Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ವಿಧಾನಸಭಾಧ್ಯಕ್ಷ ಕೋಳಿವಾಡ ಕುಟುಂಬಕ್ಕೆ 4 ನಿವೇಶನ ಭಾಗ್ಯ

ಬೆಂಗಳೂರು: ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ ನಾಲ್ಕು ಹೆಣ್ಣುಮಕ್ಕಳು ನಿಯಮ ಉಲ್ಲಂಘಿಸಿ ನಿವೇಶನ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಯಲಹಂಕ ಸಮೀಪದ ಗಸ್ತಿ ಕೆಂಪನಹಳ್ಳಿ ಮತ್ತು ಅಗ್ರಹಾರ ಗ್ರಾಮಗಳಲ್ಲಿ ‘ಕರ್ನಾಟಕ ವಿಧಾನಮಂಡಲ ಕಾರ್ಯಾಲಯದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ’ ಸದಸ್ಯರಿಗಾಗಿ ಬಡಾವಣೆ ನಿರ್ಮಿಸಿದೆ.

‘ಬೆಂಗಳೂರಿನಲ್ಲಿ ಒಂದು ಸೂರು ಕಟ್ಟಿಕೊಳ್ಳಬೇಕು ಎಂಬ ಕನಸಿನಲ್ಲಿ ವಿಧಾನಮಂಡಲ ಸಚಿವಾಲಯದ ಹಲವರು ಉಳಿತಾಯದ ಹಣದಲ್ಲಿ ಹಣ ಕಟ್ಟಿದ್ದೆವು. ಇಷ್ಟು ವರ್ಷ ನಿವೇಶನ ಹಂಚಿಕೆ ಮಾಡದಿರುವುದನ್ನು ಪ್ರಶ್ನಿಸಿ ಕೆಲವು ಸದಸ್ಯರು ಹೈಕೋರ್ಟ್‌ಗೂ ಹೋಗಿದ್ದರು. ಅವರೆಲ್ಲರಿಗೂ ನಿವೇಶನ ಹಂಚಿಕೆಯಾಗಿಲ್ಲ. ಹಾಗಿದ್ದರೂ ಕೋಳಿವಾಡ  ಸಭಾಧ್ಯಕ್ಷರಾದ ಬಳಿಕ ತಮ್ಮ ಪ್ರಭಾವ ಬಳಸಿ  ಪುತ್ರಿಯರಿಗೆ ನಾಲ್ಕು ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಿಂದ ನಮಗೆಲ್ಲಾ ಅನ್ಯಾಯವಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಂಘದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡಾವಣೆ ನಿರ್ಮಿಸಲು 2004–05ರಲ್ಲಿ  ವಂತಿಗೆ ಸಂಗ್ರಹಿಸಲಾಗಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಕ್ಷೆಗೆ ಅನುಮೋದನೆ ನೀಡದೇ ಇದ್ದುದರಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು. ಕೋಳಿವಾಡ ಸಭಾಧ್ಯಕ್ಷರಾದ ಬಳಿಕ  ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಅಡಚಣೆ ನಿವಾರಿಸಿದರು. ಹೀಗಾಗಿ 120 ಜನರಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಯಿತು’ ಎಂದು ಸಂಘದ ಉಪಾಧ್ಯಕ್ಷ ಹಾಗೂ ಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಕೆ. ರಾಮಣ್ಣ  ತಿಳಿಸಿದರು.

