Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪರಿಸರ ಸಂರಕ್ಷಣೆ ಆದ್ಯ ಕರ್ತವ್ಯ- ಜಿಲ್ಲಾ ನ್ಯಾಯಾಧೀಶರು

ಉಡುಪಿ: ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛ, ಸುಂದರ ಮತ್ತು ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಟಿ.ವೆಂಕಟೇಶ್ ನಾಯ್ಕ್ ತಿಳಿಸಿದ್ದಾರೆ.

ಅವರು ಮಂಗಳವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ ಸಹಯೋಗದಲ್ಲಿ ನಡೆದ, ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತೀಚೆಗೆ ಪರಿಸರ ಮಾಲಿನ್ಯ ಅಧಿಕವಾಗುತ್ತಿದೆ, ನಮ್ಮ ಸುತ್ತಲಿನ ಪರಿಸರದ ಸರಿಯಾದ ನಿರ್ವಹಣೆ, ನೈರ್ಮಲ್ಯ ಕಾಪಾಡಿ ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ, ಸಂವಿಧಾನದಲ್ಲಿ ಸಹ ಈ ಕುರಿತು ತಿಳಿಸಲಾಗಿದೆ, ನಾಗರೀಕರು ಸಂವಿಧಾನ ತಮಗೆ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ್ರ ಮಾತನಾಡದೆ, ಕರ್ತವ್ಯಗಳನ್ನೂ ಸಹ ನಿರ್ವಹಿಸಬೇಕು , ನಾಡಿನ ನೈಸರ್ಗಿಕ ಪರಿಸರ, ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರತಿಯೊಬ್ಬ ನಾಗರೀಕರ ಕರ್ತವ್ಯ, ಪರಿಸರ ಸಂರಕ್ಷಣೆಯ ಸಲುವಾಗಿಯೇ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿದೆ, ಸ್ವಚ್ಛತೆಯಿದ್ದಲ್ಲಿ ಶಿಸ್ತು ಮತ್ತು ಆರೋಗ್ಯ ಇರುತ್ತದೆ, ಇದರಿಂದ ಆರೋಗ್ಯಯುತ ಸಮಾಜ, ದೇಶ ನಿರ್ಮಾಣ ಸಾಧ್ಯ, ಮಕ್ಕಳಲ್ಲಿ ಶಾಲಾ ಹಂತದಲ್ಲಿಯೇ ಪರಿಸರ ಸಂರಕ್ಷಣೆಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಕಾರ್ಕಳ ಪೆರ್ಲಾಜೆಯ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ಬಹುಮಾನ ಮತ್ತು 30,000 ರೂ.ಗಳ ಚೆಕ್ ನ್ನು ಜಿಲ್ಲಾ ನ್ಯಾಯಧೀಶರು ವಿತರಿಸಿದರು.
ಜಿಲ್ಲೆಯಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದಾಗ ಜಿಲ್ಲೆಯ 307 ಶಾಲೆಗಳಿಂದ ಅರ್ಜಿಗಳು ಬಂದಿದ್ದು, ಅರ್ಜಿಗಳ ಪರಿಶೀಲನೆ ನಂತರ, 33 ಶಾಲೆಗಳನ್ನು ಆಯ್ಕೆ ಮಾಡಿ, 45 ದಿನಗಳ ಅಂತರದಲ್ಲಿ ಶಾಲೆಗಳಿಗೆ ಖುದ್ದು ಭೇಟಿ ನೀಡಿ, ಪ್ರಶಸ್ತಿ ಆಯ್ಕೆಗೆ ನಿಗಧಿಪಡಿಸಿದ್ದ ವಿವಿಧ ಮಾನದಂಡಗಳ ಪ್ರಕಾರ ಅಂತಿಮವಾಗಿ 21 ಶಾಲೆಗಳನ್ನು ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಅರವಿಂದ ಹೆಬ್ಬಾರ್ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು.

ಮೂಲಭೂತ ಕರ್ತವ್ಯಗಳು ಮತ್ತು ಪರಿಸರ ಕುರಿತು ನ್ಯಾಯವಾದಿ ಹಮ್ಜತ್ ಎಚ್.ಕೆ ಉಪನ್ಯಾಸ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ , ಅಪರ ಜಿಲ್ಲಾಧಿಕಾರಿ ಅನುರಾಧ, ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಡಿಡಿಪಿಐ ದಿವಾಕರ ಶೆಟ್ಟಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿಯ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಹೆಚ್.ಲಕ್ಷ್ಮಿಕಾಂತ ಸ್ವಾಗತಿಸಿದರು. ರಾಜೇಂದ್ರ ಬೆಳ್ಮಣ್ ನಿರೂಪಿಸಿದರು.

No Comments

Leave A Comment