Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಓ ಗಂಡಸರೇ ನೀವೆಷ್ಟು ಒಳ್ಳೆಯವರು?

ಎಲ್ಲರ ಕಣ್ಣೆದುರೇ ಆ ಪುಟ್ಟ ಹುಡುಗಿ ಕಟ್ಟಡದ ಮೇಲಿಂದ ಬಿದ್ದು ಸತ್ತಿರುತ್ತಾಳೆ. ಅವಳ ಸಾವಿಗೆ ಕಾರಣ ಯಾರು? ಅವರು, ಇವರು ಎಂದು ಚರ್ಚೆ ನಡೆಯುವ ಹೊತ್ತಿನಲ್ಲಿ, ಅವಳು ಮಾತಾಡುತ್ತಾಳೆ. ರಶ್ಮಿನ ಸಾಯಿಸಿದ್ದು ನಮ್ಮ ಭಯ ಮತ್ತು ಅಸಹಾಯಕತೆ … ಆಗ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ ಎನ್ನುವುದಕ್ಕಿಂತ, ತಮ್ಮ ಸ್ಥಿತಿಯ ಅರಿವಾಗುತ್ತದೆ. ಸರಿ, ಮುಂದೇನು ಮಾಡುವುದು ಎಂಬ ಪ್ರಶ್ನೆ ಎದ್ದಾಗ, ಅವಳೇ ಹೇಳುತ್ತಾಳೆ. “ಒಂದೋ ಆಚೆ ಹೋಗೋಣ. ಇಲ್ಲಾ ಇಲ್ಲೇ ಹೋರಾಟ ಮಾಡಿ ಸಾಯೋಣ …’ ಅಂತ.

ಅಷ್ಟೇ ಅಲ್ಲ, “ಇದೇ ಕೊನೆಯ ರಾತ್ರಿ, ಯೋಚನೆ ಮಾಡಿ …’ ಎಂದು ಡೆಡ್‌ಲೈನ್‌ ಸಹ ಕೊಡುತ್ತಾಳೆ. ಅಲ್ಲಿಗೆ ಅವರಿಗಿರುವುದು ಎರಡೇ ಆಯ್ಕೆಗಳು. ಒಂದೊ ವೇಶ್ಯಾವಟಿಕೆಯ ಜಾಲದಲ್ಲೇ ಇದ್ದು ಕೊಳೆಯಬೇಕು, ಇಲ್ಲ ಅಲ್ಲಿಂದ ಸಿಡಿದೇಳಬೇಕು. ಇವೆರೆಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅವರೆಲ್ಲಾ ಎನ್ನುವುದೇ ಚಿತ್ರದ ಕಥೆ. “ಉರ್ವಿ’ ಒಂದು ವೇಶ್ಯಾವಟಿಕೆಯ ಜಾಲದ ಕುರಿತಾದ ಕಥೆ. ಈ ಜಾಲದಲ್ಲಿ ಅಮಾಯಕ ಮತ್ತು ಅಸಹಾಯಕ ಹೆಣ್ಮಕ್ಕಳು ಹೇಗೆ ಸಿಲುಕುತ್ತಾರೆ ಮತ್ತು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ ಎಂಬುದನ್ನು ಹೇಳುವ ಕಥೆ.

ವೇಶ್ಯಾವಟಿಕೆಯ ವಿಷಯವಾಗಿ ಹಲವು ಚಿತ್ರಗಳು ಬಂದಿವೆ ಮತ್ತು ಅಲ್ಲೆಲ್ಲಾ ಒಬ್ಬ ಹೀರೋ ಮುಂದೆ ನಿಂತು, ಆ ಜಾಲವನ್ನು ಬೇಧಿಸುವುದರ ಜೊತೆಗೆ, ಹೆಣ್ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಆದರೆ, ಇಲ್ಲಿ ಹಾಗಿಲ್ಲ. ಜಾಲಕ್ಕೆ ಸಿಕ್ಕಿಕೊಳ್ಳುವುದರಿಂದ, ಅದರಿಂದ ಹೊರಗೆ ಬರುವವರೆಗೂ ಎಲ್ಲವನ್ನೂ ಮಹಿಳೆಯರೇ ಮಾಡುತ್ತಾರೆ. ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವನ್ನು ಬ್ರಾಂಡ್‌ ಮಾಡುವಂತಿಲ್ಲ. ಮಹಿಳೆಯರನ್ನೇ ಪ್ರಧಾನವಾಗಿಟ್ಟುಕೊಂಡು, ಪುರುಷ ಸಮಾಜವನ್ನು ತಿದ್ದುವಂತಹ ಚಿತ್ರ ಇದು ಎಂದರೆ ತಪ್ಪಿಲ್ಲ.