ವಿವಾದವೇನು?: ನಿವೇಶನಕ್ಕೆ ಕೋಳಿವಾಡ ಪುತ್ರಿಯರು ಅರ್ಜಿ ಸಲ್ಲಿಸುವಾಗ ಅವರೆಲ್ಲಾ ಅವಲಂಬಿತರಾಗಿದ್ದರು. ಹಾಗಾಗಿ ಎಲ್ಲರ ಹೆಸರಿನ ಮುಂದೆ ಕೋಳಿವಾಡ ಎಂದೇ ಉಲ್ಲೇಖಿಸಲಾಗಿತ್ತು. ಗೃಹ ನಿರ್ಮಾಣ ಸಹಕಾರ ಸಂಘ ಅಥವಾ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಅನುಸಾರ, ರಾಜ್ಯದ ಯಾವುದೇ ಭಾಗದಲ್ಲಿ  ಸರ್ಕಾರ ಅಥವಾ ಸಹಕಾರ ಸಂಘದಿಂದ  ನಿವೇಶನ ಪಡೆದಿದ್ದರೆ ಮತ್ತೊಂದು ನಿವೇಶನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ತಮ್ಮ ಮಕ್ಕಳ ಹೆಸರಿನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮೊದಲೇ ಕೆ.ಬಿ. ಕೋಳಿವಾಡ ಯಲಹಂಕದ ಬಳಿ ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ಪಡೆದು ಮನೆ ಕಟ್ಟಿದ್ದರು. ಬಳಿಕ ಮನೆಯನ್ನು ಕೆಡವಿ ಆ ಜಾಗದಲ್ಲಿ ‘ಪ್ರಖ್ಯಾತಿ ಕನ್ವೆನ್‌ಷನ್‌ ಅಂಡ್ ಪಾರ್ಟಿ ಹಾಲ್‌’ ಕಟ್ಟಿಸಿದ್ದಾರೆ. ಕೋಳಿವಾಡ ಗೃಹಮಂಡಳಿ ನಿವೇಶನ ಪಡೆದಿದ್ದರಿಂದ ಅವಲಂಬಿತರಾಗಿದ್ದ  ಅವರ ಮಕ್ಕಳು ಒಂದೇ ಕುಟುಂಬದವರಾಗುತ್ತಾರೆ. ಆದ್ದರಿಂದ   ನಿವೇಶನಕ್ಕಾಗಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅರ್ಜಿ ಸಲ್ಲಿಸಲು ಮಕ್ಕಳಿಗೆ ಅರ್ಹತೆ ಇಲ್ಲ. ಈ ನಿಯಮವನ್ನು ಕೋಳಿವಾಡ ಉಲ್ಲಂಘಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಯಾವುದೇ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ನಿವೇಶನ ಪಡೆಯಬೇಕಾದರೆ ಅವರು ನೌಕರರಾಗಿರಬೇಕು. ಸಹ ಸದಸ್ಯರಾಗಬೇಕಾದರೆ ಸದಸ್ಯತ್ವ ಪಡೆದವರು ಸ್ವ ಇಚ್ಛೆಯಿಂದ ತನ್ನ ಹೆಸರಿನ ಸದಸ್ಯತ್ವವನ್ನು ವರ್ಗಾಯಿಸಬೇಕು ಎಂದು ನಿಯಮ ಹೇಳುತ್ತದೆ. ಕೋಳಿವಾಡ ಪುತ್ರಿಯರ ಪೈಕಿ ಯಾರೊಬ್ಬರೂ ವಿಧಾನಮಂಡಲ ಸಚಿವಾಲಯದ ನೌಕರರಲ್ಲ.  ಕೋಳಿವಾಡ ಹಾಲಿ ಸಭಾಧ್ಯಕ್ಷರಾಗಿದ್ದಾರೆ ವಿನಃ ಅವರು ನೌಕರರಲ್ಲ. ಈ ವಿಷಯದಲ್ಲಿಯೂ ನಿಯಮ ಉಲ್ಲಂಘನೆಯಾಗಿದೆ.

