Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ರಾತ್ರಿಯಿಡೀ ರಸ್ತೆಯಲ್ಲೇ ಕಳೆದ ಅಂಗನವಾಡಿ ಕಾರ್ಯಕರ್ತೆಯರು!

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಆಹೋರಾತ್ರಿ ಧರಣಿಗೆ ಮುಂದಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೋಮವಾರ ರಾತ್ರಿಯಿಡೀ ರಸ್ತೆಯಲ್ಲೇ ಮಲಗಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಪ್ರತಿಭಟನಾನಿರತ ಕಾರ್ಯಕರ್ತೆಯರು ಮೌರ್ಯ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ರಸ್ತೆಯ ಬದಿಯಲ್ಲಿ ಮಲಗಿದ್ದು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

ಸೋಮವಾರ ಸಂಜೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ನೆಪಮಾತ್ರಕ್ಕೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಾಪಸ್‌ ಹೋದ ಬಳಿಕ ತೀವ್ರಗೊಂಡಿರುವ ಪ್ರತಿಭಟನಾಕಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

 ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟಿಸಲು ರಾಜಧಾನಿಗೆ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದು ಪರದಾಡಬೇಕಾಗಿದೆ.

 ಸರ್ಕಾರ ವೇತನ ಹೆಚ್ಚಳದ ಆದೇಶ ಹೊರಡಿಸಿರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.

ದೂರದ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಗಳವರೆಗೆ ಒಟ್ಟಾರೆ 15 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆ  ನಡೆಸುತ್ತಿದ್ದಾರೆ.

ಇಂದು ಮತ್ತಷ್ಟು ಜನ ಕಾರ್ಯಕರ್ತೆಯರು ಆಗಮಿಸಿ ಪ್ರತಿಭಟನೆಗೆ ಮತ್ತಷ್ಟು ಸಾಥ್‌ ನೀಡುವ ಸಾಧ್ಯತೆಯಿದೆ.

“ಊಟವೂ.. ಬೇಡ ಸ್ನಾನವೂ ಬೇಡ.. ವೇತನ ಹೆಚ್ಚಳ ಬೇಡಿಕೆ ಈಡೇರುವ ತನಕ ಪ್ರಾಣ ಹೋದರೂ ಸರಿ ಜಾಗ ಬಿಟ್ಟು ಕದಲುವುದಿಲ್ಲ. ಸರ್ಕಾರದ ಬಿಗಿಪಟ್ಟೋ ಅಥವಾ ಮಹಿಳಾ ಕಾರ್ಮಿಕರ ರಟ್ಟೆ ಶಕ್ತಿಯೋ ನಿರ್ಧಾರವಾಗಿ ಬಿಡಲಿ,ಎಂದು ಕಾರ್ಯಕರ್ತೆಯರು ಬಿಗಿ ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ… 

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳ್ಳಂಬೆಳಗ್ಗೆ ಭೇಟಿ ನೀಡಿ  ಹೋರಾಟಕ್ಕೆ ಬೆಂಬಲ ನೀಡಿದರು. ನಿಮ್ಮ ಗೋಳಿಗೆ ನಾನು ಕ್ಷಮೆ ಯಾಚಿಸುತ್ತೇನೆ ಎಂದರು. ನಿಮ್ಮೆಲ್ಲರಿಗೂ ನಾನು ತಿಂಡಿ, ಊಟದ  ವ್ಯವಸ್ಥೆ ಮಾಡುತ್ತೇನೆ ಎಂದಾಗ ನಿರಾಕರಿಸಿದ ಕಾರ್ಯಕರ್ತೆಯರು ನಮಗೆ ಶಾಶ್ವತ ಊಟ ಕೋಡಿ ಎಂದು ಆಗ್ರಹಿಸಿದರು.

ನೀರು, ಶೌಚಾಲಯಕ್ಕಾಗಿ ಪರದಾಟ…
ಸಾವಿರಾರು ಸಂಖ್ಯೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರು ರಾತ್ರಿ ಯಿಡೀ ಅರೆ ನಿದ್ದೆ ಯಿಂದ ಎದ್ದ ಬಳಿಕ ಬೆಳಗ್ಗೆ ಮುಖ ತೊಳೆಯಲೂ ನೀರಿಲ್ಲದೆ ಪರದಾಡಬೇಕಾಯಿತು. ಬೆರಳೆಣಿಕೆಯ ಶೌಚಾಲಯಗಳಿದ್ದ ಕಾರಣ ಇನ್ನಷ್ಟು ಪರದಾಡಬೇಕಾಯಿತು.

No Comments

Leave A Comment