಲ್ಲಿ ಪೀಠೋಪಕರಣ ಮಳಿಗೆ ಇದ್ದರೆ, 1ನೇ ಮಹಡಿಯಲ್ಲಿ ಮದರಸಾ ಹಾಗೂ 2ನೇ ಮಹಡಿಯಲ್ಲಿ ಮಾಲೀಕರ ಮನೆ ಇದೆ. ಮಧ್ಯಾಹ್ನ 12.45ಕ್ಕೆ ಪೀಠೋಪಕರಣ ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯು ಮದರಸಾ ಹಾಗೂ ಮಾಲೀಕರ ಮನೆಗೂ ವ್ಯಾಪಿಸಿತು.

ಪ್ರಾರ್ಥನೆಗೆ ತೆರಳಿದರು: ಕಾರ್ಮಿಕರು ಹಾಗೂ ಮಕ್ಕಳು ಶುಕ್ರವಾರದ ಪ್ರಾರ್ಥನೆಗೆಂದು ಮಧ್ಯಾಹ್ನ 12.30ಕ್ಕೆ ಮಸೀದಿಗೆ ತೆರಳಿದ್ದರು. ಇಬ್ರಾಹಿಂ ಸಹ ಪ್ರಾರ್ಥನೆಗೆ ಹೋಗಲು ಮೆಟ್ಟಿಲು ಇಳಿದು ಬರುತ್ತಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಅವರತ್ತ ಚಾಚಿಕೊಂಡಿದ್ದರಿಂದ ಹೆದರಿ ಮನೆಯೊಳಗೆ ಓಡಿದರು.
ದಟ್ಟ ಹೊಗೆ ಕಂಡ ಆಟೊ ಚಾಲಕರು, ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಮೊದಲು ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ, ಇಬ್ರಾಹಿಂ ಕುಟುಂಬವನ್ನು ರಕ್ಷಿಸಿ ಹೊರ ತಂದರು. ಕ್ಷಣ ಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದರಿಂದ ಮತ್ತೆ ಏಳು ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡರು.

ಕಿಷ್ಕಿಂಧೆಯಂತಿದ್ದ ರಸ್ತೆಯಲ್ಲಿರುವ ಆ ಕಟ್ಟಡದ ಬಳಿ ಹೋಗಲು ಅಗ್ನಿಶಾಮಕ ವಾಹನಗಳು  ಪ್ರಯಾಸ ಪಡಬೇಕಾಯಿತು. ಆ ಸಣ್ಣ ರಸ್ತೆಯಲ್ಲೇ ನೂರಾರು ಜನ ಜಮಾಯಿಸಿ, ಕಾರ್ಯಾಚರಣೆಗೆ ಅಡ್ಡಿಪಡಿಸಿದರೆಂದು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು.
ಕೊನೆಗೂ ವಾಹನಗಳು ಕಟ್ಟಡದ ಬಳಿ ಹೋಗಲು ಸಾಧ್ಯವಾಗಲಿಲ್ಲ. ಆಗ, ನೂರು ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡ ಸಿಬ್ಬಂದಿ, ಉದ್ದುದ್ದ ಪೈಪ್‌ಗಳ ಮೂಲಕ ನೀರು ಹಾಯಿಸಿ ಅಗ್ನಿ ನಂದಿಸಲು ಪ್ರಾರಂಭಿಸಿದರು. ವಿಪತ್ತು ನಿರ್ವಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಯೂ ಕಾರ್ಯಾಚರಣೆಗೆ ಕೈಜೋಡಿಸಿದರು.
ಮಧ್ಯಾಹ್ನ 2.30ರ ಸುಮಾರಿಗೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತು. ನಂತರ ಸಿಬ್ಬಂದಿ ಒಳಗೆ ಹೋದಾಗ ಮಳಿಗೆಯ ಶೌಚಾಲಯದಲ್ಲಿ ಮೆಹ್ತಾಬ್ ಸುಟ್ಟು ಕರಕಲಾಗಿದ್ದರು. ಮದರಸಾದಲ್ಲಿ ಹಫೀಜ್ ಮೃತದೇಹವಿತ್ತು. ಸಂಜೆ 5.30ಕ್ಕೆ  ಬೆಂಕಿ ಸಂಪೂರ್ಣ ಆರಿದ್ದರಿಂದ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು.

30 ಮಕ್ಕಳು ಕಲಿಯುತ್ತಾರೆ
‘ಮಧ್ಯಾಹ್ನ 12.30ರವರೆಗೆ ಮದರಸಾದಲ್ಲಿ 30 ಮಕ್ಕಳಿದ್ದರು. ಶುಕ್ರವಾರವಲ್ಲದೆ, ಬೇರೆ ಯಾವುದೇ ದಿನದಲ್ಲಿ ಈ ದುರ್ಘಟನೆ ಸಂಭವಿಸಿದ್ದರೆ ಅಷ್ಟೂ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು. ನನ್ನ 12 ವರ್ಷದ ಮಗ ಕೂಡ, ನಿತ್ಯ ಎರಡು ತಾಸು ಈ ಮದರಸಾದಲ್ಲಿ ಕಲಿಯುತ್ತಿದ್ದ. ಮಕ್ಕಳನ್ನು ಪ್ರಾರ್ಥನೆಗೆ ಕಳುಹಿಸಿದ ಮೌಲ್ವಿ, ತಮ್ಮ ಜೀವ ತೆತ್ತರು’ ಎಂದು ತಸ್ಲೀಮಾ ಭಾನು ದುಃಖತಪ್ತರಾದರು.

