Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಭಾರೀ ಅನಾಹುತ ತಪ್ಪಿಸಿದ್ದು ಟ್ರಾಫಿಕ್‌ ಜಾಮ್‌!

ಬೆಂಗಳೂರು: ರಾಜಧಾನಿಯ ಟ್ರಾಫಿಕ್‌ ಜಾಮ್‌ನಿಂದ ಆದ ಅನಾಹುತಗಳೆಷ್ಟೋ. ಆದರೆ ಅದೇ ಜಾಮ್‌ನಿಂದ ನೂರಾರು ಮಂದಿ ಜೀವ ಉಳಿದ ಘಟನೆಯೂ ನಡೆದಿದೆ. ಹನ್ನೆರಡು ವರ್ಷಗಳ ಹಿಂದೆ ನಗರದಲ್ಲಿ ಬೀಡು ಬಿಟ್ಟಿದ್ದ ಲಷ್ಕರ್‌ -ಎ- ತಯ್ಯಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಸಂಚಾರ ದಟ್ಟಣೆಯಲ್ಲಿ ಸಿಲುಕಿಹಾಕಿಕೊಂಡಿದ್ದರಿಂದ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‌ಸಿ) ಸಭಾಂಗಣದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಅನಾಹುತ ತಪ್ಪಿತ್ತು.

2005ರ ಡಿಸೆಂಬರ್‌ 28ರಂದು ಐಐಎಸ್‌ಸಿ ಮೇಲಿನ ದಾಳಿ ಕುರಿತಂತೆ ಉಗ್ರರ ನೀಲನಕ್ಷೆ ಪ್ರಕಾರ ಆ ದಿನ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಬಂದಿದ್ದವರನ್ನೆಲ್ಲ ಬಲಿ ತೆಗೆದುಕೊಳ್ಳುವುದಾಗಿತ್ತು. ಆದರೆ ಉಗ್ರರ ಸಂಚು ವಿಫ‌ಲವಾಗಲು ಕಾರಣವಾಗಿದ್ದು ‘ಟ್ರಾಫಿಕ್‌ ಜಾಮ್‌’. ಆ ದಿನ ಐಐಎಸ್‌ಸಿಗೆ ಹೊರಟಿದ್ದ ಇಬ್ಬರು ಉಗ್ರರು ಸಂಚಾರ ದಟ್ಟಣೆಯಲ್ಲಿ ಸಿಲುಕಿಹಾಕಿಕೊಂಡರು. ಇದರಿಂದ ಅವರು ಅಂದುಕೊಂಡಂತೆ ಕಾರ್ಯ ಕ್ರಮ ನಡೆಯುವಾಗಲೇ ಸಭಾಂಗಣ ಪ್ರವೇಶಿಸಿ ಗ್ರೆನೇಡ್‌ ಹಾಗೂ ಗುಂಡಿನ ದಾಳಿ ನಡೆಸಲು ಸಾಧ್ಯವಾಗಲಿಲ್ಲ. ಉಗ್ರರು ಐಐಎಸ್‌ಸಿ ಆವರಣ ಪ್ರವೇಶಿಸುವ ವೇಳೆಗೆ ಕಾರ್ಯಕ್ರಮ ಮುಗಿದು ವಿಜ್ಞಾನಿಗಳು, ವಿದೇಶಿ ಗಣ್ಯರು ಹೊರ ಬರುತ್ತಿದ್ದರು. ಕೆಲವರು ಕಾರ್ಯಕ್ರಮ ಮುಗಿಸಿ ನಿರ್ಗಮಿಸಿದ್ದರು. ಹೀಗಾಗಿ ಅವರು ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಹೆಚ್ಚಿನ ಅನಾಹುತ ತಪ್ಪಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆಗಿದ್ದೇನು?: ಐಐಎಸ್‌ಸಿ ಸಭಾಂಗಣದಲ್ಲಿ ಅಂದು ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಜ್ಞಾನಿಗಳ ಸಹಿತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಗಣ್ಯರು ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿ ಹೊಂದಿದ್ದ ಉಗ್ರರು, ಕಾರ್ಯಕ್ರಮದ ಮೊದಲ 10 ದಿನಗಳ ಹಿಂದೆಯೇ ನಗರದಲ್ಲಿ ನೆಲೆಸಿದ್ದರು. ಅವರಿಗೆ ಇದೀಗ ಬಂಧನಕ್ಕೊಳಗಾಗಿರುವ ಹಬೀಬ್‌ ಮಿಯಾ ಎಲ್ಲ ರೀತಿಯ ನೆರವು ನೀಡಿದ್ದ. ಹೇಗೆ ದಾಳಿ ನಡೆಸಬೇಕೆಂಬ ಯೋಜನೆ ಕೂಡ ಈತನೇ ಮಾಡಿದ್ದ. ಅದರಂತೆ ದಾಳಿ ನಡೆದಿತ್ತು.

ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಸದಸ್ಯ ಹಾಗೂ ದಾಳಿಯ ಮಾಸ್ಟರ್‌ ಮೈಂಡ್‌ ಎನ್ನಲಾದ ಅಬು ಹಮ್ಜಾ ಕಾರ್ಯಕ್ರಮ ಆರಂಭಕ್ಕೂ ಮೊದಲೇ ಐಐಎಸ್‌ಸಿ ಆವರಣ ಪ್ರವೇಶಿಸಿದ್ದ. ಅಲ್ಲದೇ ಕಾರ್ಯಕ್ರಮದ ಸಭಾಂಗಣದಲ್ಲಿ ಕುಳಿತುಕೊಂಡೇ ಇನ್ನಿಬ್ಬರು ಉಗ್ರರಾದ ಉತ್ತರಪ್ರದೇಶ ಮೂಲದ ಶಬ್ಟಾಬುದ್ದೀನ್‌ ಮತ್ತು ಸೈಯದ್‌ ಅನ್ಸಾರಿಗೆ ದಾಳಿಯ ರೂಪರೇಷೆ ಬಗ್ಗೆ ಸೂಚಿಸುತ್ತಿದ್ದ.

ಅದರಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಕೆಲವೇ ಕಿಲೋಮೀಟರ್‌ ದೂರದಲ್ಲಿ ಸೇನಾ ಸಮವಸ್ತ್ರದಲ್ಲಿ ಕಾರಿನಲ್ಲಿ ಗ್ರೆನೆಡ್‌ ಸಹಿತ ಶಸ್ತ್ರಾಸ್ತ್ರ ಜತೆ ಬರುತ್ತಿದ್ದ ಉಗ್ರರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರು. ಇದನ್ನು ತಿಳಿದ ಆತಂಕಕ್ಕೊಳಗಾದ ಅಬು ಹಮ್ಜಾ ಕಾರ್ಯಕ್ರಮ ಕೊನೆ ಹಂತದಲ್ಲಿದ್ದು, ಕೂಡಲೇ ಬರುವಂತೆ ಪದೇ ಪದೇ ಸೂಚಿಸುತ್ತಿದ್ದ.

