Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಠಾಣೆಯಲ್ಲೇ ವಿಷ ಸೇವಿಸಿದ್ದ ರೈತ ಸಾವು;ಗುಂಡ್ಲುಪೇಟೆಯಲ್ಲಿ ನಿಷೇಧಾಜ್ಞೆ

ಗುಂಡ್ಲುಪೇಟೆ:  ಜಮೀನಿನ ಎಲ್ಲೆ ಗುರುತಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದಾಗ ಪೊಲೀಸ್‌ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೋರ್ವ ಚಿಕಿತ್ಸೆ ಫ‌ಲಕಾರಿಯಾಗದೆ ಸಾವಿಗೀಡಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಉಪ ಚುನಾವಣಾ ಕಣವಾಗಿರುವ ಕ್ಷೇತ್ರದಲ್ಲಿ ರೈತನ ಸಾವು ಖಂಡಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ  ಮಂಗಳವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕಗ್ಗಳದಹುಂಡಿ ಗ್ರಾಮದ ವಾಸಿ ರೈತ ನಾಗೇಶ್‌ (30) ಎಂಬುವವರೇ ಮೃತರು. ಇವರ ಜಮೀನಿನ ಸಮೀಪ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ನಿರ್ಮಾಣವಾಗುತ್ತಿತ್ತು. ಈ ಸಂಬಂಧ ಎಲ್ಲೆ ಗುರುತಿಸುವವರೆಗೂ ಇಲ್ಲಿಗೆ ತಂತಿ ಬೇಲಿ ಹಾಕಬಾರದು ಎಂದು ಕಂಪನಿಯವರಿಗೆ ನಾಗೇಶ್‌ ತಿಳಿಸಿದ್ದರು. ಈ ಬಗ್ಗೆ ತಂತಿ ಬೇಲಿಹಾಕಲು ನಾಗೇಶ್‌ ತೊಂದರೆ ನೀಡುತ್ತಿದ್ದಾರೆಂದು ಚೀನಾ ಕಂಪನಿಯವರು ತೆರಕಣಾಂಬಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾ.24ರಂದು ತಾಲೂಕಿನ ತೆರಕಣಾಂಬಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಮನನೊಂದ ನಾಗೇಶ್‌ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತೆಗೆ ಪ್ರಯತ್ನಿಸಿದ್ದರು.

ಕೂಡಲೇ ಪೊಲೀಸರು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ ಸೋಮವಾರ ಸಂಜೆ 4ರ ಸಮಯದಲ್ಲಿ ಚಿಕಿತೆ ಫ‌ಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ತನ್ನ ತಮ್ಮನಿಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರ್ಖಾನೆಯ ವಿರುದ್ಧ ಸೋದರ ಮಹೇಶ್‌ ತೆರಕಣಾಂಬಿ ಠಾಣೆಯಲ್ಲಿ ದೂರು ನೀಡಿದ್ದರು.

ಗುಂಡ್ಲುಪೇಟೆಯಲ್ಲಿ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಎಸ್‌ಪಿ ಪ್ರದೀಪ್‌ ಕುಮಾರ್‌ ಜೈನ್‌  ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

No Comments

Leave A Comment