Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ರಾಜ್ಯ ಹೆದ್ದಾರಿಗಳಲ್ಲಿ ಟೋಲ್-ಸಚಿವ ಸಂಪುಟ ನಿರ್ಧಾರ: ಶೀಘ್ರ ಅಧಿಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಮತ್ತು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌) ಅಡಿ  ಅಭಿವೃದ್ಧಿಪಡಿಸಿರುವ 19 ರಾಜ್ಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ (ಟೋಲ್‌) ಸಂಗ್ರಹಿಸುವ ಪ್ರಸ್ತಾವಕ್ಕೆ  ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಟೋಲ್‌ ಸಂಗ್ರಹಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಆರ್‌ಡಿಸಿಎಲ್‌ ಮತ್ತು ಕೆಶಿಪ್‌ ಯೋಜನೆಯಡಿ ಒಟ್ಟು 1,530 ಕಿ.ಮೀ ಉದ್ದದ 19 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿವೆ. ಈ ರಸ್ತೆಗಳಲ್ಲಿ ಟೋಲ್‌ ಸಂಗ್ರಹಿಸುವ ಪ್ರಸ್ತಾವ ಈ ಹಿಂದೆಯೇ ಇತ್ತು. ಸರ್ಕಾರ ಈಗ ಒಪ್ಪಿಗೆ ನೀಡಿರುವುದರಿಂದ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುತ್ತದೆ.
ಟೋಲ್‌ ಸಂಗ್ರಹಿಸುವ ಸಂಸ್ಥೆಯನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ಕೆಶಿಪ್‌ ಅಂತಿಮಗೊಳಿಸಲಿದೆ. ಟೋಲ್‌ ಎಷ್ಟಿರಬೇಕೆಂದು ಇನ್ನೂ ನಿಗದಿಯಾಗಿಲ್ಲ. ಈ ಎಲ್ಲ ಪ್ರಕ್ರಿಯೆಗಳಿಗೆ ಕಾಲಾವಕಾಶ ಬೇಕಾಗಲಿದೆ ಎಂದು ತಿಳಿದುಬಂದಿದೆ.

‘ಸುಪ್ರೀಂ’ಗೆ ಮರು ಪರಿಶೀಲನಾ ಅರ್ಜಿ
ಬಡ್ತಿ ಮೀಸಲಾತಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ 2002 ಕಾಯ್ದೆಯನ್ನು ರದ್ದುಪಡಿಸಿ ಸುಪ್ರೀಂಕೋರ್ಟ್‌ ಫೆ. 9ರಂದು ನೀಡಿರುವ ಆದೇಶ ಮರು ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಲ್ಲದೆ, ಆರು ತಿಂಗಳ ಅವಧಿಗೆ ಎಲ್ಲ ಇಲಾಖೆಗಳಲ್ಲಿ ನೌಕರರ ಬಡ್ತಿ ತಡೆ ಹಿಡಿಯುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಮರುಪರಿಶೀಲನಾ ಅರ್ಜಿಗೆ ಪೂರಕವಾಗಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ  ಸಾಮಾಜಿಕ, ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸುವ ಹೊಣೆಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ  ಸೂಚಿಸಲಾಗಿದೆ. ಈ ಅಂಕಿಅಂಶಗಳು ಈಗಾಗಲೇ ಆಯೋಗದ ಬಳಿ ಲಭ್ಯವಿವೆ ಎಂದು ಗೊತ್ತಾಗಿದೆ.

ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲನೆಗೆ ಮೂರು ತಿಂಗಳ ಕಾಲಾವಕಾಶ ಇದೆ. ಮರು ಪರಿಶೀಲನಾ ಅರ್ಜಿ ತಿರಸ್ಕೃತವಾದರೆ  ಆದೇಶ ಪಾಲನೆ ಸಾಧ್ಯವಾಗುವಂತೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್‌)ಯಲ್ಲಿ ವಿಶೇಷ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಯಿತು.

‘ಸ್ವಚ್ಛ ಭಾರತ್‌ ಮಿಷನ್‌’ ಅಡಿಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ ಕೊರತೆಯಾಗುವ ₹ 9,667 ಅನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಸದ್ಯ ಕೇಂದ್ರ ₹ 4 ಸಾವಿರ ಮತ್ತು ರಾಜ್ಯ ಸರ್ಕಾರ ₹1333 ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಶೌಚಾಲಯ ನಿರ್ಮಾಣಕ್ಕೆ ₹ 15 ಸಾವಿರ ವೆಚ್ಚವಾಗುತ್ತಿರುವುದರಿಂದ ಹೆಚ್ಚುವರಿಯಾಗಿ ತಗಲುವ ಒಟ್ಟು ₹ 173 ಕೋಟಿಯನ್ನು ರಾಜ್ಯ ಸರ್ಕಾರ ತುಂಬಿಕೊಡಲಿದೆ ಎಂದೂ ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

*  ಕೆಆರ್‌ಡಿಸಿಎಲ್‌,  ಕೆಶಿಪ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ರಸ್ತೆಗಳು

*  ರಸ್ತೆಗಳ ಒಟ್ಟು ಉದ್ದ 1,530 ಕಿ.ಮೀ

* ಟೋಲ್‌  ನಿಗದಿ ಆಗಿಲ್ಲ

No Comments

Leave A Comment