ಕೊನೆಗೆ ಸಂಚಾರ ದಟ್ಟಣೆಯಿಂದ ಪಾರಾಗಿ ವಿಜ್ಞಾನ ಸಂಸ್ಥೆಯ ಆವರಣ ಪ್ರವೇಶಿಸಿದ ಉಗ್ರರು, ಕಾರಿನಲ್ಲಿ ಬರುತ್ತಿದ್ದಂತೆ ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದ ಗಣ್ಯರ ಮೇಲೆ ಗ್ರೆನೆಡ್‌ ಎಸೆದು ಆಗ ಎದ್ದ ದಟ್ಟ ಹೊಗೆಯಲ್ಲಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ವಿಜ್ಞಾನಿ ಪ್ರೊ| ಮನೀಷ್‌ ಚಂದ್ರ ಪೂರಿ ಸಾವನ್ನಪ್ಪಿದರು. 6-7 ಮಂದಿ ಗಾಯಗೊಂಡಿದ್ದರು. ಒಂದು ವೇಳೆ ಉಗ್ರರು ಸಂಚಾರ ದಟ್ಟಣೆಯಲ್ಲಿ ಸಿಲುಕಿರದಿದ್ದರೆ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ದೊಡ್ಡ ಮಟ್ಟದ ದಾಳಿಯನ್ನೇ ನಡೆಸುತ್ತಿದ್ದರು. ಉಗ್ರರು ಬಿಟ್ಟು ಹೋದ ಕಾರಿನಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳು ಅಷ್ಟು ಪ್ರಮಾಣದಲ್ಲಿದ್ದವು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ಥಾನಕ್ಕೆ ಪರಾರಿ: ದಾಳಿ ನಡೆಸಿದ ಬಳಿಕ ಉಗ್ರರು ಐಐಎಸ್‌ಸಿ ಗೋಡೆ ಹಾರಿ, ಅಲ್ಲಿ ಮೊದಲೇ ನಿಲ್ಲಿಸಲಾಗಿದ್ದ ಜಿಪ್ಸಿ ವಾಹನದ ಮೂಲಕ ದೇವನಹಳ್ಳಿಗೆ ಹೋಗಿ ಸೇನಾ ಸಮವಸ್ತ್ರ  ಕಳಚಿ ಅಲ್ಲಿಂದ ಮುಂಬಯಿಗೆ ತೆರಳಿ ಅಬು ಹಮ್ಜಾ ಜತೆ ಪಾಕಿಸ್ಥಾನಕ್ಕೆ ಪರಾರಿಯಾಗಿದ್ದರು. ಕೆಲವು ವರ್ಷಗಳ ಬಳಿಕ, ಉಗ್ರ ಸಂಘಟನೆ ಉತ್ತರ ಪ್ರದೇಶದ ಸಿಐಎಸ್‌ಎಫ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿ ಇದೇ ತಂಡವನ್ನು ಉತ್ತರಪ್ರದೇಶಕ್ಕೆ ಕಳುಹಿಸಿತ್ತು. ದಾಳಿ ನಡೆಸಿದ ಅನಂತರ ತನಿಖೆ ನಡೆಸಿದ ಪೊಲೀಸರು, ಶಬ್ಟಾಬುದ್ದೀನ್‌ ಮತ್ತು ಸೈಯದ್‌ ಅನ್ಸಾರಿಯನ್ನು ಬಂಧಿಸಿದ್ದರು. ಆದರೆ ಅಬು ಹಮ್ಜಾ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಹಬೀಬ್‌ ಮಿಯಾಗೆ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆದ ದಾಳಿಯ ಬಗ್ಗೆ ಮೊದಲೇ ಗೊತ್ತಿತ್ತು. ದಾಳಿಯ ಪ್ರತಿ ಹಂತದಲ್ಲೂ ಈತನ ಪಾತ್ರ ಪ್ರಮುಖವಾಗಿದೆ. ಲಷ್ಕರ್‌-ಎ-ತಯ್ಯಬಾ ಸಹಿತ ಕೆಲವು ಉಗ್ರ ಸಂಘಟನೆಗಳ ಭಾರತೀಯ ಸ್ಲೀಪರ್‌ಸೆಲ್‌ ಆಗಿದ್ದ ಈತ, ಉಗ್ರ ಸಂಘಟನೆಗಳ ದಾಳಿಗೂ ಮೊದಲು ಪ್ಲಾನ್‌ ಸಿದ್ಧಪಡಿಸುತ್ತಿದ್ದ. ಸಂಸ್ಥೆಯ ದಾಳಿಕೋರರಿಗೆ ಸೇನಾ ಸಮವಸ್ತ್ರ, ಮೊಬೈಲ್‌, ಕಾರು ಹಾಗೂ ವಿಜ್ಞಾನ ಸಂಸ್ಥೆಯ ಕೆಲವು ದೂರದಲ್ಲೇ ವಸತಿ ವ್ಯವಸ್ಥೆ ಕೂಡ ಮಾಡಿದ್ದ. ಆದರೆ, ಯಾವುದೇ ದಾಳಿ ಸಂದರ್ಭದಲ್ಲಿ ಮಿಯಾ ಪಾಲ್ಗೊಳ್ಳುತ್ತಿರಲಿಲ್ಲ. ಅಲ್ಲದೇ ಪಾಕಿಸ್ಥಾನ, ಬಾಂಗ್ಲಾದೇಶಕ್ಕೆ ಹೋಗದೆ, ಭಾರತದಲ್ಲೇ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸುತ್ತ ಸಂಘಟನೆ ಕಾರ್ಯ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮೊದಲ ದಾಳಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆದ ಉಗ್ರರ ದಾಳಿ ರಾಜ್ಯದ ಮೊದಲ ಭಯೋತ್ಪಾದಕರ ಕೃತ್ಯ ಎನ್ನಲಾಗಿದೆ. ಈ ರೀತಿಯ ದಾಳಿಯನ್ನು ಮೊದಲ ಬಾರಿಗೆ ಕಂಡ ಬೆಂಗಳೂರು ಪೊಲೀಸರು ಇದನ್ನು ಉಗ್ರರ ದಾಳಿ ಎಂದು ಪರಿಗಣಿಸಲು ಆರಂಭದಲ್ಲಿ ಗೊಂದಲಕ್ಕೀಡಾದರು. ಅನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳ ಕೃತ್ಯ ಎಂಬುದರ ಸುಳಿವು ಸಿಕ್ಕಿತ್ತು.

No Comments

Leave A Comment