Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಸಿಡಿಮದ್ದು ತಯಾರಿಕೆ ಸಂದರ್ಭ ಸ್ಫೋಟ, ಇಬ್ಬರು ಸಾವು, ನಾಲ್ವರಿಗೆ ಗಾಯ

ವಿಟ್ಲ,: ಸಿಡಿಮದ್ದುಗಳನ್ನು ತಯಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದು ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಪಕ್ಕದ ಮನೆಯ ನಾಲ್ವರು ಗಾಯಗೊಂಡ ಘಟನೆ ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟ್ಟು ನೂಜಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಕಂಬಳಬೆಟ್ಟು ನೂಜಿ ನಿವಾಸಿ ಅಬ್ದುಲ್‌ ಅಜೀಮ್‌ (24) ಮತ್ತು ಸುಂದರ ಪೂಜಾರಿ ಕಾರ್ಯಾಡಿ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಕ್ಕದ ಮನೆಯ ಅಸೀಮಾ (39), ಪುಷ್ಪಾವತಿ (48), ಸುಜಾತಾ (26), ಸಾತ್ವಿನ್‌ (3) ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗರ್ನಾಲ್‌ ಸಾಹೇಬರ ಮನೆ
ಸುತ್ತಮುತ್ತಲಿನ ಅನೇಕ ಜಾತ್ರೆ ಮತ್ತು ಇನ್ನಿತರ ಸಮಾರಂಭಗಳಿಗೆ ಸಿಡಿಮದ್ದು ಒದಗಿಸುವ “ಗರ್ನಾಲ್‌ ಸಾಹೇಬ’ರ ಮನೆಯಲ್ಲೇ ಈ ಘಟನೆ ಸಂಭವಿಸಿದೆ. ಇಬ್ರಾಹಿಂ ಸಾಹೇಬ್‌ ಅವರು ಗರ್ನಾಲ್‌ ಸಾಹೇಬರೆಂದೇ ಪರಿಸರದಲ್ಲಿ ಚಿರಪರಿಚಿತರು. ಅವರು ಒಂದು ವರ್ಷದ ಹಿಂದೆ ವೃದ್ಧಾಪ್ಯದಿಂದ ನಿಧನ ಹೊಂದಿದ್ದು, ಪ್ರಸ್ತುತ ಅವರ ಪುತ್ರ ಅಬ್ದುಲ್‌ಶುಕೂರ್‌ ಎನ್‌. ಅವರು ಸಿಡಿಮದ್ದು ತಯಾರಿಕೆ ಘಟಕ ನಡೆಸುತ್ತಿದ್ದಾರೆ.