ಹೆಣ್ಮಕ್ಕಳು ವೇಶ್ಯಾವಟಿಕೆಯ ಜಾಲಕ್ಕೆ ಬೀಳುತ್ತಾರೇನೋ ಹೌದು. ಆದರೆ, ಅದಕ್ಕೆ ಕಾರಣರ್ಯಾರು, ಆ ಜಾಲವನ್ನು ನಿಯಂತ್ರಿಸುವುದ್ಯಾರು ಎಂಬ ಪ್ರಶ್ನೆಗೆ ಸಿಗುವ ಉತ್ತರ ಮತ್ತದೇ ಪುರುಷರು ಎಂದು. ಬೇರೆಯವರ ಮನೆಯ ಹೆಣ್ಮಕ್ಕಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವಂತಹ ಜನ, ತಮ್ಮ ಮನೆಯ ಹೆಣ್ಮಕ್ಕಳನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ ಎಂಬ ಹೊಸ ಕಲ್ಪನೆಯಿರುವ ಚಿತ್ರ “ಉರ್ವಿ’. ಬಹುಶಃ ಈ ಕಲ್ಪನೆಯೇ ಚಿತ್ರದ ಹೈಲೈಟು ಎಂದರೆ ತಪ್ಪಲ್ಲ. ಇದೊಂದು ಕಲ್ಪನೆ ಇರದಿದ್ದರೆ, ವೇಶ್ಯಾವಟಿಕೆಯ ಜಾಲದ ವಿರುದ್ಧ ಸಮರ ಸಾರುವಂತಹ ಇನ್ನೊಂದು ಕಮರ್ಷಿಯಲ್‌ ಚಿತ್ರ ಇದಾಗಿಬಿಡುತಿತ್ತು.

ಆದರೆ, ಅದೇ ಕಥೆಯನ್ನು ಹೊಸ ಕಲ್ಪನೆಯಿಂದ ನೋಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರದೀಪ್‌ ವರ್ಮ. ಇಲ್ಲಿ ಅವರು ವೇಶ್ಯಾವಟಿಕೆಯಲ್ಲಿ ತೊಡಗಿರುವ ಹೆಣ್ಮಕ್ಕಳ ಮನಸ್ಥಿತಿಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆಯೇ ಹೊರತು, ಅಲ್ಲಿನ ಗ್ಲಾಮರ್‌, ಮೈಮಾಟ, ಅಂಗಾಂಗ ಪ್ರದರ್ಶನ ಯಾವುದರ ಬಗ್ಗೆಯೂ ಹೇಳುವುದಕ್ಕೆ ಹೋಗಿಲ್ಲ. ಅಂಥದ್ದೇನಾದರೂ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದವರಿಗೆ ಚಿತ್ರ ನಿರಾಶೆಯಾಗಬಹುದು. ಹಾಗಾಗಿ ಇದು ಆ ಮನಸ್ಥಿತಿಯ ಚಿತ್ರವಲ್ಲ ಎಂಬುದು ಗೊತ್ತಿರಲಿ.

ಮೊದಲೇ ಹೇಳಿದಂತೆ, “ಉರ್ವಿ’ ಚಿತ್ರದ ಶಕ್ತಿ ಇರುವುದು ಆ ಕಲ್ಪನೆಯಲ್ಲಿ ಮತ್ತು ಅದು ಬರುವುದು ಚಿತ್ರದ ಕೊನೆಯಲ್ಲಿ. ಆದರೆ, ಅದಕ್ಕೂ ಮುನ್ನ ಮೂವರು ಅಸಹಾಯಕ ಹೆಣ್ಮಕ್ಕಳು ವೇಶ್ಯಾವಾಟಿಕೆಗೆ ಬರುವ ಕಥೆ ಹೇಳುತ್ತದೆ. ಬಹುಶಃ ಈ ಸಂದರ್ಭದಲ್ಲಿ ಪ್ರದೀಪ್‌ ವರ್ಮ, ಇನ್ನಷ್ಟು ಗಟ್ಟಿ ಚಿತ್ರಕಥೆ ಮಾಡಿಕೊಳ್ಳಬೇಕಿತ್ತು ಎಂದರೆ ತಪ್ಪಿಲ್ಲ. ಅದರಲ್ಲೂ ಮೊದಲಾರ್ಧ, ಅಲ್ಲೊಂಚೂರು, ಇಲ್ಲೊಂಚೂರು ಎಂದು ಕಥೆ ಹರಿದು ಹೋಗುತ್ತದೆ. ಇಂಟರ್‌ವೆಲ್‌ ನಂತರ ಚಿತ್ರದ ಕಥೆಗೆ ಒಂದು ರೂಪ ಬರುತ್ತದೆ. ಅಷ್ಟರಲ್ಲಿ ಮೂವರು ಹೆಣ್ಮಕ್ಕಳು ಒಂದು ಕಡೆ ಸೇರಾಗಿರುತ್ತದೆ.