ಪ್ರಾರ್ಥನೆಗೆ ಕುಳಿತಲ್ಲೇ ಕರಕಲಾದ ಮೌಲ್ವಿ

ಹಫೀಜ್ ಅವರು ಯಾವಾಗಲೂ ಪ್ರಾರ್ಥನೆ ಮಾಡುವ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಕೆಳಗಡೆ ಚಾಪೆ ಸಹ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದ ಹಫೀಜ್, ಎರಡು ವರ್ಷಗಳ ಹಿಂದಷ್ಟೇ ಸೂಫಿಯಾ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ನೂಮನ್ ಎಂಬ ಒಂದು ವರ್ಷದ ಮಗುವಿದೆ. ವರ್ಷದ ಹಿಂದೆ ನಗರಕ್ಕೆ ಬಂದು ಅವರು, ಕಟ್ಟಡದಲ್ಲಿರುವ ‘ಅರೇಬಿಯಾ ಜಿಯಾ–ಉಲ್–ಕುರಾನ್’ ಮದರಸಾದಲ್ಲಿ ಮೌಲ್ವಿಯಾಗಿದ್ದರು.
ಇನ್ನು ಕಾರ್ಮಿಕ ಮೆಹ್ತಾಬ್, ಎಂಟು ತಿಂಗಳ ಹಿಂದೆ ಜಬೀನಾ ಎಂಬುವರನ್ನು ಮದುವೆಯಾಗಿದ್ದರು. ಪತ್ನಿಯನ್ನು ಗ್ರಾಮದಲ್ಲೇ ಬಿಟ್ಟು, ಕೂಲಿಗಾಗಿ ನಗರಕ್ಕೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಮೆಹ್ತಾಬ್ ಮೃತದೇಹ ಗುರುತಿಸುವುದು ಕಷ್ಟವಾಯಿತು. ಪ್ರಾರ್ಥನೆಗೆ ಹೋಗಿದ್ದ ಎಲ್ಲ ಕಾರ್ಮಿಕರು ವಾಪಸಾದಾಗ, ಮೆಹ್ತಾಬ್ ಇರಲಿಲ್ಲ. ಹೀಗಾಗಿ, ಮೃತಪಟ್ಟಿರುವುದು ಅವರೇ ಎಂಬುದು ಖಚಿತವಾಯಿತು. ಅದೇ ಮಳಿಗೆಯಲ್ಲಿ ಕೆಲಸ ಮಾಡುವ ಅವರ ಅಣ್ಣ ಮಹಮದ್ ಅತಾವುಲ್ಲಾ ಅವರು, ಮೃತದೇಹದ ಕಿವಿಯಲ್ಲಿದ್ದ ಓಲೆಯ ನೆರವಿನಿಂದ ಗುರುತು ಹಿಡಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಸಕ ಜಮೀರ್ ಅಹಮದ್ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಹಫೀಜ್ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟರು. ಮೆಹ್ತಾಬ್ ಶವವನ್ನು ದೆಹಲಿಗೆ ಕೊಂಡೊಯ್ಯಲಾಗಿದೆ.

ಕ್ಷಣ ಕ್ಷಣ…

12:30 ಪ್ರಾರ್ಥನೆಗೆ ತೆರಳಿದ ಮಕ್ಕಳು ಹಾಗೂ ಕಾರ್ಮಿಕರು
12.45 ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ
12.55 ನಿಯಂತ್ರಣ ಕೊಠಡಿಗೆ ಕರೆ
1.04 ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕ ವಾಹನಗಳು
1.30 ಕಟ್ಟಡದ ಮಾಲೀಕ ಸೇರಿ ಎಂಟು ಮಂದಿ ರಕ್ಷಣೆ
2.15 ಮತ್ತೆ ಏಳು ವಾಹನಗಳು ದೌಡು
2.30 ಮೌಲ್ವಿ, ಕಾರ್ಮಿಕನ ದೇಹ  ಪತ್ತೆ
5.30 ಕಾರ್ಯಾಚರಣೆ ಅಂತ್ಯ

ಸಿಬ್ಬಂದಿಗೂ ಗಾಯ

ಮಳಿಗೆಯಲ್ಲಿ ಶಾರ್ಟ್‌ ಸರ್ಕೀಟ್ ಉಂಟಾಗಿ ಈ ದುರಂತ ಸಂಭವಿಸಿರಬಹುದು. ಘಟನೆ ಸಂಬಂಧ ಅತಾವುಲ್ಲಾ ದೂರು ಕೊಟ್ಟಿದ್ದು, ಅಜಾಗರೂಕತೆಯಿಂದ ಬೇರೆಯವರ ಪ್ರಾಣಕ್ಕೆ ಸಂಚಕಾರ ತಂದ ಆರೋಪದಡಿ (ಐಪಿಸಿ 337, 338, 285 ಹಾಗೂ 304ಎ) ಕಟ್ಟಡದ ಮಾಲೀಕ ಇಬ್ರಾಹಿಂ ವಿರುದ್ಧ ಜಗಜೀವನ್‌ರಾಂನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿ ಹನುಮೇಶ್ ಎಂಬುವರೂ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಅವರು
ತಿಳಿಸಿದರು.

No Comments

Leave A Comment