ಅಬ್ದುಲ್‌ಶುಕೂರ್‌ ಎನ್‌. ಅವರ ತೋಟದಲ್ಲಿ ಈ ಸಿಡಿಮದ್ದು ತಯಾರಿಕಾ ಘಟಕಕ್ಕೆ ಅನುಮತಿ ಇದೆ. ಅಲ್ಲಿ ತಯಾರಿಸಿ, ಅವುಗಳನ್ನು ಮನೆ ಪಕ್ಕದ ಎತ್ತರ ಪ್ರದೇಶದಲ್ಲಿ ತಂದಿರಿಸಲಾಗಿತ್ತು. ಕಾರ್ಮಿಕ ಸುಂದರ ಪೂಜಾರಿ ಮತ್ತು ಶುಕೂರ್‌ ಅವರ ಭಾವ ಅಜೀಮ್‌ ಅವರು ಅವುಗಳನ್ನು ತಯಾರಿಸುವ ರಾಸಾಯನಿಕ ಪದಾರ್ಥಗಳ ಬಳಕೆಯಲ್ಲಿ ಏರುಪೇರಾಗಿ ಸ್ಫೋಟಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಮಿಶ್ರಣ ಮಾಡುವ ಸಂದರ್ಭ ಸ್ಫೋಟವಾಯಿತೇ ?
ಮನೆಯ ಪಕ್ಕದ ಅಂಗಳದಲ್ಲಿ ಸಿಮೆಂಟ್‌ ಹಾಕಿದ ಒಂದು ಭಾಗದಲ್ಲಿ ಗಂಧಕ ಹಾಗೂ ಅಮೋನಿಯಮ್‌ ನೈಟ್ರೇಟ್‌ ಅನ್ನು ಮಿಶ್ರಣ ಮಾಡುತ್ತಿದ್ದ ಸಂದರ್ಭ ಬಿಸಿಲಿನ ಧಗೆಗೆ, ಲೆಕ್ಕಾಚಾರ ತಪ್ಪಿ ಸ್ಫೋಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಶುಕೂರ್‌ ಅವರ ತೋಟದಲ್ಲಿ ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ಕಾಯ್ದಿರಿಸಲಾಗಿದೆ. ಆದರೆ ಮನೆಯ ಹಿಂಭಾಗದಲ್ಲಿ ಸಿಡಿಮದ್ದು ತಯಾರಿಸುತ್ತಿದ್ದುದು ಯಾಕೆ ಎಂದು ತಿಳಿದುಬಂದಿಲ್ಲ. ಈ ಘಟಕದಲ್ಲಿ ಒಂದು ಬಾರಿಗೆ 15 ಕೆ.ಜಿ. ಗನ್‌ ಪೌಡರ್‌ ತಂದಿರಿಸಲು ಅನುಮತಿ ಇದೆ. ಆದರೆ ಇಲ್ಲಿ ಒಟ್ಟು ಎಷ್ಟು ಕೆ.ಜಿ. ಗನ್‌ ಪೌಡರ್‌ ಸಂಗ್ರಹಿಸಲಾಗಿತ್ತು ಎಂಬ ದಾಖಲೆ ಸಿಗಲಿಲ್ಲ.

ಮನೆಯಿಂದ ಸಿಡಿದುಬಿಟ್ಟ ಬಾಲಕ
ಸುಮಾರು ನೂರು ಮೀಟರ್‌ ದೂರದಲ್ಲಿ ಪುಷ್ಪಾವತಿ ಅವರ ಮನೆಯಿದೆ. ಅಲ್ಲಿ ತಾಯಿ ಸುಜಾತಾ ಮತ್ತು ಸಾತ್ವಿನ್‌ ಇದ್ದರು. ಸ್ಫೋಟ ಸಂಭವಿಸಿದಾಗ ಮೂರು ವರ್ಷದ ಸಾತ್ವಿನ್‌ ಮನೆಯಿಂದ ಹಲವು ಮೀಟರ್‌ ದೂರಕ್ಕೆ ಎಸೆಯಲ್ಪಟ್ಟಿದ್ದಾನೆ. ಇದರಿಂದ ಆತನ ಹಣೆಗೆ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.

ಛಿದ್ರಗೊಂಡ ದೇಹ
ಸ್ಫೋಟದ ತೀವ್ರತೆಗೆ ಇಬ್ಬರು ಛಿದ್ರವಾಗಿ ಎಸೆಯಲ್ಪಟ್ಟಿದ್ದಾರೆ. ಸುಂದರ ಪೂಜಾರಿ ಅವರ ದೇಹದ ಭಾಗ 200 ಮೀಟರ್‌ ದೂರದಲ್ಲಿ ಬಿದ್ದಿತ್ತು ಮತ್ತು ಅವರ ಎರಡು ಕಾಲುಗಳು ಇನ್ನೂ ಪತ್ತೆಯಾಗಿಲ್ಲ. ಅಜೀಮ್‌ ಅವರ ಛಿದ್ರ ದೇಹವು ನೂರು ಮೀಟರ್‌ ದೂರದಲ್ಲಿ ಶುಕೂರ್‌ ಅವರ ಮನೆಯ ಮಾಡಿಗೆ ಎಸೆಯಲ್ಪಟ್ಟಿದೆ. ಶುಕೂರ್‌ ಅವರ ಹಂಚಿನ ಮನೆ, ಪಕ್ಕದ ಮೂರು ಕೊಟ್ಟಿಗೆಯ ಛಾವಣಿ ಸೇರಿ ಸಂಪೂರ್ಣ ಛಿದ್ರವಾಗಿದೆ. ಪಕ್ಕದ ಮನೆಯ ಛಾವಣಿ ಸಿಡಿದುಬಿಟ್ಟಿದೆ.