ಒಂದೇ ದಿನ ನೋಂದಣಿ: ಕೋಳಿವಾಡ ಪುತ್ರಿಯರಾದ ಸಪ್ನಾ ಪಾಟೀಲ್, ಪ್ರತಿಭಾ ದೊಡ್ಡಮನಿ, ಸುನೀತಾ ಮೂಲಿಮನಿ ಹಾಗೂ ಸುಷ್ಮಾ ಮಂಜುನಾಥ್‌ ಅವರಿಗೆ ಒಂದೇ ದಿನ ನಿವೇಶನಗಳ ಕ್ರಯಪತ್ರ ಮಾಡಿಕೊಡಲಾಗಿದೆ. ಕ್ರಯಪತ್ರ ನೋಂದಣಿ  ಸಂಖ್ಯೆ ಕ್ರಮವಾಗಿ 5804, 5805, 5806, 5807. ನಾಲ್ವರು ಮಕ್ಕಳು ಬೇರೆ ಬೇರೆ ಕಡೆ ವಾಸಿಸುತ್ತಿದ್ದರೂ ಬೆಂಗಳೂರಿನ ಕಾರ್ಪೊರೇಶನ್‌ ಬ್ಯಾಂಕ್‌ ಶಾಖೆಯಿಂದ ಡಿಮ್ಯಾಂಡ್‌ ಡ್ರಾಫ್ಟ್‌ (ಡಿ.ಡಿ) ಪಡೆಯಲಾಗಿದೆ.

ಸುಷ್ಮಾ ಮಾತ್ರ ರಾಣಿಬೆನ್ನೂರಿನಲ್ಲಿರುವ ಕೋಳಿವಾಡ  ನಿವಾಸದ ವಿಳಾಸ ನೀಡಿದ್ದಾರೆ. ಉಳಿದ ಮೂವರು ಪುತ್ರಿಯರು ಬೆಂಗಳೂರಿನ ಆರ್‌ಎಂವಿ 2ನೇ ಹಂತದಲ್ಲಿರುವ ಎಂಎಲ್‌ಎ ಬಡಾವಣೆಯ 105 ಸಂಖ್ಯೆಯ ವಸತಿ ವಿಳಾಸವನ್ನೇ ನೀಡಿದ್ದಾರೆ. 1500 ಚದರಡಿ ಅಳತೆಯ ನಿವೇಶನಕ್ಕೆ 18.75 ಲಕ್ಷ ಹಾಗೂ 2409 ಚದರಡಿ ಅಳತೆಯ ನಿವೇಶನಕ್ಕೆ 30.10 ಲಕ್ಷ ಮೊತ್ತದಲ್ಲಿ ಕ್ರಯಪತ್ರ ಮಾಡಿಕೊಡಲಾಗಿದೆ.

ತರಾತುರಿ ನೋಂದಣಿ: ಕೆ.ಬಿ.ಕೋಳಿವಾಡ 2016ರ ಜುಲೈನಲ್ಲಿ ಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷರಾಗಿರುವ ಕೆ. ರಾಮಣ್ಣ ಅದೇ ಅವಧಿಯಲ್ಲಿ ಕೋಳಿವಾಡ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ವರ್ಗಾವಣೆಯಾದರು. ಇದಾದ ಬಳಿಕ ನಿವೇಶನ ಹಂಚಿಕೆ ಪ್ರಕ್ರಿಯೆ ವೇಗ ಪಡೆಯುತ್ತದೆ ಎಂಬುದನ್ನು  ಪತ್ರಿಕೆಗೆ ಲಭ್ಯವಾದ ದಾಖಲೆಗಳು ಹೇಳುತ್ತವೆ.

ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯಕಾರಿ ಮಂಡಳಿ ಸಭೆ 2016ರ ನವೆಂಬರ್‌ 7ರಂದು ನಡೆಯಿತು. ಈ ಸಭೆಯಲ್ಲಿ ನಿವೇಶನಗಳನ್ನು ನೋಂದಾಯಿಸಿಕೊಡುವುದು, ಹಂಚಿಕೆದಾರರಿಗೆ ಪತ್ರ ಬರೆಯುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು. ಅದಾದ ಕೇವಲ ಏಳು ದಿನಗಳಲ್ಲಿ ಅಂದರೆ 2016ರ ನವೆಂಬರ್‌ 14ರಂದು ನಾಲ್ಕು ಪುತ್ರಿಯರಿಗೆ ನಿವೇಶನ ಕ್ರಯಪತ್ರ ಮಾಡಿಕೊಡಲಾಗಿದೆ.

No Comments

Leave A Comment