Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಷಿ ವಿರುದ್ಧ ಆರೋಪದ ಕುರಿತು “ಸುಪ್ರೀಂ” ವಿಚಾರಣೆ

ನವದೆಹಲಿ: ದಶಕಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ವಿವಿಧ ಮುಖಂಡರ ವಿರುದ್ಧದ  ಆರೋಪಗಳಿಗೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ ನಡೆಸಲಿದೆ.

ಈ ಹಿಂದಿನ ವಿಚಾರಣೆ ವೇಳೆ ಅಂದರೆ ಮಾರ್ಚ್ 6ರಂದು ನಡೆದಿದ್ದ ವಿಚಾರಣೆ ವೇಳೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರ ವಿರುದ್ಧದ  ಆರೋಪಗಳನ್ನು  ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ದೇಶಾದ್ಯಂತ ತೀವ್ರ ಹಿಂಸಾಚಾರ ಮತ್ತು ಕೋಮುಗಲಭೆಗೆ ಕಾರಣವಾಗಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ಎಲ್ ಕೆ  ಅಡ್ವಾಣಿ, ಆರ್ ಎಸ್ ಎಸ್ ಮುಖಂಡ ಮುರಳಿ ಮನೋಹರ್ ಜೋಷಿ, ಕೇಂದ್ರ ಸಚಿವೆ ಉಮಾಭಾರತಿ ಅವರ ವಿರುದ್ಧದ ಷಡ್ಯಂತ್ರ ಆರೋಪವನ್ನು ತಾಂತ್ರಿಕ ಕಾರಣಗಳಿಂದಾಗಿ ಕೈಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್  ಹೇಳಿತ್ತು. ಅಲ್ಲದೆ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದಕ್ಕೂ ನ್ಯಾಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು.

ಹೀಗಾಗಿ ಇಂದು ನಡೆಯುವ ವಿಚಾರಣೆ ಮಹತ್ವ ಪಡೆದಿದ್ದು, ಪ್ರಕರಣದಲ್ಲಿ ಬಿಜೆಪಿ ಮುಖಂಡರಿಗೆ ರಿಲೀಫ್ ಸಿಗಲಿದೆಯೇ ಅಥವಾ ಮತ್ತೆ ವಿಚಾರಣೆ ಎದುರಿಸ ಬೇಕಾಗುತ್ತದೆಯೇ ಎಂಬುದು ಇಂದಿನ ವಿಚಾರಣೆಯಿಂದ ತಿಳಿದುಬರಲಿದೆ.  ಈ ಹಿಂದೆ ಇದೇ ಪ್ರಕರಣ ಸಂಬಂಧ ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 12ಕ್ಕೂ ಹೆಚ್ಚು ಮುಖಂಡರ ವಿರುದ್ಧ ಸಿಬಿಐ ದಾಖಲಿಸಿದ್ದ ಷಡ್ಯಂತ್ರ ಆರೋಪವನ್ನು ಅಲಹಾಬಾದ್ ನ್ಯಾಯಾಲಯ ಕೈಬಿಟ್ಟಿತ್ತು.

ಹೀಗಾಗಿ ಅಲಹಾಬಾದ್  ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಪ್ರಶ್ನಿಸಿದ್ದು, ಈ ಹಿಂದೆ ಇದರ ವಿಚಾರಣೆ ನಡೆಸಿದ ನ್ಯಾಯಾಲಯ, “ತಾಂತ್ರಿಕವಾಗಿ ಪ್ರಕರಣವನ್ನು ಪರಿಶೀಲಿಸಿದರೆ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ,  ಉಮಾಭಾರತಿ, ವಿನಯ್ ಕಟಿಯಾರ್ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ ಹತ್ತಕ್ಕೂ ಅಧಿಕ ಮುಖಂಡರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ. ಹೀಗಾಗಿ ವಿಚಾರಣಾಧೀನ ನ್ಯಾಯಾಲಯವನ್ನು ಜಂಟಿ ವಿಚಾರಣೆ  ನಡೆಸುವಂತೆ ಕೇಳಲಾಗುತ್ತದೆ ಎಂದು ಹೇಳಿತ್ತು.

ಅಂತೆಯೇ ಮುಂದಿನ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಅಂದರೆ ಇಂದಿಗೆ ಮುಂದೂಡುವುದಾಗಿಯೂ ಮತ್ತು ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 13 ಮಂದಿ ನಾಯಕರ ವಿರುದ್ಧದ  ಆರೋಪಗಳನ್ನು ಕೈಬಿಡಬೇಕೇ ಅಥವಾ ಇಲ್ಲವೇ ಎಂಬುದರ ಕುರಿತು ನಿರ್ಣಯ ಕೈಗೊಳ್ಳುವುದಾಗಿಯೂ ಕೋರ್ಟ್ ಹೇಳಿತ್ತು.

No Comments

Leave A Comment