ಕಬಕ, ವಿಟ್ಲದಲ್ಲಿ  ಢವ ಢವ
ಸಂಜೆ ಗಂಟೆ 6.25ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ಸದ್ದು ಸುಮಾರು 10 ಕಿ.ಮೀ. ದೂರದ ವರೆಗೂ ಕೇಳಿದೆ. ಪುತ್ತೂರು ತಾಲೂಧಿಕಿನ ಕಬಕ ಮತ್ತು ವಿಟ್ಲದಲ್ಲಿನ ಕೆಲವರಿಗೂ ಸ್ಫೋಟದ ಸದ್ದು ಕೇಳಿದೆ. ಕೆಲವರು ಸಿಡಿಲು ಎಂದು ಊಹಿಸಿದರೆ ಮತ್ತೆ ಕೆಲವರು ಟ್ರಾನ್ಸ್‌ಫಾರ್ಮರ್‌ ಸ್ಫೋಟ ಎಂದು ಊಹಿಸಿದರು. ಕುಂಡಡ್ಕದಲ್ಲಿ ಲೈನ್‌ಮನ್‌ ಒಬ್ಬರು ಕಂಬದಲ್ಲಿ ವಿದ್ಯುತ್‌ ಸಂಪರ್ಕ ಸರಿಪಡಿಸುತ್ತಿದ್ದಾಗ ಇಡೀ ಕಂಬವೇ ಅಲುಗಾಡಿದೆ ಎಂದು ತಿಳಿಸಿದ್ದಾರೆ. ಕೆಲವರು ಭೂಕಂಪ ಎಂದು ಹೆದರಿದ್ದರೆ, ಮಕ್ಕಳು ಭಯದಿಂದ ಕೂಗಿಕೊಂಡಿದ್ದಾರೆ. ಹಲವು ಮನೆಯವರು ಓಡಿ ಹೊರ ಓಡಿದ್ದಾರೆ.

ಸಾವಿರಾರು ಮಂದಿ ಸೇರಿದ್ದರು
ಕೆಲವೇ ನಿಮಿಷಗಳಲ್ಲಿ ಈ ಸ್ಫೋಟದ ಸುದ್ದಿ ಪಸರಿಸಿಯಾಗಿತ್ತು. ದೂರಧಿದೂರದ ಊರುಗಳಿಂದ ಸ್ಥಳಕ್ಕಾಗಮಿಸಿ, ಪ್ರತ್ಯಕ್ಷವಾಗಿ ಮಾಹಿತಿ ಪಡೆದುಧಿಕೊಳ್ಳುತ್ತಿದ್ದರು. ಹೀಗೆ ಆಗಮಿಸಿದ ನಾಗರಿಕರು ನೂರಾರು ಮಂದಿ ಸ್ಫೋಟ ಸಂಭವಿಸಿದ ಜಾಗದಲ್ಲೇ ನಡೆದಾಡುತ್ತಿದ್ದರು. ಪೊಲೀಸ್‌ ಅಧಿಕಾರಿಗಳು ಸಾರ್ವಜನಿಕರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಸ್ಥಳಕ್ಕೆ ತೆರಳುವ ಅವಸರದಲ್ಲಿ ತಮ್ಮ ವಾಹನಗಳನ್ನು ರಸ್ತೆ ಮಧ್ಯೆಯೇ ಇಟ್ಟು ತೆರಳಿದ್ದರಿಂದ ರಸ್ತೆಯೇ ಬ್ಲಾಕ್‌ ಆಗಿತ್ತು.

No Comments

Leave A Comment