Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಮೋದಿ ಆಯ್ಕೆ: ಯುಪಿ ಮುಖ್ಯಮಂತ್ರಿ ಪಟ್ಟಕ್ಕೆ ಮನೋಜ್‌ ಸಿನ್ಹಾ ?

ಹೊಸದಿಲ್ಲಿ : ಭಾರತೀಯ ಜನತಾ ಪಕ್ಷಕ್ಕೆ ಪ್ರಚಂಡ ವಿಜಯವನ್ನು ದೊರಕಿಸಿಕೊಟ್ಟಿರುವ ಉತ್ತರ ಪ್ರದೇಶದ ಜನತೆಯ ಆಶೋತ್ತರಗಳಿಗೆ ತಕ್ಕುದಾದ ಸರಕಾರವನ್ನು ನೀಡುವ ಬದ್ಧತೆಯಲ್ಲಿ ಪ್ರಧಾನಿ ಮೋದಿ ಅವರು ಐಐಟಿ-ಬಿಎಚ್‌ಯು ಹಳೆವಿದ್ಯಾರ್ಥಿಯಾಗಿರುವ ಹಾಲಿ ಕೇಂದ್ರ ಸಹಾಯಕ ರೈಲ್ವೇ ಮತ್ತು ಸಂಪರ್ಕ ಸಚಿವ ಮನೋಜ್‌ ಸಿನ್ಹಾ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಪದಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಕಂಡುಬರುತ್ತಿವೆ.

ನಾಳೆ ಶನಿವಾರ ಲಕ್ನೋದಲ್ಲಿ ಬಿಜೆಪಿ ಶಾಸಕಾಂಗ ಪಕ್ಷ  ಸಭೆ ಸೇರಲಿದ್ದು ಅಲ್ಲಿ ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು, “ಮಿಸ್ಟರ್‌ ಕ್ಲೀನ್‌’ ಮನೋಜ್‌ ಸಿನ್ಹಾ ಅವರನ್ನೇ ಸರ್ವಾನುಮತದಿಂದ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯ ಉನ್ನತ ಪದಕ್ಕೆ ಆಯ್ಕೆ ಮಾಡಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಜಾತಿ ಪ್ರಜ್ಞೆಯೇ ತೀವ್ರವಾಗಿರುವ ಉತ್ತರ ಪ್ರದೇಶ ರಾಜಕಾರಣದಲ್ಲಿ ಮೇಲ್ಜಾತಿಯ ಭೂಮಿಹಾರ ಸಮುದಾಯಕ್ಕೆ ಸೇರಿದ ಸಿನ್ಹಾ ಅವರನ್ನು ಮುಖ್ಯಮಂತ್ರಿ ಪದಕ್ಕೆ ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜಾತಿಗಿಂತಲೂ ಮಿಗಿಲಾಗಿ ಅರ್ಹತೆ, ಪ್ರತಿಭೆ, ಬದ್ಧತೆ, ಉತ್ತರದಾಯಿತ್ವ ಮೊದಲಾದ ಉತ್ತಮ ಆಡಳಿತೆಯ ಗುಣಗಳಿಗೆ ಆದ್ಯತೆ ನೀಡಲು ಬಯಸಿರುವುದು ಸ್ಪಷ್ಟವಿದೆ ಎಂದು ವರದಿಗಳು ಹೇಳಿವೆ.

ರಾಜ್ಯದ ಅಭಿವೃದ್ಧಿಯಲ್ಲಿ ಸಮಾಜದ ಎಲ್ಲ ಜಾತಿ-ವರ್ಗದ ಜನರಿಗೆ ಸಮಾನ ಹಕ್ಕು ಇದೆ ಎಂಬುದನ್ನು ತೋರಿಸಿಕೊಡುವ ಮೂಲಕ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ತನ್ನ ಮಂತ್ರವನ್ನು ಅರ್ಥಪೂರ್ಣಗೊಳಿಸುವ ದಿಶೆಯಲ್ಲಿ ಪ್ರಧಾನಿ ಮೋದಿ ಅವರು ಸಿನ್ಹಾ ಅವರನ್ನು ಮುಖ್ಯಮಂತ್ರಿ ಪದಕ್ಕೆ ಆಯ್ಕೆ ಮಾಡಲಿರುವುದಾಗಿ ವರದಿಗಳು ಹೇಳಿವೆ.

ಸಿನ್ಹಾ ಅವರು ಗಾಜೀಪುರದ ನಿವಾಸಿಯಾಗಿದ್ದು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿ (1980ರ ದಶಕದ ಆದಿಯಲ್ಲಿ ) ಮಿಂಚಿದವರು. 90ರ ದಶಕದಲ್ಲಿ ಅವರು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಈಗ ಗಾಜೀಪುರದ ಸಂಸದರಾಗಿರುವ ಹಾಲಿ ಅವಧಿ ಸೇರಿದಂತೆ ಅವರು ಮತ್ತೆ ಎರಡು ಬಾರಿ ಅವರು ಲೋಕಸಭೆಗೆ ಚುನಾಯಿತರಾಗಿದ್ದರು.

No Comments

Leave A Comment