ಯಾರ್ಯಾರು ಏನೇನು ಎಂಬುದು ಪ್ರೇಕ್ಷಕರಿಗೆ ಸ್ಪಷ್ಟವಾಗಿರುತ್ತದೆ. ಅಲ್ಲಿಂದ ಚಿತ್ರಕ್ಕೊಂದು ವೇಗ ಮತ್ತು ರೂಪ ಬರುತ್ತದೆ. ಅದನ್ನು ಕೊನೆಯವರೆಗೂ ಕ್ಯಾರಿ ಮಾಡಿದ್ದಾರೆ ಪ್ರದೀಪ್‌ ವರ್ಮ. ಇಂಥ ಚಿತ್ರಗಳಲ್ಲಿ ಸಾಕಷ್ಟು ಹಿಂಸಾಚಾರ ಇರುತ್ತದೆ. ಆದರೆ, ಇಲ್ಲಿ ಹಿಂಸಾಚಾರ ಎನ್ನುವುದಕ್ಕಿಂತ ಬೌದ್ಧಿಕವಾದ ಹಿಂಸಾಚಾರವಿದೆ. ಅದರಲ್ಲೂ ಕೊನೆಯ ಕೆಲವು ನಿಮಿಷಗಳು ಮಾತ್ರ, ಪ್ರತಿಯೊಬ್ಬ ಪುರುಷನನ್ನೂ ಯೋಚನೆಗೆ ಹಚ್ಚುವಂತಾಗುತ್ತದೆ. ತಪ್ಪು ಮಾಡಿರಲಿ, ಮಾಡದಿರಲಿ ಒಟ್ಟಿನಲ್ಲಿ ಎಲ್ಲರನ್ನೂ ಬಡಿದಬ್ಬಿಸಿದಂತಾಗುತ್ತದೆ. ಆ ಮಟ್ಟಿಗೆ ಪ್ರದೀಪ್‌ ವರ್ಮ ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ.

“ಉರ್ವಿ’ಯ ಇನ್ನೊಂದು ಪ್ಲಸ್‌ ಪಾಯಿಂಟು ಎಂದರೆ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಆನಂದ್‌ ಸುಂದರೇಶ್‌ ಅವರ ಛಾಯಾಗ್ರಹಣ ಮತ್ತು ಮನೋಜ್‌ ಜಾರ್ಜ್‌ ಅವರ ಹಿನ್ನೆಲೆ ಸಂಗೀತ ಚಿತ್ರದ ಮೂಡ್‌ಗೆ ತಕ್ಕ ಹಾಗಿದೆ. ಕೆಲವು ಲೆಂಥಿ ಶಾಟ್‌ಗಳನ್ನು ರೂಪಿಸಿದ್ದಾರೆ ಪ್ರದೀಪ್‌. ಅದರಲ್ಲೂ ಮೂರು ದೃಶ್ಯಗಳು ಹಲವು ನಿಮಿಷಗಳ ಕಾಲ ಇದೆ. ಆ ಸಂದರ್ಭದಲ್ಲಿ ಎಲ್ಲಾ ಕಲಾವಿದರಿಗೂ ಅಭಿನಯಿಸುವುದಕ್ಕೆ ಒಳ್ಳೆಯ ವೇದಿಕೆ ಸಿಕ್ಕಿದೆ. ಅಭಿನಯದ ವಿಷಯಕ್ಕೆ ಬರುವುದಾದರೆ, ಚಿತ್ರದ ಅಚ್ಚರಿ ಶ್ವೇತಾ ಪಂಡಿತ್‌.

ಶ್ವೇತಾ ಇಷ್ಟು ಚೆನ್ನಾಗಿ ಅಭಿನಯಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಇನ್ನು ಶ್ರುತಿ ಹರಿಹರನ್‌, ಭವಾನಿ ಪ್ರಕಾಶ್‌ ಮತ್ತು ಅಚ್ಯುತ್‌ ಕುಮಾರ್‌ ಮೂವರ ಅಭಿನಯವೂ ಮೆಚ್ಚುಗೆ ಪಡೆಯುತ್ತದೆ. ಭವಾನಿ ಮತ್ತು ಅಚ್ಯುತ್‌ ಕೆಲವು ಕಡೆ ಅತಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದನಿಸಬಹುದು. ಆದರೂ ಅವರ ಪಾತ್ರ ನೆನಪಿನಲ್ಲುಳಿಯುತ್ತವೆ. “ಉರ್ವಿ’ ಒಂದು ಬೇರೆ ರೀತಿಯ ಪ್ರಯತ್ನ. ಸ್ವಲ್ಪ ಓರೆಕೋರೆಗಳನ್ನು ಮನ್ನಿಸಿ ಬಿಟ್ಟರೆ, ಒಳ್ಳೆಯ ಪ್ರಯತ್ನವೂ ಹೌದು.

ಚಿತ್ರ: ಉರ್ವಿ
ನಿರ್ಮಾಣ: ಬಿ.ಆರ್‌.ಪಿ. ಭಟ್‌
ನಿರ್ದೇಶನ: ಪ್ರದೀಪ್‌ ವರ್ಮ
ತಾರಾಗಣ: ಶ್ರುತಿ ಹರಿಹರನ್‌, ಶ್ರದ್ಧಾ ಶ್ರೀನಾಥ್‌, ಶ್ವೇತಾ ಪಂಡಿತ್‌, ಭವಾನಿ ಪ್ರಕಾಶ್‌, ಅಚ್ಯುತ್‌ ಕುಮಾರ್‌ ಮುಂತಾದವರು

No Comments

Leave A Comment